ರಾಜ್ಯದ 15 ಕಡೆ ಸ್ಮಾರ್ಟ್ ಕಿಯೋಸ್ಕ್‌ಗಳ ಸ್ಥಾಪನೆ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 27- ರಾಜ್ಯದ 15 ಕಡೆ ಸ್ಮಾರ್ಟ್ ಕಿಯೋಸ್ಕ್‍ಗಳನ್ನು ಸ್ಥಾಪನೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ವಿಧಾನಸೌಧದಲ್ಲಿ ಕೋವಿಡ್ ಪರೀಕ್ಷೆಗೆ ಸಂಚಾರಿ ಸ್ಮಾರ್ಟ್ ಕಿಯೋಸ್ಕ್ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ 15 ಕಡೆ ಸ್ಮಾರ್ಟ್ ಕಿಯೋಸ್ಕ್‍ಗಳನ್ನು ಸ್ಥಾಪನೆ ಮಾಡುವುದರಿಂದ ಪರೀಕ್ಷೆ ಮಾಡಲು ಹೆಚ್ಚಿನ ಅನುಕೂಲವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ರಾಷ್ಟ್ರದಲ್ಲೇ ಕರ್ನಾಟಕ ಕೊರೊನಾ ತಡೆಗಟ್ಟುವಲ್ಲಿ ಪ್ರಥಮ ಸ್ಥಾನದಲ್ಲಿದ್ದೇವೆ. ಇದಕ್ಕಾಗಿ ಸಚಿವರು, ಅಧಿಕಾರಿಗಳು, ಸಂಘ-ಸಂಸ್ಥೆಗಳು, ಸಾರ್ವಜನಿಕರು ವಾರಿಯರ್ಸ್‍ಗಳನ್ನು ವಿಶೇಷವಾಗಿ ಅಭಿನಂದಿಸುತ್ತೇನೆ ಎಂದರು.

ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ತಡೆಗಟ್ಟುವಲ್ಲಿ ನಮ್ಮ ಸರ್ಕಾರ ಯಶಸ್ವಿಯಾಗಿದೆ. ದೇಶದಲ್ಲೇ ಕೊರೊನಾ ಪರೀಕ್ಷೆಯಲ್ಲಿ ನಾವು ಮೊದಲ ಸ್ಥಾನದಲ್ಲಿದ್ದೇವೆ. ಇದಕ್ಕಾಗಿ ಶ್ರಮಿಸಿದವರನ್ನು ಅಭಿನಂದಿಸುವುದಾಗಿ ಹೇಳಿದರು.

ಸರ್ಕಾರದ ಜತೆ ಕೈ ಜೋಡಿಸಿದ ಸ್ಮಾರ್ಟ್ ಕಿಯೋಸ್ಕ್ ಇತರೆ ಖಾಸಗಿ ಕಂಪೆನಿಗಳಿಗೆ ಮಾದರಿಯಾಗಿದೆ. ಇದನ್ನು ಎಲ್ಲರೂ ಪಾಲನೆ ಮಾಡಲಿ ಎಂದು ಕಿವಿಮಾತು ಹೇಳಿದರು. ನಾವು ಕೋವಿಡ್ ಜತೆ ಬದುಕಬೇಕಾಗಿದೆ. ರಾಜ್ಯದಲ್ಲಿ ಕೊರೊನಾ ಬಂದ ಕಾರಣ ಸಾಕಷ್ಟು ಸಮಸ್ಯೆಗಳು ಎದುರಾಗಿವೆ.

ಹೊರರಾಜ್ಯದಿಂದ ಜನರು ಬರುತ್ತಿರುವುದರಿಂದ ಇಂತಹ ವ್ಯತ್ಯಾಸಗಳು ಉಂಟಾಗುವುದು ಸರ್ವೆ ಸಾಮಾನ್ಯ. ಅವರೆಲ್ಲರಿಗೂ ಉಳಿಯಲು ವ್ಯವಸ್ಥೆ ಕಲ್ಪಿಸಬೇಕಿರುವುದರಿಂದ ವಸತಿ ಸಮಸ್ಯೆ ಎದುರಾಗಿದೆ. ಕೇಂದ್ರಕ್ಕೆ ಬರೆದಿರುವ ಪತ್ರದಲ್ಲಿ ಇದನ್ನು ಗಮನಕ್ಕೆ ತರಲಾಗಿದೆ ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ್ ಮಾತನಾಡಿ, ಕೋವಿಡ್ ಸೋಂಕು ನಮ್ಮನ್ನು ಬಿಟ್ಟು ಹೋಗುವುದಿಲ್ಲ. ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು ಎಂದು ಸಲಹೆ ಮಾಡಿದರು. ರಾಜ್ಯ ಸರ್ಕಾರ ಕೊರೊನಾ ವೈರಸ್ ಸೇರಿದಂತೆ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿದೆ.

ಈ ಬಗ್ಗೆ ಜನರಿಗೆ ಯಾವುದೇ ಆತಂಕ ಬೇಡ. ಎಲ್ಲ ಪರಿಸ್ಥಿತಿಯನ್ನೂ ಎದುರಿಸಲು ಎರಡು ತಿಂಗಳಿನಿಂದಲೇ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು. ಕೊರೊನಾ ಪರೀಕ್ಷೆಯಲ್ಲಿ ನಾವು ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದೇವೆ. ಬೆಂಗಳೂರು ಕೊರೊನಾ ತಡೆಗಟ್ಟುವಲ್ಲಿ ದೇಶದಲ್ಲೇ ಮಾದರಿ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮುಂದಿನ ದಿನಗಳಲ್ಲಿ ಆದಷ್ಟು ಶೂನ್ಯ ಸ್ಥಿತಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಸರ್ಕಾರ ಘೋಷಣೆ ಮಾಡಿರುವ ಪ್ಯಾಕೇಜ್‍ನಲ್ಲಿ ಕೆಲವು ಸಣ್ಣಪುಟ್ಟ ಗೊಂದಲಗಳು ಉಂಟಾಗಿರಬಹುದು. ಆದರೆ, ಎಲ್ಲವೂ ಪಾರದರ್ಶಕವಾಗಿರಲಿ ಎಂಬ ಕಾರಣಕ್ಕಾಗಿ ಹಂತ ಹಂತವಾಗಿ ಹಣ ಬಿಡುಗಡೆ ಮಾಡುತ್ತಿದ್ದೇವೆ. ಯಾವ ಸಮುದಾಯಗಳನ್ನೂ ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದು ಅಶ್ವತ್ಥ ನಾರಾಯಣ್ ಸ್ಪಷ್ಟಪಡಿಸಿದರು.

ಯಾವ ಸಮುದಾಯಕ್ಕೆ ಪ್ಯಾಕೇಜ್ ತಲುಪಿಲ್ಲ ಅವರನ್ನು ಗುರುತಿಸಿ ಪರಿಹಾರ ನೀಡುತ್ತೇವೆ. ಕೆಲವು ಸಮುದಾಯಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಈಗಾಗಲೇ ಪ್ಯಾಕೇಜ್ ಘೋಷಿಸಿದ್ದಾರೆ. ಉಳಿದವರಿಗೂ ಆದಷ್ಟು ಬೇಗ ತಲುಪಿಸುವ ಕೆಲಸ ಮಾಡಲಿದ್ದೇವೆ.

ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಹಿಂದುಳಿದ ವರ್ಗಗಳ ಇಲಾಖೆ ಕಾರ್ಯದರ್ಶಿ ಜತೆ ನಾನೇ ಈ ಕುರಿತು ಚರ್ಚಿಸಿದ್ದೇನೆ. ಕೆಲವು ವಲಯಗಳಿಂದ ಹೆಚ್ಚುವರಿ ಸೆಸ್ ಸಂಗ್ರಹಣೆ ಮಾಡುವ ಮೂಲಕ ಕೈ ಬಿಟ್ಟ ಸಮುದಾಯಗಳಿಗೆ ಪರಿಹಾರ ಕೊಡುವ ಪ್ರಯತ್ನ ಮಾಡುವುದಾಗಿ ಹೇಳಿದರು.

Facebook Comments