ಜೂನ್ ವೇಳೆಗೆ ಕರ್ನಾಟಕ ಸಹಜ ಸ್ಥಿತಿಗೆ : ಸಿಎಂ ಯಡಿಯೂರಪ್ಪ ವಿಶ್ವಾಸ
ಬೆಂಗಳೂರು, ಮೇ 27- ಲಾಕ್ಡೌನ್ನಿಂದ ಮುಚ್ಚಿರುವ ದೇವಸ್ಥಾನ ಹಾಗೂ ಮಾಲ್ಗಳನ್ನು ಪುನರರಾಂಭ ಮಾಡುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಜೂನ್ ತಿಂಗಳಿನಿಂದ ರಾಜ್ಯದಲ್ಲಿ ಎಲ್ಲವೂ ಸಹಜ ಸ್ಥಿತಿಗೆ ಬರಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಸ್ಥಾನ ಗಳನ್ನು ತೆರೆಯಲು ಈಗಾಗಲೇ ತೀರ್ಮಾನಿಸಲಾಗಿದೆ. ದೇವಸ್ಥಾನಗಳು ಪ್ರಾರಂಭವಾದರೆ, ಮಸೀದಿ , ಚರ್ಚ್ ಸೇರಿದಂತೆ ಎಲ್ಲ ಮಂದಿರಗಳು ಪ್ರಾರಂಭವಾಗುತ್ತವೆ.
ಇದರಲ್ಲಿ ಯಾವುದೇ ಆತಂಕ ಯಾರಿಗೂ ಬೇಡ. ದೇಶದ ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ತಿಳಿಯಬೇಕು ಎಂದು ಪರೋಕ್ಷವಾಗಿ ವಿರೋಧ ಪಕ್ಷದವರಿಗೆ ತಿರುಗೇಟು ನೀಡಿದರು. ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದಲ್ಲಿ ದೇವಸ್ಥಾನ, ಹೊಟೇಲ್, ಮಾಲ್ಗಳನ್ನು ಮುಚ್ಚಲಾಗಿತ್ತು. ನಾವು ಪುನರಾಂಭ ಮಾಡಬೇಕೆಂದರೆ, ಕೇಂದ್ರದ ಅನುಮತಿ ಅಗತ್ಯ.
ಈ ಹಿನ್ನಲೆಯಲ್ಲಿ ಸರ್ಕಾರದ ವತಿಯಿಂದ ನಾವು ಈಗಾಗಲೇ ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದೇವೆ.ನಾವು ಅವರ ಉತ್ತರಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳಿದರು. ಜೂನ್ ತಿಂಗಳಿನಿಂದ ರಾಜ್ಯದಲ್ಲಿ ಎಲ್ಲವೂ ಸಹಜ ಸ್ಥಿತಿಗೆ ಬರುವ ವಿಶ್ವಾಸವಿದೆ.ಕೇಂದ್ರ ಸರ್ಕಾರ ನಮಗೆ ಅನುಮತಿ ನೀಡಬಹುದು. ಎಲ್ಲವನ್ನೂ ಕೇಂದ್ರವೇ ನಿರ್ಧಾರ ಮಾಡುವುದರಿಂದ ನಾವು ಅವರ ಸೂಚನೆಯನ್ನು ಪಾಲನೆ ಮಾಡಬೇಕಾಗಿದೆ ಎಂದು ಹೇಳಿದರು.
ಹೊಟೇಲ್ಗಳನ್ನು ತೆರೆಯಬೇಕೆಂಬ ಒತ್ತಡ ಬಂದಿದೆ. ಹೊಟೇಲ್ ಇಲ್ಲದಿದ್ದರೆ, ಜನರಿಗೆ ವಸತಿ ಸಮಸ್ಯೆ ಉಂಟಾಗಲಿದೆ.ಇದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದೆ. ಒಂದೆರಡು ದಿನಗಳಲ್ಲಿ ಕೇಂದ್ರದಿಂದ ಸಿಹಿ ಸುದ್ದಿ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅಲ್ಲಿನ ಧರ್ಮಧಿಕಾರಿಯವರು ಭಕ್ತರಿಗಾಗಿ ಕೆಲವು ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ. ದೇವಸ್ಥಾನ ತೆರೆದರೂ ಅಲ್ಲಿಗೆ ಬರುವ ಭಕ್ತರಿಗೆ ತಂಗಲು ಅವಕಾಶ ನೀಡುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಇನ್ನು ಸರ್ಕಾರ ಘೋಷಣೆ ಮಾಡಿರುವ ವಿಶೇಷ ಪ್ಯಾಕೇಜ್ ಬಗ್ಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ನಾವು ಫಲಾನುಭವಿಗಳಿಗೆ ಹಂತಹಂತವಾಗಿ ಹಣ ಬಿಡುಗಡೆ ಮಾಡುತ್ತಿದ್ದೇವೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಗೊಂದಲ ಇದ್ದರೆ ಅದು ವಿರೋಧ ಪಕ್ಷದವರಲ್ಲಿ ಮಾತ್ರ ಎಂದು ತಿರುಗೇಟು ನೀಡಿದರು. ಹಣಕಾಸು ಇಲಾಖೆ ವತಿಯಿಂದ ಈಗಾಗಲೇ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಬಿಡುಗಡೆ ಮಾಡಲಾಗುತ್ತಿದೆ. ಇಲಾಖೆ ವತಿಯಿಂದ ಯಾರ್ಯಾರಿಗೆ ಹಣ ನೀಡಬೇಕೋ ಎಂಬುದರ ಪಟ್ಟಿಯನ್ನು ಸಿದ್ದಪಡಿಸಲಾಗಿದೆ.
ಇದರಲ್ಲಿ ಯಾರಿಗೂ ಅನ್ಯಾಯವಾಗಬಾರದೆಂಬ ಕಾರಣಕ್ಕಾಗಿ ಸ್ವಲ್ಪ ನಿಧಾನವಾದರೂ ಸರಿಯೇ, ಹಂತಹಂತವಾಗಿ ಹಣ ಬಿಡುಗಡೆಯಾಗಲಿದೆ ಎಂದು ಹೇಳಿದರು.ನಾವು ದೇವರು ಮೆಚ್ಚುವ ರೀತಿ ಕೆಲಸ ಮಾಡುತ್ತಿದ್ದೇವೆ. ಹಣಕಾಸು ಇಲಾಖೆ ಈಗಾಗಲೇ ಮಾಡಬೇಕಾದ ಕೆಲಸವನ್ನು ಮಾಡುತ್ತಿದೆ. ಎಳ್ಳೂಷ್ಟು ಗೊಂದಲಕ್ಕೆ ಅವಕಾಶ ಇಲ್ಲದಂತೆ ಜನರಿಗೆ ಪರಿಹಾರ ನೀಡುವುದಾಗಿ ವಾಗ್ದನ ಮಾಡಿದರು.
ಈಗಾಗಲೇ ಎಲ್ಲಾ ಸಮೂದಾಯಕ್ಕೂ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪುನಃ ಯಾವುದೇ ಸಮೂದಾಯಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.