ನಾಗಮೋಹನ್‍ದಾಸ್ ವರದಿ ಬಂದ ನಂತರ ಮೀಸಲಾತಿ ಪರಿಷ್ಕರಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, -ಪರಿಶಿಷ್ಟ ಜಾತಿ, ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಲು ನ್ಯಾಯಮೂರ್ತಿ ನಾಗಮೋಹನ್‍ದಾಸ್ ನೇತೃತ್ವದ ಏಕಸದಸ್ಯ ಆಯೋಗದ ವರದಿ ಬಂದ ನಂತರ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಕ್ವೆಂಟ್ ಹಾಲ್‍ನಲ್ಲಿಂದು ಹಮ್ಮಿಕೊಂಡಿದ್ದ ರಾಜ್ಯಮಟ್ಟದ 6ನೇ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆದಷ್ಟು ಶೀಘ್ರವಾಗಿ ಆಯೋಗದ ವರದಿ ನೀಡುವಂತೆ ಸಮಿತಿಗೆ ಕೋರಲಾಗುವುದು ಎಂದರು.

ಮುಂದಿನ ಫೆಬ್ರವರಿಯಲ್ಲಿ ರಾಜ್ಯ ಬಜೆಟ್ ಮಂಡಿಸಲಿದ್ದು, ವಾಲ್ಮೀಕಿ ಸಮುದಾಯಕ್ಕೆ ಹೆಚ್ಚಿನ ಕಾರ್ಯಕ್ರಮ ಘೋಷಿಸಲಾಗುವುದು. ಗೌರವಯುತವಾಗಿ ಬದುಕು ನಡೆಸಲು ಅನುಕೂಲಕರ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದರು. ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಗ್ರಂಥ ಉತ್ಕøಷ್ಟ ಕೃತಿಯಾಗಿದ್ದು ನೂರಾರು ಭಾಷೆಗಳಿಗೆ ತರ್ಜುಮೆಯಾಗಿ ವಿಶ್ವಮಾನ್ಯವಾಗಿದೆ. ಮನುಕುಲದ ಸಮಸ್ಯೆಗಳಿಗೆ ಒಂದಲ್ಲ ಒಂದು ಪರಿಹಾರ ಇದರಲ್ಲಿದೆ.

ಶ್ರೇಷ್ಠ ದಾರ್ಶನಿಕರಾದ ವಾಲ್ಮೀಕಿ ಸಮಬಾಳು, ಸಮಾನ ಅವಕಾಶ, ವರ್ಗರಹಿತ ಸಮಾಜ ನಿರ್ಮಾಣಕ್ಕೆ ಆದ್ಯತೆ ನೀಡಿದ್ದಾರೆ. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಜಯಂತಿ ಆಚರಣೆ ಸಾರ್ಥಕವಾಗುತ್ತದೆ. ಸಮುದಾಯ ಸುಶಿಕ್ಷಿತವಾದಾಗಲೇ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ನ್ಯಾಯಮೂರ್ತಿ ನಾಗಮೋಹನ್‍ದಾಸ್ ನೇತೃತ್ವದ ಏಕಸದಸ್ಯ ಆಯೋಗ ಎರಡು ತಿಂಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿಗೆ ಸಂಬಂಧಪಟ್ಟಂತೆ ವರದಿ ನೀಡಲಿದೆ. ವರದಿ ಬಂದ ಬಳಿಕ ಮೀಸಲಾತಿಯಲ್ಲಿ ಪರಿಷ್ಕರಣೆಯಾಗಲಿದೆ ಎಂದು ತಿಳಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವು ಯೋಜನೆಗಳು ಶೋಷಿತ ವರ್ಗದ ಅಭಿವೃದ್ಧಿಗಾಗಿಯೇ ಇದೆ. ಕೇಂದ್ರ ಸರ್ಕಾರ ಹೊಗೆ ರಹಿತ ಮನೆ ಇರಬೇಕೆಂದು 8 ಕೋಟಿ ಕುಟುಂಬಗಳಿಗೆ ಎಲ್‍ಪಿಜಿ ಸಂಪರ್ಕ ಕಲ್ಪಿಸಿದ್ದು, ಇನ್ನೂ 4 ಕೋಟಿ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಯೋಜನೆ ಇದೆ ಎಂದು ವಿವರಿಸಿದರು.

ರಾಜ್ಯದ 22 ಜಿಲ್ಲೆಗಳು ಹಾಗೂ 100ಕ್ಕೂ ತಾಲ್ಲೂಕುಗಳಲ್ಲಿ ಪ್ರವಾಹ ಉಂಟಾಗಿದ್ದು, ತಾಂಡಾಗಳ ಅಭಿವೃದ್ಧಿಗೊಳಿಸಲು, ಹೊಸ ಗ್ರಾಮಗಳನ್ನು ನಿರ್ಮಿಸಲು ಸರ್ಕಾರ ಸಂಕಲ್ಪ ಮಾಡಿದೆ. ಶೋಷಿತರಿಗೆ, ತುಳಿತಕ್ಕೊಳಗಾದವರಿಗೆ ನ್ಯಾಯ ಒದಗಿಸುವ ಕೆಲಸ ಸರ್ಕಾರದಿಂದ ಮಾಡಲಾಗುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕೆಲವೇ ಕೆಲವು ಜಯಂತಿ ಆಚರಣೆಯಲ್ಲಿದ್ದವು. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾದ ಮೇಲೆ ವಾಲ್ಮೀಕಿ ಸೇರಿದಂತೆ ಋಷಿ ಮುನಿಗಳು, ಸಂತರ ಜಯಂತಿಗಳನ್ನು ಆಚರಣೆಗೆ ತಂದರು. ಪರಿಶಿಷ್ಟ ಜಾತಿ, ಪಂಗಡದವರ ಕಲ್ಯಾಣಕ್ಕಾಗಿ 30 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಬಜೆಟ್‍ನಲ್ಲಿ ಒದಗಿಸಲಾಗಿದೆ. 3.71 ಲಕ್ಷ ವಿದ್ಯಾರ್ಥಿಗಳಿಗೆ ಹಾಸ್ಟೆಲ್, ವಸತಿ ಶಾಲೆಗಳ ಮೂಲಕ ಶಿಕ್ಷಣ ಕೊಡಲಾಗುತ್ತಿದೆ. ಪ್ರತಿಭಾವಂತರನ್ನು ಗುರುತಿಸಿ ಗೌರವಿಸಲಾಗಿದೆ ಎಂದು ತಿಳಿಸಿದರು.

ಶಾಸಕ ರಾಜುಗೌಡ ಮಾತನಾಡಿ, ವಾಲ್ಮೀಕಿ ಸಮುದಾಯಕ್ಕೆ ಪ್ರತ್ಯೇಕ ಸಚಿವಾಲಯ ಜಾರಿಗೆ ತರಬೇಕು. ಶೇ.7.5ರಷ್ಟು ಮೀಸಲಾತಿ ಸೌಲಭ್ಯ ಇವರಿಗೆ ಒದಗಿಸಬೇಕು ಎಂದು ಒತ್ತಾಯಿಸಿದರು. ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಹೆಸರಿನಲ್ಲಿ ಸಂಘಟನೆಯಾಗುತ್ತಿದ್ದು, ರಾಜ್ಯಾದ್ಯಂತ ಇಂದು ಶ್ರದ್ಧಾಭಕ್ತಿಯಿಂದ ಜಯಂತಿ ಆಚರಿಸಲಾಗುತ್ತಿದೆ. ಜನಸಂಖ್ಯೆಗನುಗುಣವಾಗಿ ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಾತಿ ಸೌಲಭ್ಯ ಕೊಡುವಂತೆ ಮನವಿ ಮಾಡಿದರು.

ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಡಾ.ನಿರಂಜನ್, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಿ.ಕುಮಾರ್‍ನಾಯ್ಕ್, ಪರಿಶಿಷ್ಟ ಜಾತಿ, ಪಂಗಡದ ಉಪಯೋಜನೆ ಸಮಿತಿ ಸಲಹೆಗಾರರಾದ ಡಾ.ಇ.ವೆಂಕಟಯ್ಯ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

Facebook Comments