ಸಸ್ಯಕಾಶಿಯಲ್ಲಿ ಮೇಳೈಸಿವೆ ವಿವೇಕಾನಂದರ ಪುತ್ಥಳಿಗಳು, ಲಾಲ್‍ಬಾಗ್‍ನಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.17-ಲಾಲ್‍ಬಾಗ್‍ನಲ್ಲಿ ಎತ್ತ ನೋಡಿದರತ್ತ ಸ್ವಾಮಿ ವಿವೇಕಾನಂದರ ಪುತ್ಥಳಿಗಳು, ಅವರು ಭಾಷಣ ಮಾಡುತ್ತಿದ್ದ ವೇದಿಕೆಗಳು ಅನಾವರಣಗೊಂಡಿದ್ದು, ಸಾರ್ವ ಜನಿಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.  ಕನ್ಯಾ ಕುಮಾರಿಯಲ್ಲಿರುವ ಸ್ವಾಮಿ ವಿವೇಕಾನಂದ ಸ್ಮಾರಕದ ಮಾದರಿಯಲ್ಲಿ ಗಾಜಿನ ಮನೆಯ ಮಧ್ಯಭಾಗದಲ್ಲಿ 8್ಡ040 ಅಡಿ ವಿಸ್ತೀರ್ಣದಲ್ಲಿ ವಿವೇಕಾನಂದರ ಸ್ಮಾರಕ ನಿರ್ಮಿಸಲಾಗಿದ್ದು, ಇದಕ್ಕೆ ವಿವಿಧ ಬಗೆಯ 1.6 ಲಕ್ಷ ಹೂವುಗಳ ಬಳಕೆ ಮಾಡಿಕೊಳ್ಳಲಾಗಿದೆ.

ಕನ್ಯಾಕುಮಾರಿಯ ವಿವೇಕಾನಂದ ಶಿಲೆಯ ಮಾದರಿಗೆ ಲಿಲಿಯಮ್ಸ್, ಹೆಲಿಕೋನಿಯಾ ಸಾಂಗ್ ಆಫ್ ಇಂಡಿಯಾ, ಸಾಂಗ್ ಆಫ್ ಜಮೈಕಾದ ಹೂವುಗಳನ್ನು ಬಳಸಿಕೊಳ್ಳಲಾಗಿದೆ.
ಕೋಲ್ಕತ್ತಾದ ಬೇಲೂರು ಮಠದ ಸ್ವಾಮಿ ವಿವೇಕಾನಂದ ದೇವಾಲಯದ ಮಾದರಿಯನ್ನು ಪ್ರದರ್ಶನದ ಮುಖ್ಯ ಸ್ಮಾರಕದ ಮುಂಭಾಗದಲ್ಲಿ ನಿರ್ಮಿಸಲಾಗಿದೆ.

ಪುಷ್ಪ ನಮನ ಸಲ್ಲಿಸಲು ಎರಡೂವರೆ ಅಡಿ ಎತ್ತರದ ಸ್ವಾಮಿ ವಿವೇಕಾನಂದ ಪುತ್ಥಳಿಯನ್ನು ಸ್ಥಾಪಿಸಲಾಗಿದೆ. ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಭಾಷಣದ ವೇದಿಕೆ ನಿರ್ಮಾಣಕ್ಕೆ 1.5 ಲಕ್ಷ ಹೂಗಳನ್ನು ಬಳಕೆ ಮಾಡಲಾಗಿದೆ. ಸ್ವಾಮಿ ವಿವೇಕಾನಂದರು ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಮೆಜೆಸ್ಟಿಕ್ ಬಳಿಯ ಕಾಳಪ್ಪ ಛತ್ರದ ಕಲ್ಲಿನ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದ ಮಾದರಿಯನ್ನು 1್ಡ313 ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಲಾಗಿದೆ.

ಗಾಜಿನ ಮನೆಯ ಎಲ್ಲಾ 10 ಮೂಲೆಗಳಲ್ಲೂ ಹೂಗಳ ಪಿರಮಿಡ್ ನಡುವೆ ವಿವೇಕಾನಂದರ ಉಬ್ಬು ಶಿಲ್ಪಗಳನ್ನು ಇಡಲಾಗಿದೆ.3 ಅಡಿ ಎತ್ತರದ ರಾಮಕೃಷ್ಣ ಪರಮಹಂಸರು, ಶಾರದಾದೇವಿ ಮತ್ತು ವಿವೇಕಾನಂದರು ಆಸೀನರಾಗಿರುವ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಗಾಜಿನ ಮನೆಯ ಹೊರಭಾಗದಲ್ಲಿ 13 ಅಡಿ ಎತ್ತರದ ವಿವೇಕ ವೃಕ್ಷ ಇದೆ.

ಹೂವಿನ ಕುಂಡಗಳ ಮಧ್ಯೆ ಪುಟ್ಟ ಮಕ್ಕಳಿಗೆ ಸ್ವಾಮಿ ವಿವೇಕಾನಂದರಂತೆ ವೇಷಭೂಷಣ ತೊಡಿಸಿ ನಿಲ್ಲಿಸಿರುವುದಂತೂ ಎಲ್ಲರ ಗಮನ ಸೆಳೆಯಿತು. ವಯಸ್ಕರಿಗೆ 70 ರೂ. ಪ್ರವೇಶ ಶುಲ್ಕವಿದ್ದರೆ, 12 ವರ್ಷದೊಳಗಿನ ಮಕ್ಕಳಿಗೆ 20 ರೂ. ಪ್ರವೇಶ ದರ ನಿಗದಿಪಡಿಸಲಾಗಿದೆ.

Facebook Comments