ಅರ್ಹ ಶಾಸಕರೊಂದಿಗೆ ಮುಖ್ಯಮಂತ್ರಿ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.24-ಮುಖ್ಯಮಂತ್ರಿ ಯಡಿಯೂರಪ್ಪ ವಿದೇಶದಿಂದ ಆಗಮಿಸುತ್ತಿರುವ ಬೆನ್ನಲ್ಲೇ ಇಂದು ಸಂಜೆ ಶಾಸಕರ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ. ಸಚಿವ ಸಂಪುಟ ವಿಸ್ತರಣೆಯಾಗದೆ ಒಳಗೊಳಗೆ ಮುನಿಸಿಕೊಂಡಿರುವ ಶಾಸಕರು ಸಿಎಂ ಅವರನ್ನು ಭೇಟಿಯಾಗಿ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕೆಂಬ ಬೇಡಿಕೆಯನ್ನು ಇಡಲಿದ್ದಾರೆ.

ಅದರಲ್ಲು ಕಾಂಗ್ರೆಸ್-ಜೆಡಿಎಸ್‍ನಿಂದ ಹೊರಬಂದು ಉಪಚುನಾವಣೆಯಲ್ಲಿ ಗೆದ್ದಿರುವ 11 ಮಂದಿ ಶಾಸಕರಾದ ಎಸ್.ಟಿ.ಸೋಮಶೇಖರ್, ಕೆ.ಗೋಪಾಲಯ್ಯ, ಬಿ.ಸಿ.ಪಾಟೀಲ್, ಭೈರತಿ ಬಸವರಾಜ್, ಕೆ.ಸಿ.ನಾರಾಯಣಗೌಡ ಸೇರಿದಂತೆ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆ ಕಾಂಕ್ಷಿಗಳು ಸಂಪುಟ ವಿಸ್ತರಣೆಗೆ ಸಮಯವನ್ನು ನಿಗದಿಪಡಿಸುವಂತೆ ಒತ್ತಡ ಹಾಕಲಿದ್ದಾರೆ.

ದಾವೋಸ್‍ಗೆ ತೆರಳುವ ಮುನ್ನ ತಾವು ಸ್ವದೇಶಕ್ಕೆ ಹಿಂತಿರುಗಿದ ಎರಡೇ ದಿನದಲ್ಲೇ ಸಂಪುಟ ವಿಸ್ತರಣೆ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಈಗ ಅದರಂತೆ ನಡೆದುಕೊಳ್ಳಬೇಕೆಂದು ಶಾಸಕರು ಬಿಗಿ ಪಟ್ಟು ಹಿಡಿಯಲಿದ್ದಾರೆ. ಉಪಚುನಾವಣೆ ನಡೆದು ಒಂದೂವರೆ ತಿಂಗಳಾದರೂ ಸಂಪುಟ ವಿಸ್ತರಣೆಯಾಗದಿರುವುದು ಕೆಲವರಲ್ಲಿ ಬೇಸರ ಉಂಟು ಮಾಡಿದೆ. ಬಹಿರಂಗವಾಗಿ ಯಾರೊಬ್ಬರು ಹೇಳಿಕೆ ಕೊಡದಿದ್ದರೂ ಆಂತರಿಕವಾಗಿ ಬಿಜೆಪಿ ನಾಯಕರ ನಡವಳಿಕೆಯ ಬಗ್ಗೆ ಒಳಗೊಳಗೆ ಕುದಿಯುತ್ತಿದ್ದಾರೆ.

ನೀವು ಯಾರನ್ನಾದರೂ ಭೇಟಿ ಮಾಡಿಕೊಳ್ಳಿ. ಬಿಜೆಪಿಗೆ ಬಂದರೆ 24 ಗಂಟೆಯೊಳಗೆ ಸಚಿವ ಸ್ಥಾನ ನೀಡುತ್ತೇನೆ ಎಂದು ಆಶ್ವಾಸನೆ ಕೊಟ್ಟಿದ್ದೀರಿ. ಅದರಂತೆ ನಮ್ಮ ನಮ್ಮ ಕ್ಷೇತ್ರಗಳಲ್ಲಿ ನಿಮ್ಮ ಮೇಲೆ ನಂಬಿಕೆ ಇಟ್ಟು ಜನತೆ ನಮ್ಮನ್ನು ಗೆಲ್ಲಿಸಿದ್ದಾರೆ. ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವುದಕ್ಕೆ ನಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ. ಹೀಗಾಗಿ ಇನ್ನಷ್ಟು ವಿಳಂಬ ಮಾಡದೆ ಎಷ್ಟು ಸಾಧ್ಯವೋ ಅಷ್ಟು ಬೇಗ ಸಂಪುಟ ವಿಸ್ತರಣೆ ಮಾಡಬೇಕೆಂದು ಬಹುತೇಕ ಶಾಸಕರ ಒತ್ತಾಯವಾಗಿದೆ.

ಸಂಜೆ 7 ಗಂಟೆಗೆ ದವಳಗಿರಿ ನಿವಾಸದಲ್ಲಿ ಶಾಸಕರು ಬಿಎಸ್‍ವೈ ಭೇಟಿಗೆ ಸಮಯವನ್ನು ನಿಗದಿಪಡಿಸಿಕೊಂಡಿದ್ದಾರೆ. ಇನ್ನು ಇದೇ ರೀತಿ ಸತಾಯಿಸಿದರೆ ನಮಗೆ ಸಚಿವ ಸ್ಥಾನದ ಅಗತ್ಯವೇ ಇಲ್ಲ ಎಂಬ ಕಟು ಸಂದೇಶವನ್ನು ಬಿಜೆಪಿ ವರಿಷ್ಠರಿಗೆ ರವಾನಿಸಲು ಸಿದ್ದರಾಗಿದ್ದಾರೆ. ಕಾಡಿಬೇಡಿ ಸಂಪುಟಕ್ಕೆ ಸೇರ್ಪಡೆಯಾಗಬೇಕಾದ ಅಗತ್ಯವಿಲ್ಲ. ನಾವು ರಾಜೀನಾಮೆ ಕೊಟ್ಟಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇದನ್ನು ಉಳಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ.

ಪದೇ ಪದೇ ನಿಮ್ಮ ಮನೆಗೆ ಬಂದು ಸಚಿವ ಸ್ಥಾನ ಕೊಡಿ ಎಂದು ಬೇಡಿಕೆ ಸಲ್ಲಿಸುವ ಅಗತ್ಯವಿಲ್ಲ. ಕೊಟ್ಟರೂ ಸರಿ ಬಿಟ್ಟರು ಸರಿ ಎಂಬ ಎಚ್ಚರಿಕೆ ಸಂದೇಶವನ್ನು ರವಾನಿಸಲು ಒಮ್ಮತ ತೀರ್ಮಾನ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಈಗ ಬಿಎಸ್‍ವೈ ಅವರಿಗೆ ಕೊಟ್ಟಿರುವ ಮಾತನ್ನು ಉಳಿಸಿಕೊಂಡು ಸಂಪುಟ ವಿಸ್ತರಣೆ ಮಾಡಲೇಬೇಕಾದ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ್ದಾರೆ.

Facebook Comments