ವಿದೇಶದಿಂದ ಆಗಮಿಸಿದ ಸಿಎಂಗೆ ಸಂಪುಟ ಸಂಕಟ ಶುರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.24- ಪದೇಪದೇ ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆ ಆಗುತ್ತಿರುವುದರಿಂದ ಆಡಳಿತಾ ರೂಢ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ವಿದೇಶದಿಂದ ಆಗಮಿಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಇದು ತಲೆನೋವಾಗಿ ಪರಿಣಮಿಸುವ ಸಾಧ್ಯತೆಯಿದೆ. ಶೀಘ್ರದಲ್ಲೇ ಸಂಪುಟ ವಿಸ್ತರಣೆ ಮಾಡುವ ಭರವಸೆಯನ್ನು ಸಿಎಂ ನೀಡಿದರೂ ನೂತನ ಶಾಸಕರಲ್ಲದೆ , ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳಲ್ಲೂ ಆಕ್ರೋಶ ಮಡುಗಟ್ಟಿದೆ.

ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವುದು ನೂತನ ಬಿಜೆಪಿ ಶಾಸಕರಲ್ಲಿ ಅಸಮಾಧಾನ ಮೂಡಿಸಿದ್ದು ಯಡಿಯೂರಪ್ಪವರನ್ನು ಭೇಟಿಯಾಗಿ ಮಾತುಕತೆ ನಡೆಸಲು ನಿರ್ಧರಿಸಿದ್ದಾರೆ.
ಉಪಚುನಾವಣೆ ಫಲಿತಾಂಶದ ಬೆನ್ನಲ್ಲೇ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದೆವು. ಆದರೆ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವುದು ಬೇಸರ ಮೂಡಿಸಿದೆ. ಈ ನಿಟ್ಟಿನಲ್ಲಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ಕುರಿತಾಗಿಯೂ ಚರ್ಚೆ ನಡೆಸಲಿದ್ದೇವೆ ಎಂದು ಹೆಸರು ಹೇಳಲು ಇಚ್ಚಿಸದ ಶಾಸಕರೊಬ್ಬರು ತಿಳಿಸಿದ್ದಾರೆ.

ಚುನಾವಣಾ ಪ್ರಚಾರ ಸಂದರ್ಭದಲ್ಲಿ ಗೆದ್ದ 24 ಗಂಟೆಯ ಒಳಗಾಗಿ ಸಚಿವರನ್ನಾಗಿ ಮಾಡಲಾಗುವುದು ಎಂದು ಸಿಎಂ ಬಹಿರಂಗವಾಗಿಯೇ ಹೇಳಿದ್ದರು. ಆದರೆ ಬಿಜೆಪಿ ಮೂಲ ಶಾಸಕರು ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿರುವುದು ಸಿಎಂ ಬಿಎಸ್ವೈ ಪಾಲಿಗೂ ತಲೆನೋವಾಗಿ ಪರಿಣಮಿಸಿದೆ. ಫೆಬ್ರವರಿ 17 ರಂದು ವಿಧಾನಸಭೆಯ ಜಂಟಿ ಅಧಿವೇಶನ ನಡೆಯಲಿದ್ದು ಅಧಿವೇಶನ ಆರಂಭಕ್ಕೂ ಮೊದಲು ಸಂಪುಟ ವಿಸ್ತರಣೆ ನಡೆಯಬೇಕು ಎಂಬುವುದು ನೂತನ ಶಾಸಕರ ಬೇಡಿಕೆಯಾಗಿದೆ.

ಈ ನಡುವೆ ಬಿಎಸ್‍ವೈ ದೆಹಲಿ ಭೇಟಿ ಪದೇಪದೇ ಮುಂದೂಡಲ್ಪಡುತ್ತಿದ್ದು, ಸಂಪುಟ ವಿಸ್ತರಣೆಗೆ ಇಟ್ಟ ಧನುರ್ಮಾಸ ಮುಹೂರ್ತ ಕಳೆದು ಇದೀಗ ಸಂಕ್ರಾಂತಿ ಮುಹೂರ್ತ ಬಂದಿದೆ. ಆದರೆ ಸಂಪುಟ ವಿಸ್ತರಣೆಯ ಮುಹೂರ್ತ ಕೈಗೂಡುತ್ತಿಲ್ಲ. ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿರುವುದು ಸಿಎಂ ಪಾಲಿಗೆ ತಲೆನೋವಾಗಿ ಮಾರ್ಪಟ್ಟಿದೆ. ಚುನಾವಣೆಯಲ್ಲಿ ಗೆದ್ದ 24 ಗಂಟೆಯೊಳಗೆ ಸಚಿವರನ್ನಾಗಿ ಮಾಡುತ್ತೇನೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ನೀಡಿದ ಭರವಸೆ ಈಡೇರುವ ಲಕ್ಷಣಗಳು ಗೋಚರಿಸುತ್ತಿಲ್ಲ.

ಇದು ವಲಸಿಗ ಬಿಜೆಪಿ ಶಾಸಕರ ಆತಂಕಕ್ಕೆ ಕಾರಣವಾಗಿದೆ. ಸಚಿವ ಸ್ಥಾನ ನೀಡುವ ದಿನಾಂಕ, ಗಡುವು ಪದೇ ಪದೇ ಮುಂದೂಡಲ್ಪಡುತ್ತಿದೆ. ಸಂಪುಟ ವಿಸ್ತರಣೆ ಕುರಿತಾಗಿ ಮಾತುಕತೆ ನಡೆಸಲು ಸಿಎಂಗೆ ಹೈಕಮಾಂಡ್ ಕೂಡ ಸಮಯ ನೀಡುತ್ತಿಲ್ಲ ಎನ್ನಲಾಗುತ್ತಿದೆ.

ಈ ಬೆಳವಣಿಗೆಗಳು ವಲಸೆ ಬಂದ ನೂತನ ಬಿಜೆಪಿ ಶಾಸಕರಲ್ಲಿ ಮತ್ತಷ್ಟು ಗೊಂದಲ ಮೂಡಿಸಿದೆ.ಐದು ದಿನಗಳಿಂದ ಅಭಿವೃದ್ಧಿ, ಹೂಡಿಕೆ, ಚರ್ಚೆಗಳಲ್ಲಿ ನಿರತರಾಗಿದ್ದ ಯಡಿಯೂರಪ್ಪ, ಸಂಪುಟ ವಿಸ್ತರಣೆ ಕಡೆಗೆ ತುರ್ತಾಗಿ ಗಮನಹರಿಸಬೇಕಿದೆ. ಸಿಎಂ ವಿದೇಶ ಪ್ರವಾಸ ಮುಗಿಸಿ ಬರಲೆಂದೇ ಸಚಿವಾಕಾಂಕ್ಷಿಗಳ ದೊಡ್ಡ ಗುಂಪು ಅವರ ಆಗಮನವನ್ನೇ ಎದುರು ನೋಡುತ್ತಿದೆ.

ವಿದೇಶ ಪ್ರವಾಸಕ್ಕೆ ತೆರಳುವ ಮುನ್ನವೇ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದು ಮೊದಲಿಗೆ ಹೇಳಿದ್ದ ಯಡಿಯೂರಪ್ಪ, ಸಂಪುಟ ವಿಸ್ತರಣೆ ಮಾಡದೆ ವಿದೇಶಕ್ಕೆ ತೆರಳಿದರು. ಹಾಗಾಗಿ ಈಗ ವಿದೇಶದಿಂದ ಬಂದ ಕೂಡಲೇ ತುರ್ತಾಗಿ ಸಂಪುಟ ವಿಸ್ತರಣೆ ಆಗಲೇಬೇಕಿದೆ. ಮಾಜಿ ಅನರ್ಹರು ಮತ್ತು ಬಿಜೆಪಿ ಹಿರಿಯ ಶಾಸಕರುಗಳ ನಡುವೆ ಸಂಪುಟ ಸ್ಥಾನಕ್ಕಾಗಿ ತೀವ್ರ ಹಗ್ಗಜಗ್ಗಾಟ ನಡೆಯುತ್ತಿದೆ.

ಕೆಲವು ದಿನಗಳ ಹಿಂದಷ್ಟೆ ಬಂದಿದ್ದ ಅಮಿತ್ ಷಾ ಸಹ ಯಡಿಯೂರಪ್ಪನವರಿಗೆ ಸಂಪುಟ ವಿಸ್ತರಣೆ ಕುರಿತು ಸೂಚನೆ ನೀಡಿ ಹೋಗಿದ್ದಾರೆ.ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಕಷ್ಟಪಟ್ಟು ಕಟ್ಟಿದ ಸರ್ಕಾರ ಬೀಳದಂತೆ ಸಂಪುಟ ವಿಸ್ತರಣೆ ಮಾಡುವ ಜವಾಬ್ದಾರಿ ಯಡಿಯೂರಪ್ಪನವರ ಮೇಲಿದೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಶಾಸಕರ ಪೈಕಿ ಗೆದ್ದ 11 ಮಂದಿಗೆ ಸಚಿವ ಸ್ಥಾನ ನೀಡುವುದಾಗಿ ಸಿಎಂ ಭರವಸೆಯನ್ನು ನೀಡಿದ್ದರು.

ಸಂಪುಟ ವಿಸ್ತರಣೆ ವಿಳಂಬ ಹಿನ್ನೆಲೆಯಲ್ಲಿ ವಲಸಿಗ ಶಾಸಕರು ಸಿಎಂ ಬಿಎಸ್ವೈಗೆ ಒತ್ತಡ ಹೇರುತ್ತಿದ್ದಾರೆ. ಶೀಘ್ರದಲ್ಲೇ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂಬ ಭರವಸೆಯನ್ನು ಬಿಎಸ್‍ವೈ ನೀಡಿದರೂ ವಲಸಿಗರಲ್ಲಿ ಅಸಮಾಧಾನ ಮೂಡುತ್ತಿದೆ. ಈ ನಡುವೆ ಗೆದ್ದ 11 ಶಾಸಕರ ಪೈಕಿ ಎಲ್ಲರಿಗೂ ಸಂಪುಟದಲ್ಲಿ ಸ್ಥಾನ ಸಿಗುವುದು ಅನುಮಾನ ಎಂಬ ವಿಚಾರಗಳು ಕೇಳಿಬರುತ್ತಿರುವುದರಿಂದ ಮತ್ತಷ್ಟು ಗೊಂದಲಕ್ಕೆ ಒಳಗಾಗಿದ್ದಾರೆ ವಲಸಿಗರು.

ಸಂಪುಟ ವಿಸ್ತರಣೆ ಮಾಡಬೇಕು ಎಂದು ನೂತನ ಶಾಸಕರು ಸಿಎಂ ಬಳಿ ಪಟ್ಟು ಹಿಡಿದಿದ್ದರೂ ಹೈಕಮಾಂಡ್‍ನಿಂದ ಇನ್ನೂ ಒಪ್ಪಿಗೆ ದೊರಕಿಲ್ಲ. ಈ ನಡುವೆ ಸಂಪುಟ ಸೇರುವ ಕುರಿತಾಗಿ ಮೂಲ ಹಾಗೂ ವಲಸಿಗ ಶಾಸಕರ ನಡುವೆ ಪೈಪೋಟಿ ತೀವ್ರ ಸ್ವರೂಪ ಪಡೆದುಕೊಂಡಿದ್ದು ಜೊತೆಗೆ ಸೋತ ವಲಸಿಗರೂ ಮಂತ್ರಿ ಸ್ಥಾನದ ಬೇಡಿಕೆ ಇಟ್ಟಿರುವುದರಿಂದ ಗೊಂದಲ ಮತ್ತಷ್ಟು ಜಟಿಲಗೊಂಡಿದೆ.

ಒಂದು ವೇಳೆ ಈ ಬಾರಿಯೂ ಸಂಪುಟ ವಿಸ್ತರಣೆ ವಿಳಂಬವಾದರೆ ನೂತನ ಬಿಜೆಪಿ ಶಾಸಕರು ಮುಂದಿನ ನಡೆ ಏನು ಎಂಬುವುದು ಕುತೂಹಲ ಕೆರಳಿಸಿದೆ. ಅನಿವಾರ್ಯವಾಗಿ ಕಾದುನೋಡುವ ತಂತ್ರಕ್ಕೆ ವಲಸಿಗರು ಮೊರೆ ಹೋಗುತ್ತಾರಾ ಅಥವಾ ಕಾಂಗ್ರೆಸ್‍ನಂತೆ ಕಮಲದಲ್ಲೂ ರೆಬೆಲ್ ಆಗ್ತಾರಾ ಎಂಬುವುದು ಸದ್ಯದ ಪ್ರಶ್ನೆ.

Facebook Comments