ಸಚಿವರು ಮತ್ತು ಶಾಸಕರಿಗೆ ಸಿಎಂ ಯಡಿಯೂರಪ್ಪ ವಾರ್ನಿಂಗ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.25- ಅನಗತ್ಯವಾಗಿ ಗೊಂದಲದ ಹೇಳಿಕೆಗಳನ್ನು ನೀಡಿ ಪಕ್ಷ ಇಲ್ಲವೇ ಸರ್ಕಾರಕ್ಕೆ ಮುಜುಗರ ಸೃಷ್ಟಿಸಿದರೆ ಅಂತಹವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಚಿವರು ಮತ್ತು ಶಾಸಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಇತ್ತೀಚೆಗೆ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಂತೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಶಾಸಕ ಸೋಮಶೇಕರ ರೆಡ್ಡಿ ಸೇರಿದಂತೆ ಕೆಲವರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸರ್ಕಾರಕ್ಕೆ ಮುಜುಗರ ತಂದಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದೆ ಯಾರಾದರು ಇಂತಹ ಗೊಂದಲದ ಹೇಳಿಕೆಗಳನ್ನು ನೀಡಿದರೆ ಅಂತಹವರ ವಿರುದ್ಧ ಶಿಸ್ತುಕ್ರಮ ಜರುಗಿಸಲು ನಾನೇ ಪಕ್ಷದ ರಾಜ್ಯಾಧ್ಯಕ್ಷರಿಗೆ ಸೂಚನೆ ಕೊಡುತ್ತೇನೆ. ಇಂತಹ ಹೇಳಿಕೆಗಳನ್ನು ಕೊಡುವುದರಿಂದ ಪಕ್ಷಕ್ಕೆ ಹಾನಿಯಾಗುತ್ತದೆಯೇ ಹೊರತು ಒಳ್ಳೆಯ ಬೆಳವಣಿಗೆಯಲ್ಲ ಎಂದು ಕಿಡಿಕಾರಿದ್ದಾರೆ.

ಕಳೆದ ರಾತ್ರಿ ತಮ್ಮ ನಿವಾಸಕ್ಕೆ ಬಂದಿದ್ದ ಕೆಲವರನ್ನು ಸ್ವತಃ ಭೇಟಿ ಮಾಡಿದ ಬಿಎಸ್‍ವೈ, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುತ್ತಿರುವವರನ್ನು ನಾವು ಮನವೊಲಿಸಬೇಕು. ಅದನ್ನು ಹೊರತು ಪಡಿಸಿ ಬಾಯಿಗೆ ಬಂದಂತೆ ಹೇಳಿಕೆ ಕೊಡುವುದು ಸರಿಯಲ್ಲ. ನಿಮ್ಮ ಹೇಳಿಕೆಗಳು ರಾಷ್ಟ್ರಮಟ್ಟದಲ್ಲಿ ಗೊಂದಲ ಸೃಷ್ಟಿಸುತ್ತಿವೆ ಎಂಬುದು ನಿಮಗೆ ಅರಿವಿದೆಯೇ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ನಿಮಗೆ ಚುನಾವಣೆಯಲ್ಲಿ ಯಾರು ಮತ ಹಾಕುತ್ತಾರೋ, ಬಿಡುತ್ತಾರೋ ಗೊತ್ತಿಲ್ಲ.ಗೆದ್ದ ಮೇಲೆ ನೀವು ಕ್ಷೇತ್ರದ ಜನಪ್ರತಿನಿಧಿಗಳು. ಜಾತಿ, ಧರ್ಮ ಯಾವುದನ್ನೂ ಪರಿಗಣಿಸದೆ ಎಲ್ಲರನ್ನೂ ಸಮಾನತೆಯಿಂದ ನೋಡಬೇಕು. ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ವಾಗ್ದಾಳಿ ನಡೆಸುವುದು, ನಿಮಗೆ ಸರ್ಕಾರದ ಸವಲತ್ತುಗಳನ್ನು ಕೊಡುವುದಿಲ್ಲ ಎಂದು ಹೇಳುವುದು ಸರಿಯಲ್ಲ. ನಿಮ್ಮ ನಡವಳಿಕೆಗಳನ್ನು ತಿದ್ದುಕೊಳ್ಳಿ ಎಂದು ಕಿವಿಮಾತು ಹೇಳಿದ್ದಾರೆ.

ಕೆಲವರು ಅನಗತ್ಯವಾಗಿ ಗೊಂದಲಗಳನ್ನು ಸೃಷ್ಟಿಸುವ ಮೂಲಕ ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರ ತರುತ್ತಿದ್ದಾರೆ. ನಾನು ಪದೇ ಪದೇ ಹೇಳಿದರೂ ನೀವು ಎಚ್ಚೆತ್ತುಕೊಳ್ಳುತ್ತಿಲ್ಲ. ನಿಮ್ಮ ಹೇಳಿಕೆಗಳನ್ನೇ ಮುಂದಿಟ್ಟುಕೊಂಡು ವಿರೋಧ ಪಕ್ಷದವರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಾರೆ. ಇದನ್ನು ನಾವು ಸಮರ್ಥಿಸಿಕೊಳ್ಳುವುದಾದರೂ ಹೇಗೆ ಎಂದು ಪ್ರಶ್ನೆ ಮಾಡಿದರು.
ಮುಂದಿನ ದಿನಗಳಲ್ಲಾದರೂ ನಿಮ್ಮ ವರ್ತನೆಗಳನ್ನು ಸರಿಪಡಿಸಿಕೊಳ್ಳಿ. ಜವಾಬ್ದಾರಿತನದಲ್ಲಿರುವ ನೀವೇ ಹೀಗೆ ವರ್ತಿಸಿದರೆ ಬೇರೆಯವರು ಹೇಗೆ ನಡೆದುಕೊಳ್ಳಬಹುದು. ಇನ್ನು ಮುಂದಾದರೂ ಇಂತಹ ಪ್ರಮಾದಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕೆಂದು ಯಡಿಯೂರಪ್ಪ ಖಡಕ್ಕಾಗಿ ಕಿವಿಮಾತು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

Facebook Comments