ಕೈಗಾರಿಕೆಗಳ ಉತ್ತೇಜನಕ್ಕಾಗಿ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.25- ಕೈಗಾರಿಕಾ ಉದ್ದೇಶಗಳಿಗೆ ಜಮೀನು ಖರೀದಿಸಲು ಅನುಕೂಲವಾಗುವಂತೆ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉನ್ನತ ಮಟ್ಟದ ಸಮಿತಿ ಹಾಗೂ ಏಕ ಗವಾಕ್ಷಿ ಮೂಲಕ 30 ದಿನಗಳಲ್ಲಿ ಅನುಮತಿ ನೀಡಲಾಗುತ್ತದೆ. ಒಂದು ವೇಳೆ ಅಷ್ಟರಲ್ಲಿ ಅನುಮತಿ ದೊರೆಯದಿದ್ದರೆ ಡೀಮ್ಡ್ ಅನುಮತಿ ಎಂದು ಪರಿಗಣಿಸಲಾಗುತ್ತದೆ.

ಕೈಗಾರಿಕೆಗೆ ಭೂಮಿ ನೀಡುವಂತೆ ರೈತರನ್ನು ಒತ್ತಾಯ ಮಾಡುವುದಿಲ್ಲ. ಸ್ವ ಇಚ್ಚೆಯಿಂದ ಮುಂದೆ ಬಂದರೆ ಅದನ್ನು ಪರಿಗಣಿಸಲಾಗುವುದು ಎಂದರು. ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಭೂ ಪರಿವರ್ತನೆಗೆ 60 ದಿನ ಕಾಲಾವಕಾಶವಿದ್ದು, ಅದನ್ನು 30 ದಿನಗಳಿಗೆ ಇಳಿಕೆ ಮಾಡಲಾಗುವುದು. ಈ ಸಂಬಂಧ ಮುಂದಿನ ಅಧಿವೇಶನದಲ್ಲಿ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಹೇಳಿದರು.

ಕೆಲವೊಂದು ಒಪ್ಪಂದಗಳಿಗೆ ಅನೌಪಚಾರಿಕ ಸಹಿ ಹಾಕಲಾಗಿದ್ದು, ರಾಜ್ಯದಲ್ಲಿ ಕೈಗಾರಿಕೆಗೆ ಇರುವ ಅವಕಾಶಗಳ ಬಗ್ಗೆ ಹೂಡಿಕೆದಾರರಿಗೆ ಮನವರಿಕೆ ಮಾಡಿಕೊಡಲಾಗಿದೆ. ರಾಜ್ಯದಲ್ಲಿ ಉದ್ಯೋಗ ಸೃಷ್ಟಿಗೂ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.  ಉದ್ಯಮಿಗಳ ಅಹವಾಲುಗಳನ್ನು ಕೂಡ ಆಹ್ವಾನಿಸಿದ್ದು, ಸಾಧ್ಯವಿರುವ ಆಡಳಿತಾತ್ಮಕ ಬದಲಾವಣೆಗಳನ್ನು ತರಲು ಉದ್ದೇಶಿಸಲಾಗಿದೆ. ಉದ್ಯಮಿಗಳಿಗೆ ವ್ಯವಹಾರ ಮಾಡಲು ಅನುಕೂಲವಾಗುವಂತೆ ಔದ್ಯೋಗಿಕ ನೀತಿಯಲ್ಲಿ ಸಮಗ್ರ ಬದಲಾವಣೆ ತರಲು ಚಿಂತನೆ ಮಾಡುತ್ತಿದ್ದೇವೆ.

ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದ ಔದ್ಯೋಗಿಕ ಬೆಳವಣಿಗೆಯಲ್ಲಿ ದೇಶದಲ್ಲಿಯೇ ಅಗ್ರ ಸ್ಥಾನದಲ್ಲಿರುವಂತೆ ಮಾಡಲಾಗುತ್ತದೆ. ಇದರಿಂದ ಯುವಕರಿಗೆ ಉದ್ಯೋಗ ದೊರೆಯುವುದರ ಜೊತೆಗೆ ಕೈಗಾರೀಕರಣದಿಂದ ರೈತರಿಗೆ ಲಾಭವಾಗಲಿ ಎಂಬುದು ನಮ್ಮ ಉದ್ದೇಶ. ರಾಜ್ಯದ ಅಭಿವೃದ್ದಿ ದೃಷ್ಟಿಯಿಂದ ಕೈಗಾರಿಕೆಗೆ ಉತ್ತೇಜನ ನೀಡಬೇಕಾಗಿದೆ ಎಂದರು.  ದಾವೋಸ್‍ನ ವಲ್ಡ್ ಎಕಾನಮಿಕ್ ಫೋರಂಗೆ ಹಿಂಜರಿಕೆಯಿಂದಲೇ ಹೋಗಿದ್ದೆವು.

ಆದರೆ ರಾಜ್ಯದ ಜನರಿಗೆ, ಯುವಕರಿಗೆ, ರೈತರಿಗೆ ಲಾಭವಾಗುವಂತಹ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ದಾವೋಸ್ ಭೇಟಿ ಫಲಪ್ರದವಾಗಿದೆ. ಸಾವಿರಾರು ಕೋಟಿ ಹಣ ರಾಜ್ಯದಲ್ಲಿ ಹೂಡಿಕೆಯಾಗುವ ವಿಶ್ವಾಸವಿದೆ. ಮುಂದಿನ ನವೆಂಬರ್‍ನಲ್ಲಿ ನಡೆಯುವ ಜಾಗತಿಕ ಹೂಡಿಕೆದಾರರ ಸಮ್ಮೇಳನದಲ್ಲಿ ಬಂಡವಾಳ ಹರಿದು ಬರುವ ಕನಸು ನನಸಾಗಲಿದೆ.  ಜಗತ್ತಿನ ಯಾವುದೇ ದೇಶ ಅಥವಾ ರಾಜ್ಯ ಮಾಡದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಮೊದಲ ಬಾರಿಗೆ ಸೆಂಟರ್ ಫಾರ್ ಇಂಟರ್‍ನೆಟ್ ಆಫ್ ಎಥಿಕಲ್ ಥಿಂಗ್ಸ್ ಒಪ್ಪಂದಕ್ಕ ಅನೌಪಚಾರಿಕ ಸಹಿ ಹಾಕಲಾಗಿದೆ.

ವಲ್ರ್ಡ್ ಎಕಾನಮಿಕ್ ಫೋರಂನ ವ್ಯವಸ್ಥಾಪಕ ಮುರತ್ ಸೋನಂ ಏಜು ಅವರೇ, ಯಾರೂ ಮಾಡದ ಕೆಲಸವನ್ನು ನೀವು ಮಾಡಿದ್ದೀರಿ. ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಯಿಂದ ದೊಡ್ಡ ಲಾಭ ತಂದುಕೊಡಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

ಸೆಂಟರ್ ಫಾರ್ ಇಂಟರ್‍ನೆಟ್ ಆಫ್ ಎಥಿಕಲ್ ಥಿಂಗ್ಸ್ ಕೇಂದ್ರವು ಕೃತಕ ಬುದ್ದಮತೆಯ ದುರುಪಯೋಗ ತಡೆಯಲು ಸಹಕಾರಿಯಾಗಲಿದೆ. ಲಕ್ಷ್ಮಿ ಮಿಥಲ್, ಅರವಿಂದ್ ಕಿರ್ಲೋಸ್ಕರ್, ಏರೋ ಸ್ಲೇಲ್ಲೋರ್, ನೆಸ್ಲೆ , ಆಲ್ಮೀಯ, ನೋವಾ ನೋಸ್ಡೆಕ್ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಕಂಪನಿಗಳ ಹೂಡಿಕೆದಾರರನ್ನು ಭೇಟಿಯಾಗಿ ಚರ್ಚೆ ನಡೆಸಲಾಗಿದೆ. ನೋವಾ ನೋಸ್ಡೆಕ್ ಕಂಪನಿಯು ಮಧುಮೇಹಿ ರೋಗಿಗಳ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಕಾರ್ಯಕ್ರಮ ರೂಪಿಸಲು ಒಪ್ಪಿಗೆ ಸೂಚಿಸಿದೆ ಎಂದು
ವಿವರಿಸಿದರು.

ಲೂಲೂ ಕಂಪನಿ 2000 ಕೋಟಿ ಬಂಡವಾಳ ಹೂಡಿಕೆಗೆ ಸಮ್ಮತಿಸಿದ್ದು, ತರಕಾರಿ, ಹಣ್ಣು, ಹೂವು, ಇತರೆ ಬೆಳೆಗಳನ್ನು ನಗರಗಳಿಗೆ ಸಾಗಾಣಿಕೆ ಮಾಡಲು ನೆಟ್‍ವರ್ಕ್ ನಿರ್ಮಾಣ ಮಾಡುತ್ತದೆ. ಇದರಿಂದ ಬೆಳೆಗಳು ಹಾಳಾಗದೆ ರೈತರಿಗೆ ಒಳ್ಳೆಯ ಬೆಲೆ ಸಿಗಲು ಸಹಕಾರಿಯಾಗಲಿದೆ ಎಂದು ಯಡಿಯೂರಪ್ಪ ಹೇಳಿದರು.  ಬೆಂಗಳೂರು ಬಿಟ್ಟು ಇತರೆ ಜಿಲ್ಲೆಗಳಲ್ಲೂ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.  ಗೋಷ್ಠಿಯಲ್ಲಿ ಮಧ್ಯಮ ಮತ್ತು ಬೃಹತ್ ಕೈಗಾರಿಕ ಸಚಿವ ಜಗದೀಶ್ ಶೆಟ್ಟರ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಉಪಸ್ಥಿತರಿದ್ದರು.

Facebook Comments