ಸಿಎಂಗೆ ದಾರಿ ತಪ್ಪಿಸುತ್ತಿದ್ದಾರೆಯೇ ಅಧಿಕಾರಿಗಳು..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.13- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಅಧಿಕಾರಿಗಳು ದಿಕ್ಕು ತಪ್ಪಿಸುತ್ತಿದ್ದಾರೋ ಇಲ್ಲವೇ ವಾಸ್ತವ ಪರಿಸ್ಥಿತಿಯನ್ನು ಮುಚ್ಚಿಡುವ ಪ್ರಯತ್ನ ನಡೆಯುತ್ತಿದೆಯೋ?! ಏಕೆಂದರೆ ಇಂತಹ ಅನುಮಾನ ಉದ್ಬವಿಸಲು ಕಾರಣ ಮುಖ್ಯಮಂತ್ರಿಯವರು ಹೇಳುತ್ತಿರುವ ಪ್ರವಾಹದಿಂದಾಗಿರುವ ನಷ್ಟದ ಅಂದಾಜು ಹಾಗೂ ವಾಸ್ತ ಚಿತ್ರಣಕ್ಕೂ ಅಜ-ಗಜಾಂತರದ ವ್ಯತ್ಯಾಸ ಕಂಡುಬರುತ್ತಿದೆ.

ಹೀಗಾಗಿಯೇ ಅಧಿಕಾರಿಗಳು ಯಡಿಯೂರಪ್ಪನವರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೋ ಇಲ್ಲವೇ ಸತ್ಯಾಂಶವನ್ನುಮರೆಮಾಚುವ ಕೆಲಸ ನಡೆಯುತ್ತಿದೆಯೇ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಕಳೆದ ಶನಿವಾರ ತಮ್ಮ ಗೃಹಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಯಡಿಯೂರಪ್ಪ 5000 ಕೋಟಿ ನಷ್ಟವಾಗಿದೆ. ತಕ್ಷಣವೇ ಕೇಂದ್ರ ಸರ್ಕಾರ 3000 ಕೋಟಿ ತುರ್ತು ಪರಿಹಾರ ನೀಡಬೇಕೆಂದು ಮನವಿ ಮಾಡಿದರು.

175 ತಾಲ್ಲೂಕುಗಳ ಪೈಕಿ 80 ತಾಲ್ಲೂಕುಗಳನ್ನು ಪ್ರವಾಹ ಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಲಾಯಿತು. ಮರುದಿನ ಪ್ರವಾಹದಿಂದಾಗಿ 10 ಸಾವಿರ ಕೋಟಿ ನಷ್ಟವಾಗಿದೆ ಎಂದು ಬಿಎಸ್‍ವೈ ಉಲ್ಟಾ ಹೊಡೆದರು. ಇತ್ತ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ದಿನವೇ ಪತ್ರಿಕಾಗೋಷ್ಟಿ ನಡೆಸಿ ಪ್ರವಾಹದ ಚಿತ್ರಣವನ್ನು ರಾಜ್ಯದ ಜನತೆಯ ಮುಂದಿಟ್ಟರು.

30 ತಾಲ್ಲೂಕುಗಳ ಪೈಕಿ 16 ಜಿಲ್ಲೆಗಳು ಪ್ರವಾಹಕ್ಕೆ ಸಿಲುಕಿವೆ. ಅಂದಾಜು ಒಂದು ಲಕ್ಷ ಕೋಟಿಗೂ ಅಧಿಕ ನಷ್ಟವಾಗಿದೆ. ಮನೆ, ಜಾನುವಾರು, ಬೆಳೆ ಸೇರಿದಂತೆ ಊಹೆಗೂ ನಿಲುಕದ ನಷ್ಟ ಉಂಟಾಗಿದೆ ಎಂದು ಹೇಳಿದ್ದರು. ಇದರ ನಡುವೆ ಅದೇ ಸಂಜೆ ಬೆಳಗಾವಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಯಡಿಯೂರಪ್ಪ ಈವರೆಗಿನ ಅಂದಾಜಿನ ಪ್ರಕಾರ 30ರಿಂದ 40 ಸಾವಿರ ಕೋಟಿ ನಷ್ಟ ಸಂಭವಿಸಿದೆ. ಕೇಂದ್ರ ಸರ್ಕಾರ 5 ಸಾವಿರ ಕೋಟಿ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯ ಅತಿವೃಷ್ಟಿ ಪ್ರದೇಶಗಳಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿಯವರು ಪ್ರವಾಹದ ನಷ್ಟ 50 ಸಾವಿರ ಕೋಟಿಗೂ ಅಧಿಕ ಎಂದು ಹೇಳಿದರು.

ಹೀಗೆ ಮುಖ್ಯಮಂತ್ರಿಯವರು ಪ್ರತಿದಿನ ಒಂದೊಂದು ಹೇಳಿಕೆ ನೀಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. 16 ಜಿಲ್ಲೆ 86 ತಾಲ್ಲೂಕುಗಳಲ್ಲಿ ನಿಖರವಾಗಿ ಎಷ್ಟು ನಷ್ಟ ಸಂಭವಿಸಿವೆ ಎಂದು ಹೇಳಲು ಯಡಿಯೂರಪ್ಪನವರಿಗೆ ಮುಜುಗರ ಏಕೆ ಎಂಬ ಪ್ರಶ್ನೆ ಕೇಳಿಬರುತ್ತಿದೆ.

ಪ್ರವಾಹ ಉಂಟಾಗಿ ಈಗಾಗಲೇ ಎರಡು ವಾರ ಮುಗಿದಿದೆ. ಅನೇಕ ಕಡೆ ಪ್ರವಾಹ ತಗ್ಗಿರುವುದರಿಂದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಏಕೆ ಸಮೀಕ್ಷೆ ನಡೆಸಬಾರದು ಎಂದು ಸಂತ್ರಸ್ತರೇ ಪ್ರಶ್ನಿಸುತ್ತಿದ್ದಾರೆ.

ಯಡಿಯೂರಪ್ಪನವರು ಅಧಿಕಾರಿಗಳು ಕೊಟ್ಟ ಗಿಳಿ ಪಾಠವನ್ನು ಮಾಧ್ಯಮದವರಿಗೆ ಒಪ್ಪಿಸದೆ ವಾಸ್ತವ ಚಿತ್ರಣ ಏನಿದೆ ಎಂಬುದನ್ನು ಅರಿಯಬೇಕು. ನಾಲ್ಕೂವರೆ ದಶಕಗಳ ನಂತರ ಭೀಕರ ಪ್ರವಾಹಕ್ಕೆ ಸಿಲುಕಿರುವ ರಾಜ್ಯದಲ್ಲಿ ಒಂದು ಲಕ್ಷ ಕೋಟಿ ಅಧಿಕ ನಷ್ಟ ಸಂಭವಿಸಿದೆ.

ನಾಲ್ಕು ಲಕ್ಷಕ್ಕೂ ಅಧಿಕ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬೆಳೆ ನಾಶವಾಗಿದೆ ಎಂಬುದು ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆ. ಆದರೆ ವಾಸ್ತವವಾಗಿ ಇದು ಒಂದು ಲಕ್ಷ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ ಎಂದು ಅಂದಾಜಿಸಲಾಗುತ್ತಿದೆ.

ಈವರೆಗೂ 48 ಮಂದಿ ಸಾವನ್ನಪ್ಪಿದ್ದಾರೆ. ಆದರೆ ಕಣ್ಮರೆಯಾಗಿರುವ ಅನೇಕರು ಇವರೆಗೂ ಪತ್ತೆಯಾಗಿಲ್ಲ .ಇದು ಕೂಡ ಕನಿಷ್ಟವೆಂದರೆ 100 ಸಂಖ್ಯೆ ದಾಟುವ ಸಾಧ್ಯತೆ ಇದೆ.  ರಸ್ತೆಗಳು, ಸೇತುವೆಗಳು, ಮನೆಗಳು ಕೊಚ್ಚಿ ಹೋಗಿರುವುದರಿಂದ ಇವುಗಳ ಪುನರ್ ನಿರ್ಮಾಣಕ್ಕೆ ಸಾವಿರಾರು ಕೋಟಿ ಹಣ ಬೇಕಾಗುತ್ತದೆ. ಈಗಿನ ಲೆಕ್ಕಾಚಾರದಂತೆ ನಷ್ಟದ ಪ್ರಮಾಣ ಒಂದು ಲಕ್ಷ ಕೋಟಿ ದಾಟುವ ಸಾಧ್ಯತೆಗಳು ಸ್ಪಷ್ಟವಾಗಿವೆ.

ಜನತೆಯ ಮುಂದೆ ವಾಸ್ತವ ಚಿತ್ರಣ ಇಟ್ಟರೆ ಪರಿಸ್ಥಿತಿ ಕೈ ಮೀರಬಹುದೆಂಬ ಹಿನ್ನೆಲೆಯಲ್ಲಿ  ಅಧಿಕಾರಿಗಳು ವಾಸ್ತವ ಸ್ಥಿತಿ ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆಯೇ ಎಂಬ ಅನುಮಾನಗಳು ಮುಖ್ಯಮಂತ್ರಿ ಕಚೇರಿ ಸುತ್ತಮುತ್ತ ರಿಂಗಣಿಸುತ್ತಿವೆ.

Facebook Comments