ರಾಜ್ಯದ ವಿವಿಧ ನಗರಗಳಿಗೂ ಸಬರ್ಬನ್ ರೈಲು : ಸಿಎಂ ಯಡಿಯೂರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.12- ಹೆಚ್ಚುತ್ತಿರುವ ನಗರೀಕರಣ ವನ್ನು ತಡೆದು 2 ಮತ್ತು 3ನೇ ಹಂತದ ನಗರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ಸರ್ಕಾರ ತ್ವರಿತ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು. ನಗರದ ಅರಮನೆ ಮೈದಾನದಲ್ಲಿ ಭವಿಷ್ಯದ ಸುಸ್ಥಿರ ನಗರಗಳ ನಿರ್ಮಾಣ ಹಾಗೂ ತಂತ್ರಜ್ಞಾನದ 16ನೇ ಅಂತಾರಾಷ್ಟ್ರೀಯ ಮುನ್ಸಿಪಾಲಿಕಾ-2020 ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲೇ ಅತಿಹೆಚ್ಚು ನಗರೀಕರಣಗೊಳ್ಳುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದೆ, ಶೇ.40ರಷ್ಟು ಬೆಂಗಳೂರು ನಗರೀಕರಣವಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನಗರೀಕರಣವನ್ನು ತಡೆದು 2ನೇ ಮತ್ತು 3ನೇ ಹಂತದ ನಗರಗಳಲ್ಲಿ ಬೆಂಗಳೂರಿನ ಮಾದರಿಯಲ್ಲೇ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಸ್ವಚ್ಚ ಭಾರತ್, ಅಮೃತ್ ಯೋಜನೆ, ಸ್ಮಾರ್ಟ್ ಸಿಟಿ, ಡಿಜಿಟಲ್ ಇಂಡಿಯಾ, ಪ್ರಧಾನಮಂತ್ರಿ ಆವಾಸ್ ಯೋಜನೆ ಮತ್ತಿತರ ಯೋಜನೆಗಳನ್ನು ಅನುಷ್ಠಾನ ಮಾಡಬೇಕಾದ ಅಗತ್ಯವಿದೆ ಎಂದರು.

ಮೈಸೂರು, ಮಂಗಳೂರು, ದಕ್ಷಿಣ ಕನ್ನಡ, ತುಮಕೂರು, ದಾವಣಗೆರೆ, ಕಲಬುರಗಿ, ಹುಬ್ಬಳಿ ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಡಿ ಅಭಿವೃದ್ಧಿಪಡಿಸಲು ಗಮನಹರಿಸಿದ್ದೇವೆ. ಬೆಂಗಳೂರು ಸೇರಿದಂತೆ ಏಳು ಮಹಾನಗರ ಪಾಲಿಕೆಗಳು ಸ್ಮಾರ್ಟ್‍ಸಿಟಿಯಡಿ, 27 ನಗರಗಳನ್ನು ಅಮೃತ್ ಯೋಜನೆಯಡಿ ಹಾಗೂ ಸ್ವಚ್ಛತಾ ಭಾರತ್ ಮತ್ತು ಅಮೃತ್ ಯೋಜನೆಯಡಿ ರಾಜ್ಯದ ಎಲ್ಲ ಪಟ್ಟಣಗಳನ್ನು ಸೇರಿಸಲಾಗಿದೆ ಎಂದು ತಿಳಿಸಿದರು.

ವಿಶ್ವದಲ್ಲೇ ಬೆಂಗಳೂರು ಇಂದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ನಗರಕ್ಕೆ ತಕ್ಕಂತೆ ಅಂತಾರಾಷ್ಟ್ರೀಯ ದರ್ಜೆಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವುದು ಸರ್ಕಾರಕ್ಕೆ ಬಹುದೊಡ್ಡ ಸವಾಲು. ಸಂಚಾರಿ ನಿಯಂತ್ರಣ ಮಾಡಲು ಸಬರ್ಬನ್ ರೈಲು ಯೋಜನೆಯನ್ನು ಕೈಗೆತ್ತಿಕೊಳ್ಳಲಿದ್ದೇವೆ. ಇದನ್ನು ಬೇರೆ ಬೇರೆ ನಗರಗಳಿಗೂ ವಿಸ್ತರಣೆ ಮಾಡುವುದಾಗಿ ತಿಳಿಸಿದರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ದರ್ಜೆಯ ಮೂಲಭೂತ ಸೌಕರ್ಯಗಳನ್ನು ಹೊಂದಿದೆ. ಪ್ರಪಂಚದ ಯಾವುದೇ ಭಾಗಕ್ಕೂ ಇಲ್ಲಿಂದ ತಲುಪಬಹುದು ಎಂದರು.  ರಾಜ್ಯದ ಅಭಿವೃದ್ಧಿ , ಸಮತೋಲನದ ದೃಷ್ಟಿಕೋನ, ಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ, ಉತ್ಪಾದನೆ ಮತ್ತು ವಾಣಿಜ್ಯ ದೃಷ್ಟಿಯಿಂದ ಈ ಸಮಾವೇಶ ನಡೆಯುತ್ತಿರುವುದು ಉತ್ತಮ ಬೆಳವಣಿಗೆ. ಇಲ್ಲಿ ಚರ್ಚೆಯಾಗುವ ಅಂಶಗಳನ್ನು ವರದಿ ರೂಪದಲ್ಲಿ ಸರ್ಕಾರಕ್ಕೆ ನೀಡಿ. ಬಜೆಟ್‍ನಲ್ಲಿ ಇವುಗಳನ್ನು ಅನುಷ್ಠಾನ ಮಾಡಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಿಎಂ ಹೇಳಿದರು.

ನಗರಾಭಿವೃದ್ದಿ ಸಚಿವ ಭೈರತಿ ಬಸವರಾಜ್, ಬಿಬಿಎಂಪಿ ಮೇಯರ್ ಗೌತಮ್‍ಕುಮಾರ್ ಸೇರಿದಂತೆ 300 ನಗರಗಳ 2000ಕ್ಕೂ ಹೆಚ್ಚು ಪ್ರತಿನಿಧಿಗಳು, 150ಕ್ಕೂ ಹೆಚ್ಚು ದೇಶ-ವಿದೇಶಗಳ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Facebook Comments