ಅನ್ನದಾತರ ಬೇಡಿಕೆ ಈಡೇರಿಸುವಂತೆ ಸಿಎಂಗೆ ರೈತ ಸಂಘಟನೆಗಳ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.13- ಮುಂಬರುವ ಬಜೆಟ್‍ನಲ್ಲಿ ರೈತರ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ, ಬೆಳೆ ನಷ್ಟ ಪರಿಹಾರ, ಕೃಷಿ ಸಾಲವನ್ನು ಸಂಪೂರ್ಣವಾಗಿ ರದ್ದು ಮಾಡುವುದು ಸೇರಿದಂತೆ ಈ ಬಾರಿಯ ಆಯವ್ಯಯದಲ್ಲಿ ನಾಡಿನ ಅನ್ನದಾತನ ಬೇಡಿಕೆಗಳನ್ನು ಈಡೇರಿಸುವಂತೆ ರೈತ ಸಂಘಟನೆಗಳು ಮುಖ್ಯಮಂತ್ರಿಗೆ ಮನವಿ ಮಾಡಿವೆ.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಬಜೆಟ್ ಪೂರ್ವಭಾವಿಯಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕರೆದಿದ್ದ ಸಭೆಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್, ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್, ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸೇರಿದಂತೆ ಅನೇಕ ರೈತ ಮುಖಂಡರು ಪಾಲ್ಗೊಂಡಿದ್ದರು.

ಆರಂಭದಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯದಲ್ಲಿ ಈ ಬಾರಿ ಭೀಕರ ಪ್ರವಾಹ ಮತ್ತೊಂದು ಕಡೆ ಬರಗಾಲ ಉಂಟಾಗಿ ರೈತರು ಬೆಳೆದ ಬೆಳೆಗಳು ಸಂಪೂರ್ಣವಾಗಿ ಹಾಳಾಗಿವೆ. ರಾಜ್ಯ ಸರ್ಕಾರ ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ವಿಫಲವಾಗಿವೆ. ಹೀಗಾಗಿ ಈ ಬಾರಿಯ ಬಜೆಟ್‍ನಲ್ಲಿ ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಸಾಲವನ್ನು ರದ್ದು ಮಾಡಬೇಕೆಂದು ಮನವಿ ಮಾಡಿದರು.

ಕೆಲವು ಬ್ಯಾಂಕುಗಳಲ್ಲಿ ರೈತರಿಗೆ ಹಳೆ ಸಾಲ ಚುಕ್ತ ಮಾಡದ ಕಾರಣ ಹೊಸದಾಗಿ ಸಾಲ ನೀಡುತ್ತಿಲ್ಲ. ತಕ್ಷಣವೇ ಬ್ಯಾಂಕ್ ಅಧಿಕಾರಿಗಳಿಗೆ ಸಾಲ ವಿತರಿಸಲು ಸೂಚನೆ ನೀಡಬೇಕೆಂದು ಮನವಿ ಮಾಡಿದರು. ಪ್ರವಾಹಕ್ಕೆ ಸಿಲುಕಿ ಬೆಳೆನಷ್ಟವಾದ ಪರಿಣಾಮ ರೈತರಿಗೆ ಸಮರ್ಪಕವಾಗಿ ಬೆಳೆ ಪರಿಹಾರ ಸಿಕ್ಕಿಲ್ಲ. ಕೆಲವು ಕಡೆ ಪರಿಹಾರದ ಚೆಕ್ಕುಗಳೇ ಬೌನ್ಸ್ ಆಗುತ್ತಿವೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಇದನ್ನು ಸರಿಪಡಿಸುವಂತೆಯೂ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದರು.

ಬರಗಾಲ ಆವರಿಸಿರುವ ಕಾರಣ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು, ಆನ್‍ಲೈನ್ ಟ್ರೇಡಿಂಗ್ ವ್ಯವಸ್ಥೆಯನ್ನು ರಾಜ್ಯದ ಕೃಷಿ ಮಾರುಕಟ್ಟೆಗಳಲ್ಲಿ ಜಾರಿಗೆ ತರಬೇಕೆಂದು ಆಗ್ರಹಿಸಿದರು.ಉತ್ತ ರ ಕರ್ನಾಟಕದ ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಮಾಡುವ ಕಳಸಾ ಬಂಡೂರಿ ನಾಲಾ ಯೋಜನೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಯೋಜನ ಅನುಷ್ಠಾನಗೊಳಿಸಲು ಗೋವಾ ಸರ್ಕಾರ ಪದೇ ಪದೇ ಖ್ಯಾತೆ ತೆಗೆಯುತ್ತಿದೆ. ನ್ಯಾಯಾಲಯದಲ್ಲಿ ಸಮರ್ಪಕವಾಗಿ ಕಾನೂನು ಮಂಡಿಸಿ ಈ ಯೋಜನೆಯನ್ನು ಅನುಷ್ಠಾನ ಮಾಡಬೇಕೆಂದು ಮನವಿ ಮಾಡಿದರು.

ಬರ ಪೀಡಿತ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಎತ್ತಿನಹೊಳೆ ಯೋಜನೆಯನ್ನು ಜಾರಿ ಮಾಡುವುದು ಹಾಗೂ ಈ ಬಾರಿ ನೀರಾವರಿ ಯೋಜನೆಗಳಿಗೆ ಒಂದು ಕೋಟಿ ಅನುದಾನವನ್ನು ಮೀಸಲಿಡಬೇಕು ಎಂದು ಮುಖ್ಯಮಂತ್ರಿಗಳ ಗಮನ ಸೆಳೆದರು. ಕುರುಬೂರು ಶಾಂತಕುಮಾರ್ ಮಾತನಾಡಿ, ರೈತರು ಹೋರಾಟ ಇಲ್ಲವೇ ಪ್ರತಿಭಟನೆಯಲ್ಲಿ ಪಾಲ್ಗೊಂಡ ವೇಳೆ ಹುತಾತ್ಮರಾದರೆ ಅಂತಹ ಕುಟುಂಬಗಳಿಗೆ 10ಸಾವಿರ ಮಾಸಾಶನ ಹಾಗೂ ಸರ್ಕಾರಿ ಉದ್ಯೋಗ, ಕೆರೆಗಳಿಗೆ ನೀರು ತುಂಬಿಸು ವುದೂ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಬೇಕೆಂದು ಮನವಿ ಮಾಡಿದರು. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸಬೇಕು.

ಮೆಕ್ಕೆ ಜೋಳಕ್ಕೆ ಪ್ರತಿ ಕ್ವಿಂಟಾಲ್ 2500ರೂ., ಭತ್ತ 4500, ರಾಗಿ 3500, ಈರುಳ್ಳಿ 5600ರೂ., ತೊಗರಿಗೆ 4500, ಕಡಲೆಗೆ 7500 ರೂ., ಹತ್ತಿಗೆ 6000, ಕೊಬ್ಬರಿಗೆ 25ಸಾವಿರ, ಅಡಿಕೆಗೆ 45ಸಾವಿರ ರೂ. ಬೆಂಬಲ ಬೆಲೆ ಘೋಷಣೆ ಮಾಡಬೇಕೆಂದರು.

ರೈತರು ಬೆಳೆದ ಬೆಳೆಗಳನ್ನು ಸಕಾಲದಲ್ಲಿ ಮಾರಾಟ ಮಾಡಲು ಅನುಕೂಲವಾಗುವಂತೆ ಅಗತ್ಯವಿರುವ ಕಡೆ ಖರೀದಿ ಕೇಂದ್ರಗಳನ್ನು ತೆರೆಯಬೇಕು. ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಜಿಲ್ಲೆಗಳಲ್ಲಿ ರೇಷ್ಮೆಯ ನೂಲಿನ ಗಿರಣಿಗಳನ್ನು ಸರ್ಕಾರವೇ ತೆರೆಯಬೇಕೆಂದು ಶಾಂತ್‍ಕುಮಾರ್ ಆಗ್ರಹಿಸಿದರು. ಕಳಪೆ ಬಿತ್ತನೆ ಬೀಜ ಹಾಗೂ ಕಳಪೆ ಕೀಟನಾಶಕಗಳನ್ನು ಮಾರಾಟ ಮಾಡುವ ಮಾರಾಟಗಾರರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಹೊಸ ಕಾಯ್ದೆಯನ್ನು ಜಾರಿ ಮಾಡಬೇಕು ಎಂದರು.

Facebook Comments