ಮೋದಿ ಕ್ಷೇತ್ರ ವಾರಾಣಸಿಗೆ ಸಿಎಂ ಯಡಿಯೂರಪ್ಪ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.15- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉತ್ತರಪ್ರದೇಶದಲ್ಲಿರುವ ಪವಿತ್ರ ಧಾರ್ಮಿಕ ಶ್ರದ್ದಾ ಕೇಂದ್ರವೆನಿಸಿರುವ ವಾರಾಣಸಿಗೆ ಇಂದು ತೆರಳಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನ ಮೂಲಕ ವಾರಾಣಸಿಗೆ ಪ್ರಯಾಣ ಬೆಳಸಲಿದ್ದಾರೆ. ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಪೀಠಕ್ಕೆ ಸೇರಿದ ವಾರಾಣಸಿಯ ಜಗದ್ಗುರು ವಿಶ್ವರಾಧ್ಯ ಗುರುಕುಲದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಲಿದ್ದಾರೆ.

ಪ್ರಧಾನಿ ನರೇಂದ್ರಮೋದಿ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೋದಿ ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಭಾಗಿಯಾಗುತ್ತಿದ್ದಾರೆ.
ವೀರಶೈವ ಧರ್ಮದ ಧರ್ಮಗ್ರಂಥವಾದ ಶ್ರೀ ಸಿದ್ಧಾಂತ ಶಿಖಾಮಣಿಯ 19 ಭಾಷೆಗಳ ಭಾಷಾಂತರ ಕೃತಿಗಳನ್ನು ಬಿಡುಗಡೆ ಮಾಡುವರು. ಗ್ರಂಥವನ್ನು ಮೊಬೈಲ್ ಆಪ್ ರೂಪದಲ್ಲಿ ಕೂಡ ಹೊರತರುತ್ತಿದ್ದು, ಇದನ್ನೂ ಕೂಡ ಮೋದಿ ಅವರು ಬಿಡುಗಡೆ ಮಾಡಲಿದ್ದಾರೆ ಎಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

ಸಿದ್ಧಾಂತ ಶಿಖಾಮಣಿಯು ಶಿವಯೋಗಿ ಶಿವಾಚಾರ್ಯರು ಸಂಪಾದಿಸಿದ್ದು, ಜಗದ್ಗುರು ರೇಣುಕಾಚಾರ್ಯರ ಬೋಧನೆಗಳನ್ನು ಒಳಗೊಂಡಿದೆ. ಕಾಶಿ ಭೇಟಿ ಸಂದರ್ಭದಲ್ಲಿ ಪ್ರಧಾನಿ ಅವರು 30 ವಿವಿಧ ಯೋಜನೆಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಇದೇ ವೇಳೆ ಮಹಾಕಾಲ ಎಕ್ಸ್‍ಪ್ರೆಸ್ ಪ್ರವಾಸಿ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ.

ಈ ರೈಲು ಶಿವನ ಜ್ಯೋತಿರ್ಲಿಂಗ ಕ್ಷೇತ್ರಗಳಾದ ವಾರಾಣಸಿ, ಮಧ್ಯಪ್ರದೇಶದ ಉಜ್ಜಯಿನಿ ಹಾಗೂ ಓಂಕಾರೇಶ್ವರಗಳನ್ನು ಸಂಪರ್ಕಿಸಲಿದೆ. ಭಾನುವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿರುವ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಧ್ಯಾಹ್ನ 1 ಗಂಟೆಗೆ ವಾರಣಾಸಿಯಿಂದ ವಿಶೇಷ ವಿಮಾನದ ಮೂಲಕ ಹೊರಟು ಸಂಜೆ 4 ಗಂಟೆಗೆ ಬೆಂಗಳೂರಿಗೆ ಮುಖ್ಯಮಂತ್ರಿ ವಾಪಸ್ಸಾಗಲಿದ್ದಾರೆ.

Facebook Comments