ಹುಟ್ಟುಹಬ್ಬದಂದೇ ಕಾವೇರಿ ನಿವಾಸ ಪ್ರವೇಶಿಸಲು ಸಿಎಂ ಸಿದ್ಧತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.23- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶೀಘ್ರದಲ್ಲೇ ಕಾವೇರಿ ನಿವಾಸಕ್ಕೆ ಅಧಿಕೃತವಾಗಿ ಪ್ರವೇಶ ಮಾಡಲಿದ್ದಾರೆ. ತಮ್ಮ 78ನೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ಗುರುವಾರದಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಕ್ಕೆ ಹೊಂದಿಕೊಂಡಿರುವ ಕಾವೇರಿ ನಿವಾಸಕ್ಕೆ ವಿದ್ಯುಕ್ತವಾಗಿ ಪ್ರವೇಶ ಮಾಡಲಿದ್ದಾರೆ.

ಈವರೆಗೂ ಕಾವೇರಿ ನಿವಾಸದಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಾಸ್ತವ್ಯ ಹೂಡಿದ್ದರು. ಇದೀಗ ಅವರು ಗಾಂಧಿಭವನದ ಬಳಿ ಇರುವ ಸರ್ಕಾರಿ ಬಂಗಲೆಗೆ ತೆರಳಿದ್ದಾರೆ. ನಿನ್ನೆ ಯಡಿಯೂರಪ್ಪ ಮತ್ತು ಅವರ ಕುಟುಂಬದ ಸದಸ್ಯರು ಕಾವೇರಿ ನಿವಾಸಕ್ಕೆ ಆಗಮಿಸಿದ್ದರು. ವಾಸ್ತು ಪ್ರಕಾರವೇ ಕಾವೇರಿ ನಿವಾಸವನ್ನು ನವೀಕರಣಗೊಳಿಸುವ ಕಾರ್ಯ ಭರದಿಂದ ಸಾಗಿದೆ.

ಜ್ಯೋತಿಷಿಯೊಬ್ಬರ ಸಲಹೆಯಂತೆ ನವೀಕರಣ ಕಾರ್ಯ ನಡೆಯುತ್ತಿದ್ದು, ಶುಭ ಶುಕ್ರವಾರದಂದು ಮನೆ ಪ್ರವೇಶ ಮಾಡುವಂತೆ ಬಿಎಸ್‍ವೈಗೆ ಸಲಹೆ ಮಾಡಿದ್ದಾರೆ. ಇದರಂತೆ ತಮ್ಮ ಹುಟ್ಟುಹಬ್ಬದ ದಿನದಂದು ಮುಖ್ಯಮಂತ್ರಿಯವರು ಕಾವೇರಿಗೆ ಪ್ರವೇಶ ಮಾಡಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಈವರೆಗೂ ಯಡಿಯೂರಪ್ಪನವರು ತಮ್ಮ ಸ್ವಂತ ಮನೆಯಾದ ದವಳಗಿರಿ ನಿವಾಸದಲ್ಲೇ ವಾಸ್ತವ್ಯ ಹೂಡಿದ್ದರು. ಈ ಹಿಂದೆ 2008ರಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಅವರು ರೇಸ್‍ಕೋರ್ಸ್ ರಸ್ತೆಯ ನಿವಾಸದಲ್ಲಿದ್ದರು. ಅದು ಅವರಿಗೆ ಅದೃಷ್ಟದ ಮನೆಯೂ ಹೌದು.

ವಿರೋಧ ಪಕ್ಷದ ನಾಯಕರಾಗಿದ್ದ ವೇಳೆ ತಮಗೆ ರೇಸ್‍ಕೋರ್ಸ್ ರಸ್ತೆಯ ನಿವಾಸವನ್ನು ನಿಗದಿ ಮಾಡಬೇಕೆಂದು ಸರ್ಕಾರವನ್ನು ಕೇಳಿಕೊಂಡಿದ್ದರು. ಆದರೆ, ಈ ನಿವಾಸವನ್ನು ಅಂದು ಪ್ರವಾಸೋದ್ಯಮ ಸಚಿವರಾಗಿದ್ದ ಸಾ.ರಾ.ಮಹೇಶ್‍ಗೆ ನೀಡಲಾಗಿತ್ತು. ಹೀಗಾಗಿ ಯಡಿಯೂರಪ್ಪನವರು ಸರ್ಕಾರಿ ಬಂಗಲೆಗೆ ತೆರಳದೆ ತಮ್ಮ ನಿವಾಸದಲ್ಲೇ ಇದ್ದರು.

ಸಿದ್ದರಾಮಯ್ಯನವರು ಕಾವೇರಿ ನಿವಾಸದಲ್ಲಿ ಸತತ ಏಳು ವರ್ಷಗಳ ಕಾಲ ವಾಸ್ತವ್ಯ ಹೂಡಿದ್ದರು. ಮುಖ್ಯಮಂತ್ರಿಯಾಗಿ ಐದು ವರ್ಷ, ನಂತರ ಸಮ್ಮಿಶ್ರ ಸರ್ಕಾರದ ಅವಧಿಯ 14 ತಿಂಗಳು, ಬಳಿಕ ಬಿಜೆಪಿ ಸರ್ಕಾರ ಬಂದ 6 ತಿಂಗಳು ಇಲ್ಲಿಯೇ ಇದ್ದರು. ಇದೀಗ ಮುಖ್ಯಮಂತ್ರಿಗೆ ನಿವಾಸ ಬಿಟ್ಟುಕೊಟ್ಟಿರುವುದರಿಂದ ಕಾವೇರಿಯಿಂದ ಸಿದ್ದರಾಮಯ್ಯನವರು ಬೇರೊಂದು ಬಂಗಲೆಗೆ ತೆರಳಿದ್ದಾರೆ.

Facebook Comments