ಪರ್ಯಾಯ ಪಟ್ಟ ಕಟ್ಟಲು ಹೈಕಮಾಂಡ್ ಚಿಂತನೆ, ಬಿಎಸ್‍ವೈ ಸ್ಥಾನ ತುಂಬುವವರು ಯಾರು..?

ಈ ಸುದ್ದಿಯನ್ನು ಶೇರ್ ಮಾಡಿ

# ವೈ.ಎಸ್.ರವೀಂದ್ರ
ಬೆಂಗಳೂರು,ಜೂ.8- ಸರ್ಕಾರದಲ್ಲಿ ಉಂಟಾಗಿರುವ ಅಸಮಾಧಾನದ ಛಾಯೆಯಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ವರಿಷ್ಠರು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜಾಗದಲ್ಲಿ ಮುಂದೆ ಯಾರನ್ನು ತಂದು ಕೂರಿಸಬೇಕೆಂಬ ಗಾಢಚಿಂತೆಯಲ್ಲಿ ತೊಡಗಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಅವರನ್ನು ಬದಲಾಯಿಸುವುದು ಅಷ್ಟು ಸರಳವಲ್ಲ ಎಂಬ ಅರಿವು ಇರುವುದರಿಂದ ನಾಯಕತ್ವ ಬದಲಾವಣೆಗೆ ಕೈ ಹಾಕಿದರೆ, ಪಕ್ಷ ಹೋಳಾಗಬಹುದೆಂಬ ಕೇಂದ್ರ ವರಷ್ಠರನ್ನು ಕಾಡುತ್ತಿದೆ.

ಸದ್ಯ ರಾಜ್ಯ ಲಿಂಗಾಯತ ಸಮುದಾಯದ ಅನಭಿಷಕ್ತ ಚಕ್ರವರ್ತಿ ರೀತಿ ಯಡಿಯೂರಪ್ಪ ಮುಂದುವರಿದಿದ್ದಾರೆ. ಇತ್ತೀಚಿಗೆ ನಡೆದ 15 ವಿಧಾನ ಸಭಾ ಕ್ಷೇತ್ರಗಳ ಗೆಲುವೇ ಇದಕ್ಕೆ ಇತ್ತೀಚಿನ ಉದಾಹರಣೆ. ಇದರ ಅರಿವು ಹೈ ಕಮಾಂಡ್‍ಗೆ ಚೆನ್ನಾಗಿ ಇದೆ.

ಒಂದೊಮ್ಮೆ ನಾಯಕತ್ವಕ್ಕೆ ಬಹಿರಂಗ ಕಿರಿಕಿರಿ ಮಾಡಿದರೆ ಆಗಬಹುದಾದ ಡ್ಯಾಮೇಜ್ ಬಗ್ಗೆ ದೆಹಲಿ ನಾಯಕರಿಗೂ ಒಂದು ಅಂದಾಜಿದೆ. ಹಾಗಾದರೆ,ಪಕ್ಷದ ಶಕ್ತಿಶಾಲಿ ನಾಯಕನೊಬ್ಬ ತೆರೆಗೆ ಸರಿದರೆ ಪಕ್ಷದ ಭವಿಷ್ಯವೇನು ಎಂಬ ಲೆಕ್ಕಾಚಾರವನ್ನು ವರಿಷ್ಠರು ಹಾಕುವುದು ಸಹಜ.

ಪರ್ಯಾಯ ನಾಯಕತ್ವದ ಹುಡುಕಾಟವನ್ನು ಈಗಾಗಲೇ ಅವರು ಆರಂಭಿಸಿರುವುದು ಗುಟ್ಟಾಗಿ ಉಳಿದಿಲ್ಲ. ಹೀಗಾಗಿಯೇ ಯುವ ಮುಖಗಳಿಗೆ ವರಿಷ್ಠರು ಆದ್ಯತೆ ನೀಡತೊಡಗಿದ್ದಾರೆ. ಹಾಗಂತ ಅವರ್ಯಾರೂ ಬಿಎಸ್‍ವೈ ಅವರ ಸ್ಥಾನವನ್ನು ತುಂಬುತ್ತಾ ಎಂದು ಹೇಳಲು ಸಾಧ್ಯವಿಲ್ಲ.

ಯಾಕೆಂದರೆ, ಯಡಿಯೂರಪ್ಪನವರ ವರ್ಚಸ್ಸು, ಅವರ ಶಕ್ತಿ ಅನಿವಾರ್ಯ ಅನ್ನುವ ವಾತಾವರಣ ಪಕ್ಷದಲ್ಲಿದೆ. ಅವರ ಹೊರತಾಗಿ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದು ಸುಲಭದ ಮಾತಲ್ಲ.

ಈ ಸಂದಿಗ್ಧಗಳ ನಡುವೆ ಭವಿಷ್ಯದ ದೃಷ್ಟಿಯಿಂದ ಯಡಿಯೂರಪ್ಪ ಅವರನ್ನು ಬದಲಿಸಬೇಕೋ ಬೇಡವೋ ಎಂಬ ಜಿಜ್ಞಾಸೆ ಪಕ್ಷದಲ್ಲಿದೆ. ಯಡಿಯೂರಪ್ಪ ಒಂದೆಡೆಯಾದರೆ ಎಲ್ಲಾ ನಾಯಕರು ಒಂದೆಡೆ ಎನ್ನುವ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಯಾರಿಗೆ ನಾಯಕತ್ವ ನೀಡಬೇಕು ಎಂಬ ಚಿಂತನೆ ನಡೆದಿದೆ.

ಯಡಿಯೂರಪ್ಪ ಬದಲಾಯಿಸಿದರೆ ಪ್ರಬಲ ಲಿಂಗಾಯತ ಸಮುದಾಯ ಬಿಜೆಪಿ ವಿರುದ್ಧ ಮತ ಚಲಾಯಿಸಬಹುದು ಎಂಬ ಆತಂಕವೂ ಇದೆ. ಈ ಹಿನ್ನೆಲೆಯಲ್ಲಿ ಮುಂದಿನ ಒಂದು ತಿಂಗಳೊಳಗಾಗಿ ಬಿಜೆಪಿ ಹೈಕಮಾಂಡ್ ಕರ್ನಾಟಕದ ಕುರಿತಂತೆ ಸ್ಪಷ್ಟ ನಿರ್ಧಾರಕ್ಕೆ ಬರಲಿದೆ ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ.

ಪ್ರಬಲ ಲಿಂಗಾಯತ ಕೋಮಿನ ಯಡಿಯೂರಪ್ಪ ಅವರನ್ನು ಬದಲಾಯಿಸಿದರೆ ಪಕ್ಷಕ್ಕೆ ಹಿನ್ನೆಡೆಯಾಗುತ್ತದೆ ಎಂಬ ಚಿಂತನೆ ಒಂದೆಡೆಯಾದರೆ ಮೊದಲಿನಂತೆ ಯಡಿಯೂರಪ್ಪ ಪಕ್ಷದ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುತ್ತಿಲ್ಲ, ರಾಜ್ಯದ ಜನರ ವಿಶ್ವಾಸವನ್ನು ಮರುಗಳಿಸುವಲ್ಲಿ ವಿಫಲವಾಗಿದ್ದಾರೆ ಎಂಬ ಚಿಂತೆ ಕಾಡುತ್ತಿದೆ.

ಹಾಗಾದರೆ,ಅವರ ನಿವೃತ್ತಿ, ಸಂಘಟನೆಯ ಮೇಲೆ ಪರಿಣಾಮ ಬೀರದಂತೆ, ಗೌರವಯುತ ವಿದಾಯ ಹೇಳುವುದು ಪಕ್ಷಕ್ಕೆ ಅನಿವಾರ್ಯವಾಗಿದೆ. ಪಕ್ಷದ ವರಿಷ್ಠರು ಯಡಿಯೂರಪ್ಪ ಅವರ ಮೂಲಕವೇ ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ತಮ್ಮ ನಿಲುವೇನು ಎಂಬುದನ್ನು ತಿಳಿಸುವ ಹಾಗೆ ಮಾಡಲೇಬೇಕಾಗಿದೆ, ಇಲ್ಲದಿದ್ದರೆ ಅದು ಉಲ್ಟಾ ಹೊಡೆದರೆ ಏನಾಗುತ್ತೆ ಎಂಬ ಆತಂಕ ಕೂಡ ವರಿಷ್ಠರಲ್ಲಿ ಮನೆಮಾಡಿದೆ.

ಅಕಸ್ಮಾತ್ ರಾಜಾಹುಲಿ ಸಕ್ರಿಯ ರಾಜಕಾರಣಕ್ಕೆ ಪೂರ್ಣ ವಿರಾಮ ಬಿದ್ದರೆ ಮುಂದೆ ರಾಜ್ಯ ರಾಜಕಾರಣದಲ್ಲಿ ಮಕ್ಕಳ ಭವಿಷ್ಯವೇನು? ಇಂತಹದ್ದೊಂದು ಪ್ರಶ್ನೆ ಖುದ್ದು ಯಡಿಯೂರಪ್ಪನವರಿಗೆ ಬಂದರೂ ಅಚ್ಚರಿಯಿಲ್ಲ! ಇದೇ ಕಾರಣಕ್ಕೆ ನಿಧಾನವಾಗಿ ಪುತ್ರ ವಿಜೆಯೇಂದ್ರನನ್ನು ಮುನ್ನಲೆಗೆ ತರುತ್ತಿರುವಂತಿದೆ.

ಇತ್ತ ಯಡಿಯೂರಪ್ಪ ರಾಜಕೀಯ ಅಧ್ಯಾಯ ಮುಗಿದರೆ ಮುಂದೇನು? ಅನ್ನುವ ಲೆಕ್ಕಾಚಾರದಲ್ಲಿ ಬಿಜೆಪಿ ಕೂಡ ಇದೆ. ಒಂದಿಬ್ಬರು ವೀರಶೈವ ಸಚಿವರನ್ನು ನೆಚ್ಚಿಕೊಕೊಳ್ಳುವ ಬದಲು ವಿಜಯೇಂದ್ರಗೆ ಮಣೆ ಹಾಕುವ ಮೂಲಕ ತೆರೆಮರೆಗೆ ಸರಿದ ಮೇಲೂ ಬಿಎಸ್‍ವೈ ಇಮೇಜ್ ಬಳಸಿಕೊಳ್ಳೋ ಮುಂದಾಲೋಚನೆ ಇರಬಹುದು.

ವಿಜಯೇಂದ್ರ ಕೂಡ ಬರೀ ತಂದೆ ಹೆಸರನ್ನಷ್ಟೇ ಹೇಳಿ ರಾಜಕೀಯ ಮಾಡುತ್ತಿಲ್ಲ. ದಿನೇ ದಿನೇ ಸ್ವಂತ ವರ್ಚಸ್ಸು ಬೆಳೆಸಿಕೊಳ್ಳುತ್ತಿದ್ದಾರೆ. ಕೆಆರ್‍ಪೇಟೆ ಗೆದ್ದ ಮೇಲೆ ರಾಜ್ಯದ ಇತರ ಕಡೆಯೂ ಸುತ್ತುತ್ತಿದ್ದಾರೆ.ಬರೀ ಸ ವದಿ ನೆಚ್ಚಿಕೊಂಡು ಇಡೀ ಲಿಂಗಾಯತ ಸಮುದಾಯ ಒಲಿಸಿಕೊಳ್ಳೋ ತಲೆಬುಡವಿಲ್ಲದ ಲೆಕ್ಕಾಚಾರವಂತೂ ಯಾರಿಗೂ ಇಲ್ಲ.

ಹಾಗಾಗೇ ನಯವಾಗಿಯೇ ಯಡಿಯೂರಪ್ಪ ನಾಯಕತ್ವವನ್ನು ತೆರೆಮರೆಗೆ ಸರಿಸಿ, ಇದಕ್ಕೆ ಪರಿಹಾರವಾಗಿ ವಿಜಯೇಂದ್ರಗೆ ಮಣೆಹಾಕಿ ಸಮಾಧಾನ ಮಾಡೋ ಯತ್ನ ಇದ್ದರೂ ಇರಬಹುದು.

ಯಡಿಯೂರಪ್ಪ ಬಯಸುವ ಹಾಗೆ, ಷರತ್ತಿಗೆ ಒಳಪಟ್ಟೇ ಗೌರವಯುತ ವಿದಾಯ ಹೇಳುವುದೊಂದೇ ಪಕ್ಷದ ವರಿಷ್ಠರಿಗೆ ಇರುವ ಮಾರ್ಗ ಎಂಬುದು ನಿಜ. ಮೂರು ವರ್ಷ ಮುಂಚಿತವಾಗಿಯೇ ಅದಕ್ಕಾಗಿ ಸಿದ್ಧತೆ ನಡೆಸುತ್ತಿರುವ ಬಿಜೆಪಿ ಹೈಕಮಾಂಡ್ ಇತಿಹಾಸ ಸೃಷ್ಟಿಸಲು ಹೊರಟಿರುವುದಂತೂ ಸತ್ಯ.

ಈಗಾಗಲೇ 78 ವಸಂತಗಳನ್ನು ಪೂರೈಸಿರುವ ಯಡಿಯೂರಪ್ಪ ಬಿಜೆಪಿಯ ನಾಯಕರಲ್ಲಿ ಅತ್ಯಂತ ಪ್ರಮುಖರು. ಪಕ್ಷದ ಹೈಕಮಾಂಡ್ ಜಾರಿಗೆ ತಂದಿರುವ 70 ವರ್ಷಕ್ಕಿಂತ ಹಿರಿಯರಿಗೆ ನಿವೃತ್ತಿ ನೀಡುವ ನಿಯಮ ಯಡಿಯೂರಪ್ಪ ಅವರಿಗೆ ಈವರೆಗೆ ಅನ್ವಯವಾಗಿಲ್ಲ.

ಕರ್ನಾಟಕದಲ್ಲಿ ಅವರಿಗೆ ಇರುವ ವರ್ಚಸ್ಸು ಮತ್ತು ಪಕ್ಷದ ಮೇಲಿನ ಹಿಡಿತ, ಪ್ರಭಾವದ ಬಗ್ಗೆ ಹೈಕಮಾಂಡ್‍ಗೆ ಅರಿವಿದೆ. ಹಾಗೊಂದು ವೇಳೆ ಏಕಾಏಕಿ ಅವರನ್ನು ತೆರೆಯ ಮರೆಗೆ ಸರಿಸಿದರೆ ಪಕ್ಷದ ಸಂಘಟನೆಯ ಮೇಲಾಗುವ ಪರಿಣಾಮಗಳ ಬಗ್ಗೆಯೂ ವರಿಷ್ಠರಿಗೆ ಗೊತ್ತಿದೆ. ಅದಕ್ಕಾಗಿಯೇ ಈ ನಿಯಮದಿಂದ ಬಿಎಸ್‍ವೈ ಅವರಿಗೆ ವಿನಾಯಿತಿ ಎಂಬುದು ಗೊತ್ತೇ ಇದೆ.

ಹಾಗಾದರೆ ಅವರೇ ಖುದ್ದಾಗಿ ನಿವೃತ್ತಿಯಾಗುತ್ತೇನೆ ಅಂದರೂ ಅಷ್ಟು ಸುಲಭವಾಗಿ ಅದಕ್ಕೆ ಒಪ್ಪಲು ಹೈಕಮಾಂಡ್ ಸಿದ್ಧವಿಲ್ಲ. ಅಂದರೆ, ಯಡಿಯೂರಪ್ಪನವರ ವರ್ಚಸ್ಸನ್ನು ಮುಂದೆಯೂ ಬಳಸಿಕೊಳ್ಳುವ ಹಾಗೆ, ಅವರ ಬೆಂಬಲಿಗರಿಗೆ, ಅಭಿಮಾನಿಗಳಿಗೆ ಯಾವುದೇ ರೀತಿಯಲ್ಲಿ ಅಸಮಾಧಾನ ಆಗದ ರೀತಿಯಲ್ಲಿ ಗೌರವಯುತವಾಗಿ ನಡೆಸಿಕೊಂಡು, ತೆರೆಮರೆಗೆ ಸರಿಸಲು ಹೈಕಮಾಂಡ್ ಚಿಂತಿಸುತ್ತಿದೆ.

ಇದರಿಂದ ಬಿಎಸ್‍ವೈ, ನಿವೃತ್ತಿಯಾಗಲು ಸೂಚಿಸುವ ಮುನ್ನ ಅಥವಾ ನಿರ್ಲಕ್ಷಿಸುತ್ತಾ, ಕಡೆಗಣನೆ ಮಾಡಲು ಆರಂಭಿಸುವ ಮುನ್ನವೇ ಖುದ್ದಾಗಿ ನಿವೃತ್ತಿ ಪಡೆಯುವ ಲೆಕ್ಕಾಚಾರದಲ್ಲಿದ್ದಾರಾ ಎಂಬ ಅನುಮಾನ ಕೂಡ ಇದೆ.  ಕೈಕೊಡುತ್ತಿರುವ ಆರೋಗ್ಯ, ವಯಸ್ಸಿನ ಕಾರಣ ಮುಂದಿಟ್ಟು ಮುಂದಿನ ದಿನಗಳಲ್ಲಿ ತಮ್ಮ ಪುತ್ರರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ, ಗೌರವ ಪಡೆಯುವ ಲೆಕ್ಕಾಚಾರದೊಂದಿಗೆ ಬಿಎಸ್‍ವೈ ಸಕ್ರಿಯ ರಾಜಕೀಯದಿಂದ ದೂರವಾಗುತ್ತಾರೆ ಎಂಬ ಮಾತು ಕೂಡ ಇದೆ.

ತಮ್ಮ ಸರ್ಕಾರದ 100 ದಿನ ಪೂರೈಸಿದ ಸಂದರ್ಭದಲ್ಲಿ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದ ಬಿಎಸ್ವೈ, ರಾಜಕಾರಣಕ್ಕೆ ನಿವೃತ್ತಿ ಅನ್ನೋದಿಲ್ಲ, ಆದರೆ, ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ 150 ಸೀಟು ಗೆಲ್ಲುವಂತೆ ಮಾಡಿ ಮತ್ತೆ ಅಧಿಕಾರಕ್ಕೆ ತರುವ ಗುರಿ ಹೊಂದಿದ್ದೇನೆ. ಮುಂದೆ ಯಾವ ರಾಜ್ಯಪಾಲ ಹುದ್ದೆಯನ್ನೂ ಪಡೆಯದೇ ಪಕ್ಷದ ಸಾಮಾನ್ಯ ಕಾರ್ಯರ್ತನಾಗಿ ಪಕ್ಷದ ಸಂಘಟನೆಯಲ್ಲಿ ತೊಡಗುತ್ತೇನೆ ಎಂದು ಹೇಳಿದ್ದರು.

ಇದನ್ನೆಲ್ಲಾ ಗಮನಿಸಿದರೆ, ಯಡಿಯೂರಪ್ಪ ಕೂಡಾ ಗೌರವಯುತವಾಗಿ ರಾಜಕೀಯ ನಿವೃತ್ತಿ ಪಡೆಯುವ ಸಿದ್ಧತೆಯಲ್ಲಿದ್ದಾರೆ ಎನ್ನುವುದನ್ನು ಪುಷ್ಟೀಕರಿಸುತ್ತದೆ. ಹಾಗಂತ ಯಡಿಯೂರಪ್ಪ ಮಾತ್ರ ಅಲ್ಲ, ರಾಜ್ಯದ ಇನ್ನೂ ಅನೇಕ ಹಿರಿಯ ರಾಜಕಾರಣಿಗಳು ನಿವೃತ್ತಿಯ ಬಗ್ಗೆ ಮಾತನಾಡಿದ್ದುಂಟು. ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಇದೇ ಕೊನೆಯ ಚುನಾವಣೆ ಮತ್ತೆ ಸ್ಪರ್ಧಿಸಲಾರೆ ಎಂದಿದ್ದರು.

ಆದ್ರೆ 2018ರಲ್ಲಿ ಬದಲಾದ ಸನ್ನಿವೇಶದ ನೆಪದಲ್ಲಿ ಮೈಸೂರು ಬಿಟ್ಟು ಬದಾಮಿಯಲ್ಲಿ ಮತ್ತೆ ಚುನಾವಣೆಗೆ ಸ್ಪರ್ಧಿಸಿ ಸಕ್ರಿಯ ರಾಜಕಾರಣದಲ್ಲಿ ಮುಂದುವರಿದಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರಂತೂ ನೂರಾರು ಬಾರಿ ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿ ರಾಜಕಾರಣದಲ್ಲಿ ಸಕ್ರಿಯವಾಗಿದ್ದಾರೆ. ಆದ್ರೆ ಯಡಿಯೂರಪ್ಪ ಹಾಗಲ್ಲ, ತಮ್ಮ ಹೇಳಿಕೆಗೆ ಬದ್ಧರಾಗಿ, ನಿವೃತ್ತಿಯಾಗಬಹುದು ಎಂಬುದು ಅವರನ್ನು ಹತ್ತಿರದಿಂದ ಬಲ್ಲವರ ನಂಬಿಕೆ.

Facebook Comments