ಕಲ್ಯಾಣ ಕರ್ನಾಟಕದ ಜನರ ಬದುಕಿನಲ್ಲಿ ಹೊಸ ಶಕೆಯೊಂದು ಪ್ರಾರಂಭವಾಗಲಿದೆ : ಬಿಎಸ್ವೈ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.9- ಹೆಸರಿಗೆ ಮಾತ್ರ ಕಲ್ಯಾಣ ಕರ್ನಾಟಕ ಎಂದು ಕರೆದರೆ ಸಾಲದು. ಈ ಭಾಗದ ಆರು ಜಿಲ್ಲೆಗಳು ರಾಜ್ಯದ ಇತರೆ ಭಾಗಗಳಂತೆ ಸರ್ವಾಂಗೀಣ ಅಭಿವೃದ್ದಿಯಾದಾಗ ಮಾತ್ರ ಸಾರ್ಥಕವಾಗುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಆಶಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ವಿಡಿಯೋ ಕಾನ್ಫರೆನ್ಸ್ ಮುಖಾಂತರ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕøತಿಕ ಸಂಘ ಕಲಬುರ್ಗಿ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದರು.

ಕೃಷಿ, ಆರೋಗ್ಯ, ಶಿಕ್ಷಣ, ಸ್ವಯಂ ಉದ್ಯೋಗ, ಗ್ರಾಮ ಸಬಲೀಕರಣ, ಯುವಜನ ಹಾಗೂ ಮಹಿಳಾ ಸಬಲೀಕರಣ ಮತ್ತು ನೈತಿಕ ತತ್ವಗಳನ್ನು ಸಾಧಿಸಿ, ಕಲ್ಯಾಣ ಕರ್ನಾಟಕದ ಜನರ ಬದುಕಿನಲ್ಲಿ ಹೊಸ ಶಕೆಯೊಂದು ಪ್ರಾರಂಭವಾಗಲಿದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕøತಿಕ ಸಂಘ ಈ ದಿಸೆಯಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಿದೆ ಎನ್ನುವುದು ನನ್ನ ನಂಬಿಕೆಯಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸ್ಥಳೀಯ ಅಸ್ಮಿತೆ ಕಾಪಾಡಿಕೊಂಡು ಜಾಗತಿಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವ ಸುಸಂದರ್ಭವನ್ನು ಕೊರೋನೋತ್ತರ ಬೆಳವಣಿಗೆಗಳು ಒದಗಿಸಿ ಕೊಟ್ಟಿವೆ. ಸಂಘದ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರುವ ದೃಷ್ಟಿಯಿಂದ 3 ಸಾವಿರ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಭಾಗದ ಜನರಲ್ಲಿ ಕೌಶಲ್ಯ ಸುಧಾರಿಸಿ ಉತ್ಪಾದನೆ ಮತ್ತು ಸೇವಾ ವಲಯಗಳಲ್ಲಿ ಪರಿಣಾಮಕಾರಿ ಬೆಳವಣೆಗೆ ಸಾಧಿಸುವುದು ನಮ್ಮ ಗುರಿ. ಕಲ್ಯಾಣ ಕರ್ನಾಟಕ ಪ್ರಾಂತ್ಯದ ಅಭಿವೃದ್ಧಿಗೆ ಹೊಸ ಆಯಾಮ ನೀಡುವುದು ನಮ್ಮ ಸರ್ಕಾರದ ಗುರಿ. ಈ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಸಂಘವು ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ಆಶ್ವಾಸನೆ ಕೊಟ್ಟರು.

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 500 ಕೋಟಿ ರೂ. ಗಳನ್ನು ಆಯವ್ಯಯದಲ್ಲಿ ತೆಗೆದಿರಿಸಿದೆ. ಸ್ವಾಲಂಬನೆಯ ಹಾದಿಯಲ್ಲಿ ಪ್ರಧಾನಿ ಮೋದಿಯವರು ಘೋಷಿಸಿರುವ ಆತ್ಮ ನಿರ್ಭರ್ ಭಾರತ್ ಅಭಿಯಾನ ಅತ್ಯಂತ ಸೂಕ್ತವಾದುದಾಗಿದೆ ಎಂದು ಅಭಿಪ್ರಾಯಪಟ್ಟರು.

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸಾವಯವ ಕೃಷಿ ಕೇಂದ್ರಗಳ ಸ್ಥಾಪನೆ, ವ್ಯಕ್ತಿತ್ವ ವಿಕಸನಕ್ಕಾಗಿ ವಿಚಾರ ಸಂಕಿರಣ, ಸ್ವಯಂ ಉದ್ಯೋಗ ಹಾಗೂ ಕೌಶಲ್ಯ ತರಬೇತಿ, ಆರೋಗ್ಯ ಶಿಬಿರಗಳನ್ನು ಆಯೋಜಿಸಲು ಉದ್ದೇಶಿಸಿರುವುದು ಸಕಾಲಿಕವಾಗಿದೆ ಎಂದು ಹೇಳಿದರು.

ಯುವ ಜನ ಹಾಗೂ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿದೆಯಲ್ಲದೆ, ಗ್ರಾಮಗಳ ಸಬಲೀಕರಣಕ್ಕಾಗಿ ಆರ್ಥಿಕ ಉತ್ತೇಜನ ನೀಡುವುದರ ಜೊತೆಗೆ ಸಾಮಾಜಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ದಿಗೆ ಸಹಕಾರಿಯಾಗಲಿದೆ ಎಂದು ನಾನು ಭಾವಿಸಿದ್ದೇನೆ ಎಂದು ತಿಳಿಸಿದರು.

Facebook Comments