ಕೊರೊನಾ ನಿಯಂತ್ರಣಕ್ಕೆ ಹಮ್ಮಿಕೊಂಡಿದ್ದ ಧನ್ವಂತರಿ ಯಾಗದಲ್ಲಿ ಪಾಲ್ಗೊಂಡ ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.16- ಸಾರ್ವಜನಿಕರು ಸಹಜ ಜೀವನ ನಡೆಸಬೇಕಾದ ಅಗತ್ಯವಿರುವುದರಿಂದ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲಾಕ್‍ಡೌನ್ ಮರು ಜಾರಿ ಮಾಡಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುನರುಚ್ಚರಿಸಿದ್ದಾರೆ. ನಗರದ ಶಂಕರಮಠದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಹಮ್ಮಿಕೊಂಡಿದ್ದ ಧನ್ವಂತರಿ ಯಾಗದಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ರಾಜ್ಯದಲ್ಲಿ ಲಾಕ್‍ಡೌನ್ ಜಾರಿ ಮಾಡಬೇಕಾದ ಅಗತ್ಯವಿಲ್ಲ. ಈಗಾಗಲೇ ಲಾಕ್‍ಡೌನ್ ಜಾರಿಮಾಡಿದ ಪರಿಣಾಮ ಹಲವಾರು ರೀತಿಯ ಪರಿಣಾಮಗಳು ಎದುರಾಗಿವೆ. ಪುನಃ ಅಂತಹ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನಾಳೆ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ವಿಡಿಯೋ ಸಂವಾದವಿದೆ. ಈ ವೇಳೆ ರಾಜ್ಯದಲ್ಲಿ ಇನ್ನಷ್ಟು ವಿನಾಯಿತಿ ನೀಡಬೇಕೆಂದು ಮನವಿ ಮಾಡಲಾಗುವುದು. ಕರ್ನಾಟಕದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ಅನಗತ್ಯವಾಗಿ ಗೊಂದಲಗಳಿಗೆ ಕಿವಿಗೊಡಬಾರದು ಎಂದು ಸಿಎಂ ಮನವಿ ಮಾಡಿದರು.

ಸಾಮಾಜಿಕ ಅಂತರ, ಮಾಸ್ಕ್ ಹಾಗೂ ಸ್ಯಾನಿಟೈಜರ್ ಬಳಕೆ ಮಾಡುವುದರಿಂದ ಕೊರೊನಾ ನಿಯಂತ್ರಿಸಬಹುದು. ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಗುರುವಾರ ಮಾಸ್ಕ್ ಡೇ ಆಚರಣೆ ಮಾಡುತ್ತಿದ್ದೇವೆ. ರಾಜ್ಯಾದ್ಯಂತ ಇನ್ನು ಮುಂದೆ ಯಾರೂ ಮಾಸ್ಕ್ ಧರಿಸದೆ ಮನೆಯಿಂದ ಆಚೆ ಬರುತ್ತಾರೋ ಅಂತಹವರಿಗೆ 200ರೂ. ದಂಡ ವಿಧಿಸುವ ನಿಯಮ ಜಾರಿಮಾಡುತ್ತೇವೆ ಎಂದು ಹೇಳಿದರು.

ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಕೊರೊನಾ ಸಾಕಷ್ಟು ನಿಯಂತ್ರಣದಲ್ಲಿದೆ. ರಾಷ್ಟ್ರೀಯ ಸರಾಸರಿಗೂ ನಮ್ಮ ಸರಾಸರಿಗೂ ಹೋಲಿಸಿದರೆ ನಮ್ಮ ರಾಜ್ಯದಲ್ಲಿರುವುದು ಏನೇನೂ ಅಲ್ಲ.  ನಮಗೆ ಮಹಾರಾಷ್ಟ್ರ, ಗುಜರಾತ್, ದೆಹಲಿ ಮತ್ತಿತರ ರಾಜ್ಯಗಳಿಂದ ಬಂದ ಪರಿಣಾಮ ಸೋಂಕಿನ ಪ್ರಮಾಣ ಹೆಚ್ಚಳವಾಯಿತು. ಇಲ್ಲದಿದ್ದರೆ ಅವಧಿಗೂ ಮುನ್ನವೇ ಸಾಕಷ್ಟು ನಿಯಂತ್ರಣಕ್ಕೆ ಬರುತ್ತಿತ್ತೆಂದು ಹೇಳಿದರು.

ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಹೇಳಿಕೊಳ್ಳುವಂತಹ ಸ್ಥಿತಿಯಲ್ಲಿಲ್ಲ. ಆದರೂ ನಾಡಿನ ಪ್ರತಿಯೊಬ್ಬರೂ ನೆಮ್ಮದಿಯಾಗಿರಬೇಕೆಂದು ಸರ್ಕಾರ ಕಷ್ಟದ ಕಾಲದಲ್ಲೂ ಹಲವಾರು ಕ್ರಮಗಳನ್ನು ಕೈಗೊಂಡಿದೆ.  ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ನೀಡಲಾಗುತ್ತಿದ್ದ 4000ರೂ. ಜತೆಗೆ ರಾಜ್ಯ ಸರ್ಕಾರ 2000ರೂ. ನೆರವು ನೀಡುತ್ತಿತ್ತು.

ಇದರಂತೆ ನಿನ್ನೆ ಸುಮಾರು 50 ಲಕ್ಷ ರೈತರಿಗೆ ಒಂದು ಸಾವಿರ ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಲಾಕ್‍ಡೌನ್ ಪರಿಣಾಮ ಯಾರೊಬ್ಬರೂ ಸಮಸ್ಯೆಗೆ ಸಿಲುಕಬಾರದು. ಈಗಾಗಲೇ ಎಲ್ಲ ಸಮುದಾಯಕ್ಕೂ ಪ್ಯಾಕೇಜ್ ಘೋಷಿಸಲಾಗಿತ್ತು.ಹಂತ ಹಂತವಾಗಿ ಹಣ ಫಲಾನುಭವಿಗಳಿಗೆ ತಲುಪಲಿದೆ ಎಂದರು.

ದೇಶದಲ್ಲೇ ಅತಿ ಹೆಚ್ಚು ಕೋವಿಡ್ ಪ್ರಕರಣಗಳನ್ನು ಚಿಕಿತ್ಸೆಗೆ ಒಳಪಡಿಸುತ್ತಿರುವ ರಾಜ್ಯವೆಂದರೆ ಕರ್ನಾಟಕ. ಪ್ರತಿದಿನ ಸಾವಿರಾರು ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದ್ದೇವೆ. ನಮ್ಮಲ್ಲಿ ಎಲ್ಲ ರೀತಿಯ ಸೌಲಭ್ಯಗಳಿವೆ. ಜನರು ಕಿವಿಮಾತುಗಳಿಗೆ ಗಮನ ಕೊಡಬಾರದು ಎಂದು ಮನವಿ ಮಾಡಿದರು.

# ವರಿಷ್ಠರ ತೀರ್ಮಾನಕ್ಕೆ: ಇನ್ನು ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿದ ಬಿಎಸ್‍ವೈ ನಿನ್ನೆ ಪಕ್ಷದ ಪ್ರಮುಖರ ಜತೆ ಕೋರ್ ಕಮಿಟಿ ಸಭೆ ನಡೆಸಲಾಗಿದೆ. ವರಿಷ್ಠರು ಯಾವ ತೀರ್ಮಾನ ಕೈಗೊಳ್ಳುತ್ತಾರೋ ಅದಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ಹೇಳಿದರು.

ಇದಕ್ಕೂ ಮುನ್ನ ಶಂಕರಮಠದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಮಠದ ವತಿಯಿಂದ ಧನ್ವಂತರಿ ಯಾಗವನ್ನು ಹಮ್ಮಿಕೊಳ್ಳಲಾಗಿತ್ತು. ಸಿಎಂ ಬಿಎಸ್‍ವೈ ಅವರು ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿ ಆದಷ್ಟು ಶೀಘ್ರ ರಾಜ್ಯ ಕೊರೊನಾ ಮುಕ್ತವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು. ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

Facebook Comments