ಪ್ರಧಾನಿ ಮೋದಿ ವೀಡಿಯೋ ಸಂವಾದದಲ್ಲಿ ಸಿಎಂ ಬಿಎಸ್‌ವೈ ಭಾಗಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.17- ಕೊರೊನಾ ನಿಯಂತ್ರಣ ಹಾಗೂ ಲಾಕ್ ಡೌನ್ ಸಡಿಲಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವೀಡಿಯೋ ಸಂವಾದ ನಡೆಸುತ್ತಿದ್ದು, ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಪ್ರಧಾನಿಗಳ ಜೊತೆ ವೀಡಿಯೋ ಸಂವಾದದಲ್ಲಿ ಭಾಗಿಯಾಗಲಿದ್ದಾರೆ.

ಗೃಹ ಕಚೇರಿ ಕೃಷ್ಣಾದಿಂದ ಮಧ್ಯಾಹ್ನ 3 ಗಂಟೆಗೆ ವೀಡಿಯೋ ಸಂವಾದದಲ್ಲಿ ಪಾಲ್ಲೊಳ್ಳಲಿರುವ ಸಿಎಂ, ಕೊರೊನಾ ನಿಯಂತ್ರಣ ಸಂಬಂಧ ರಾಜ್ಯ ಕೈಗೊಂಡಿರುವ ಕ್ರಮಗಳು, ಕೊರೊನಾ ಮಾರ್ಗಸೂಚಿ ಪಾಲನೆ, ಕಂಟೈನ್ಮೆಂಟ್ ಝೋನ್‍ಗಳಲ್ಲಿ ಕಠಿಣ ಕ್ರಮ ಕೈಗೊಂಡಿರುವ ಕುರಿತು ಸಮಗ್ರವಾದ ಮಾಹಿತಿ ನೀಡಲಿದ್ದಾರೆ.

ಹೊರ ರಾಜ್ಯದಿಂದ ಅದರಲ್ಲಿಯೂ ಮಹಾರಾಷ್ಟ್ರದಿಂದ ಬಂದವರಲ್ಲೇ ಹೆಚ್ಚು ಕೊರೊನಾ ಪಾಸಿಟಿವ್ ಕಂಡು ಬಂದಿದ್ದು, ಇತರ ರಾಜ್ಯಗಳಿಂದ ಬಂದವರಿಗೂ, ವಿದೇಶದಿಂದ ಬಂದವರಲ್ಲಿಯೂ ಕೊರೊನಾ ಪಾಸಿಟಿವ್ ಬಂದಿರುವ ಕುರಿತು ವಿವರ ನೀಡಿ, ಸ್ಥಳೀಯವಾಗಿ ಕೊರೊನಾ ನಿಯಂತ್ರಣದಲ್ಲಿದೆ ಎನ್ನುವುದನ್ನು ಪ್ರಧಾನಿಗೆ ಮನವರಿಕೆ ಮಾಡಿಕೊಡಲಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಅನ್‍ಲಾಕ್ ಜರಿಗೊಂಡಿರುವ ಕಾರಣ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತಷ್ಟು ಸಡಿಲಿಕೆ ಬಗ್ಗೆ ಬೇಡಿಕೆ ಇಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಉಳಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೊರೊನಾ ಪ್ಯಾಕೇಜ್ ಬಳಕೆ, ಆರ್ಥಿಕ ಚಟುವಟಿಕೆ ಪುನಾರಂಭದ ನಂತರದ ಬೆಳವಣಿಗೆ,ಸಾರಿಗೆ ಸಂಚಾರ ಆರಂಭಗೊಂಡ ನಂತರದ ಸ್ಥಿತಿಗತಿ, ಕೊರೊನಾ ವಾರಿಯರ್ಸ್ ಕಾರ್ಯವೈಖರಿ, ಪ್ರತಿದಿನ ನಡೆಸುವ ಕೊರೊನಾ ಪರೀಕ್ಷೆ, ಲ್ಯಾಬ್‍ಗಳು , ಆಸ್ಪತ್ರೆಗಳ ವಿವರ ನೀಡುವ ಜೊತೆಯಲ್ಲಿ ಆಗಸ್ಟ್‍ನಲ್ಲಿ ಕೊರೊನಾ ಹೆಚ್ಚಾಗುವ ಕುರಿತು ತಜ್ಞರು ನೀಡಿರುವ ವರದಿ ಸಂಬಂಧ ಪಿಎಂ ಜೊತೆ ಚರ್ಚೆ ನಡೆಸಲಿದ್ದಾರೆ.

Facebook Comments