ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಕ್ಕೂ ಬೆಡ್ ಸಿಗದಿರುವುದಕ್ಕೂ ಸಂಬಂಧ ಕಲ್ಪಿಸಬೇಡಿ : ಸಿಎಂ ಬಿಎಸ್‍ವೈ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.30- ಯಾರೊ ಒಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಕ್ಕೂ ಬೆಡ್ ಸಿಗದಿರುವುದಕ್ಕೂ ಸಂಬಂಧ ಕಲ್ಪಿಸುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಆಕ್ಷೇಪಿಸಿದ್ದಾರೆ.

ಬೆಂಗಳೂರಿನಲ್ಲಿ ಕೊರೊನಾ ಸೋಂಕಿತ ಯುವಕನೊಬ್ಬ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾನೆ ಎಂಬ ಆರೋಪ ಕುರಿತಂತೆ ಮಾತನಾಡಿದ ಅವರು, ಆತ ಸಾವನ್ನಪ್ಪಿರುವುದಕ್ಕೂ, ಬೆಡ್ ಸಿಗದಿರುವುದಕ್ಕೂ ಒಂದಕ್ಕೊಂದು ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯ ಸರ್ಕಾರ ಕೊರೊನಾ ಸೋಂಕು ಹಬ್ಬದಂತೆ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದೆ. ಸಾರ್ವಜನಿಕರು ನಮಗೆ ಇನ್ನಷ್ಟು ಸಹಕಾರ ನೀಡಬೇಕು. ಆಗ ಮಾತ್ರ ಇದನ್ನು ನಿಯಂತ್ರಿಸಲು ಸಾಧ್ಯ ಎಂದು ಹೇಳಿದರು.  ಸರ್ಕಾರ ಶಕ್ತಿ ಮೀರಿ ಪ್ರಮಾಣಿಕವಾಗಿ ಕೆಲಸ ಮಾಡುತ್ತಿದೆ.

ಇಡೀ ದೇಶದಲ್ಲಿ ಕೊರೊನಾ ನಿಯಂತ್ರಿಸಲು ಇಷ್ಟೊಂದು ಬಿಗಿಯಾದ ಕ್ರಮಗಳನ್ನು ಯಾರೂ ಕೈಗೊಂಡಿಲ್ಲ. ಇನ್ನು ಮಾಡಬೇಕಾದ ಕೆಲಸಗಳು ಬೇಕಾದಷ್ಟಿದೆ ಎಂದು ತಿಳಿಸಿದರು.

ನಿನ್ನೆ ಖಾಸಗಿ ಆಸ್ಪತ್ರೆಯ ಮುಖ್ಯಸ್ಥರೊಂದಿಗೆ ನಡೆದ ಸಭೆ ಫಲಪ್ರದವಾಗಿದೆ. ನಿನ್ನೆಯೇ 2000 ಹಾಸಿಗೆಗಳನ್ನು ನೀಡಲು ಒಪ್ಪಿಕೊಂಡಿದ್ದರು. ಇಂದು 750 ಹಾಸಿಗೆಗಳನ್ನು ನೀಡಲಿದ್ದಾರೆ. ಅನಗತ್ಯವಾಗಿ ಖಾಸಗಿ ಆಸ್ಪತ್ರೆಗಳನ್ನು ಏಕೆ ದೂರುತ್ತೀರಿ ಎಂದು ಪ್ರಶ್ನಿಸಿದರು.

ಇಂದು ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರ ಜೊತೆ ಸಭೆ ನಡೆಯಲಿದೆ. ನಮಗೆ ಇಲ್ಲಿಯೂ ಹೆಚ್ಚಿನ ಹಾಸಿಗೆಗಳು ಸಿಗಲಿವೆ. ರಾಜ್ಯದ ಯಾವುದೇ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಹಾಸಿಗೆಗಳ ಸಮಸ್ಯೆ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.

ಬೆಂಗಳೂರಿನ 52 ವರ್ಷದ ನಗರಪೇಟೆ ನಿವಾಸಿಯೊಬ್ಬರು ಶನಿವಾರ ಸಂಜೆ ತೀವ್ರ ಜ್ವರ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ನಗರದ ಪ್ರಮುಖ ಆಸ್ಪತ್ರೆ ಸೇರಿದಂತೆ 18 ಆಸ್ಪತ್ರೆಗಳಲ್ಲಿ ಅಡ್ಮಿಟ್ ಮಾಡಿಕೊಳ್ಳವಂತೆ ಮನವಿ ಮಾಡಿದ್ದರು.

ಯಾವುದೇ ಆಸ್ಪತ್ರೆಯಲ್ಲೂ ಈ ವ್ಯಕ್ತಿಯನ್ನು ಆಡ್ಮಿಟ್ ಮಾಡಿಕೊಂಡಿಲ್ಲ. ಭಾನುವಾರ ಸಂಜೆ ಹೊತ್ತಿಗೆ ಮತ್ತೆ ತೀವ್ರ ಉಸಿರಾಟದ ಸಮಸ್ಯೆ ಆದನಂತರ ಕನ್ನಿಂಗ್ ಹ್ಯಾಮ್ ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಗೆ ಹೋಗುವಷ್ಟರಲ್ಲಿ ವ್ಯಕ್ತಿ ಸಾವನ್ನಪ್ಪಿದ್ದರು.

Facebook Comments