ದಣಿವರಿಯದೆ ಹೋರಾಡುತ್ತಿರುವ ವೈದ್ಯರಿಗೆ ಸಿಎಂ ನಮನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.1- ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ದೇಶದಾದ್ಯಂತ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೊರೋನಾ ವಿರುದ್ಧ ದಣಿವರಿಯದೆ ಹೋರಾಡುತ್ತಿರುವ ಎಲ್ಲಾ ವೈದ್ಯರಿಗೆ ನಮನ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಪ್ರಸಕ್ತ ಸನ್ನಿವೇಶದಲ್ಲಿ ವೈದ್ಯರ ಸೇವೆ ಅತ್ಯಂತ ಮಹತ್ವಪೂರ್ಣ ಮತ್ತು ಅವಶ್ಯಕ. ನಾಡಿನ ಜನತೆಯ ಆರೋಗ್ಯ ರಕ್ಷಣೆಗೆ ವೈದ್ಯರು ಹಗಲಿರುಳು ತಮ್ಮ ಪ್ರಾಣದ ಹಂಗು ತೊರೆದು ಶ್ರಮಿಸುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಮಾತ್ರವೇ ಅಲ್ಲದೇ ವರ್ಷಪೂರ್ತಿ ಜನರ ಸ್ವಾಸ್ಥ್ಯಕ್ಕಾಗಿ ತಮ್ಮ ಸೇವೆಯನ್ನು ಮುಡಿಪಾಗಿಟ್ಟಿರುವ ವೈದ್ಯ ಸಮುದಾಯವನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ.

ಕೋವಿಡ್-19ನ್ನು ಎದುರಿಸಿ ಜನತೆಗೆ ಭರವಸೆ ಮೂಡಿಸುವ ನಿಟ್ಟಿನಲ್ಲಿ ವೈದ್ಯರು ಯಶಸ್ಸು ಸಾಧಿಸುತ್ತಾರೆನ್ನುವ ವಿಶ್ವಾಸ ನನಗಿದೆ ಎಂದಿದ್ದಾರೆ. ಎಲ್ಲಾ ವೈದ್ಯರಿಗೆ ರಾಷ್ಟ್ರೀಯ ವೈದ್ಯರ ದಿನದ ಹಾರ್ದಿಕ ಶುಭಕಾಮನೆಗಳು, ಅನಾರೋಗ್ಯ ಉಂಟಾದಾಗ ಚಿಕಿತ್ಸೆ ನೀಡುವ ವೈದ್ಯರನ್ನು ದೇವರಂತೆ ಕಾಣುತ್ತೇವೆ.

ವೈದ್ಯರ ಕರ್ತವ್ಯನಿಷ್ಠೆ, ಪರಿಶ್ರಮ ಮತ್ತು ಸೇವೆಗಳನ್ನು ಸಮಾಜ ಸದಾ ಆದರಿಸುತ್ತದೆ. ಈ ಕೋವಿಡ್ ವಿರುದ್ಧ ದಣಿವರಿಯದೆ ಹೋರಾಡುತ್ತಿರುವ ಎಲ್ಲಾ ವೈದ್ಯರಿಗೆ ಹೃತ್ಪೂರ್ವಕ ಧನ್ಯವಾದ ಸಲ್ಲಿಸೋಣ ಎಂದು ತಿಳಿಸಿದ್ದಾರೆ.

Facebook Comments