ಮತ್ತೆ ಲಾಕ್‍ಡೌನ್ ಪ್ರಶ್ನೆಯೇ ಇಲ್ಲ, ಪ್ಲೀಸ್ ಬೆಂಗಳೂರು ಬಿಟ್ಟು ಹೋಗ್ಬೇಡಿ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.6- ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಪುನಃ ಲಾಕ್‍ಡೌನ್ ಜಾರಿ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಜನರು ಬೆಂಗಳೂರು ಬಿಟ್ಟು ಹೋಗದಂತೆ ಮನವಿ ಮಾಡಿದ್ದಾರೆ.

ಕೊರೊನಾ ಜೊತೆ ಬದುಕಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಸರ್ಕಾರದ ಮುಂದೆ ಲಾಕ್‍ಡೌನ್ ಮಾಡುವ ಆಲೋಚನೆ ಇಲ್ಲ ಎಂದು ಅವರು ಪುನರುಚ್ಚರಿಸಿದರು.

ವಿಧಾನಸೌಧದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಅವರ ಪುಣ್ಯತಿಥಿ ಅಂಗವಾಗಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ನಾನು ರಾಜ್ಯದ ಜನತೆ ಹಾಗೂ ಬೆಂಗಳೂರಿನ ನಾಗರಿಕರಿಗೆ ಮನವಿ ಮಾಡಿಕೊಳ್ಳುವುದೇನೆಂದರೆ ಲಾಕ್‍ಡೌನ್ ಮಾಡಲಾಗುತ್ತಿದೆ ಎಂಬುದು ಕೇವಲ ವದಂತಿ ಅಷ್ಟೇ. ಇಂತಹ ಊಹಪೋಹಗಳಿಗೆ ಯಾರೊಬ್ಬರು ಕಿವಿಗೊಡಬಾರದು ಎಂದು ಹೇಳಿದರು.

ರಾಜ್ಯ ಸರ್ಕಾರ ಎಲ್ಲಿಯೂ ಕೊರೊನಾ ನಿಯಂತ್ರಣ ಮಾಡುವಲ್ಲಿ ವಿಫಲವಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಏನೇನು ಕ್ರಮಗಳನ್ನು ಕೈಗೊಳ್ಳಬೇಕಿತ್ತೊ ಎಲ್ಲವನ್ನೂ ತೆಗೆದುಕೊಂಡಿದ್ದೇವೆ. ಸಾರ್ವಜನಿಕರು ಸರ್ಕಾರದ ಜೊತೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ಬೆಂಗಳೂರಿನಲ್ಲಿ 10 ಸಾವಿರ ಹಾಸಿಗೆ ವ್ಯವಸ್ಥೆ, 450 ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದ್ದೇವೆ. ಸೋಂಕಿನ ಪ್ರಕರಣಗಳು ಹೆಚ್ಚಾದ ತಕ್ಷಣ ಜನತೆ ಗಾಬರಿಯಾಗುವುದು ಬೇಡ.

ಜನರ ಜೀವನ ಬಹುಮುಖ್ಯವಾಗಿರುವುದರಿಂದ ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಸಾರ್ವಜನಿಕರು ಅಂತರ ಕಾಪಾಡಿಕೊಂಡು ಕೋವಿಡ್ ಜೊತೆಗೆ ಬದುಕುವುದು ಅನಿವಾರ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದರು.

ತಪ್ಪಿತಸ್ಥರ ಮೇಲೆ ಶಿಸ್ತುಕ್ರಮ: ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಖರೀದಿ ಮಾಡಿರುವ ಉಪಕರಣಗಳಲ್ಲಿ ಭ್ರಷ್ಟಾಚಾರ ಇಲ್ಲವೇ ಅವ್ಯವಹಾರ ನಡೆದಿರುವುದು ಸಾಬೀತಾದರೆ ಅಧಿಕಾರಿಗಳು ಸೇರಿದಂತೆ ಯಾರೇ ಇದ್ದರೂ ಅವರ ಮೇಲೆ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.

ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಂಕಿ ಅಂಶಗಳನ್ನು ನೋಡಿಕೊಂಡು ಮಾತನಾಡಬೇಕು. ಅವರಿಗೆ ದಾಖಲೆಗಳು ಬೇಕಿದ್ದರೆ ಅಧಿಕಾರಿಗಳು ನೀಡುತ್ತಾರೆ. ಅದನ್ನು ನೋಡಿ ಮಾತನಾಡಲಿ. ದಾಖಲೆಗಳಿಲ್ಲದೆ ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದು ಬಿಎಸ್‍ವೈ ತಿರುಗೇಟು ನೀಡಿದರು.

ಒಂದು ವೇಳೆ ಖರೀದಿಯಲ್ಲಿ ವ್ಯತ್ಯಾಸ ಕಂಡುಬಂದರೆ ಅಂಥವರ ಮೇಲೆ ಶಿಸ್ತುಕ್ರಮ ಜರುಗಿಸುತ್ತೇನೆ. ನಮ್ಮಲ್ಲಿ ಯಾವುದಾದರೂ ಲೋಪಗಳಿದ್ದರೆ ಸರ್ಕಾರಕ್ಕೆ ಸಲಹೆ ನೀಡಲಿ. ಆದರೆ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದರು.

ನಾನು ಇದುವರೆಗೂ ಅವರ ಟೀಕೆಗಳಿಗೆ ಉತ್ತರಿಸಬಾರದೆಂದು ಸುಮ್ಮನಿದ್ದೆ. ಆದರೆ ಆಧಾರರಹಿತವಾಗಿ ಆರೋಪ ಮಾಡಿರುವುದಕ್ಕೆ ಪ್ರತಿಕ್ರಿಯಿಸಬೇಕಾಯಿತು. ಕೋವಿಡ್ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸೌಧಕ್ಕೆ ಬಂದು ಚರ್ಚೆ ಮಾಡಲಿ. ನಾವು ಕೂಡ ಅಲ್ಲಿಯೇ ಎಲ್ಲದಕ್ಕೂ ಉತ್ತರ ಕೊಡುತ್ತೇವೆ ಎಂದು ಗುಡುಗಿದರು.

ಇದಕ್ಕೂ ಮುನ್ನ ಬಾಬು ಜಗಜೀವನ್‍ರಾಮ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಇಂದಿನ ಯುವ ಪೀಳಿಗೆಗೆ ಅವರ ಆದರ್ಶ ಮತ್ತು ಚಿಂತನೆಗಳು ಅಗತ್ಯ ಎಂದು ಅಭಿಪ್ರಾಯಪಟ್ಟರು.  ಕೃಷಿ, ರಕ್ಷಣಾ ಸಚಿವರಾಗಿ ನಂತರ ಉಪಪ್ರಧಾನಿಯೂ ಆಗಿದ್ದ ಬಾಬು ಜಗಜೀವನ್ ರಾಮ್ ಅವರು ಕೃಷಿಯಲ್ಲಿ ಮಾಡಿದ ಅದ್ವಿತೀಯ ಸಾಧನೆಯಿಂದ ಅವರನ್ನು ಹಸಿರುಕ್ರಾಂತಿ ಹರಿಕಾರ ಎಂದು ಕರೆಯುತ್ತಾರೆ. ಅಂಥ ಧೀಮಂತ ವ್ಯಕ್ತಿಯ ಚಿಂತನೆಗಳು ನಮ್ಮೆಲ್ಲರಿಗೂ ಆದರ್ಶಪ್ರಾಯ ಎಂದು ಹೇಳಿದರು.

ಈ ವೇಳೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಂಸದ ಎ.ನಾರಾಯಣಸ್ವಾಮಿ, ಮಾಜಿ ಸಚಿವ ಎಚ್.ಆಂಜನೇಯ ಮತ್ತಿತರರು ಉಪಸ್ಥಿತರಿದ್ದರು.

Facebook Comments