ಕೋವಿಡ್ ಕೇಂದ್ರಗಳಿಗೆ ನಾಳೆ ಖುದ್ದು ಭೇಟಿ ನೀಡಲಿದ್ದಾರೆ ಸಿಎಂ ಯಡಿಯೂರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.8- ಕೊರೊನಾ ಸೋಂಕು ತೀವ್ರಗತಿಯಲ್ಲಿ ಹಬ್ಬುತ್ತಿರುವುದರಿಂದ ನಾಳೆ ಮುಖ್ಯಮಂತ್ರಿ ಯಡಿಯೂರಪ್ಪ ಕೋವಿಡ್ ಕೇಂದ್ರಗಳಿಗೆ ಭೇಟಿ ನೀಡಿ ಸ್ವಚ್ಛತೆಗೆ ಪರಿಶೀಲನೆ ನಡೆಸಲಿದ್ದಾರೆ.

ಮೊದಲು ತುಮಕೂರು ರಸ್ತೆಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದು, ರಾಜ್ಯ ಸರ್ಕಾರ ಇಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ 10,000 ಹಾಸಿಗೆ ಸಾಮಥ್ರ್ಯವುಳ್ಳ ಪ್ರತ್ಯೇಕ ಕೊರೊನಾ ಆಸ್ಪತ್ರೆಯನ್ನು ತೆರೆದಿದೆ.

ಹೀಗಾಗಿ ನಾಳೆ ಖುದ್ದು ಸ್ಥಳಕ್ಕೆ ಭೇಟಿ ಕೊಟ್ಟು ಇಲ್ಲಿನ ಸ್ವಚ್ಛತೆ, ಮೂಲಭೂತ ಸೌಕರ್ಯ, ರೋಗಿಗಳಿಗೆ ಬೇಕಾದ ಸವಲತ್ತುಗಳನ್ನು ಕುರಿತು ಪರಿಶೀಲನೆ ನಡೆಸಲಿದ್ದಾರೆ. ಇದೇ ರೀತಿ ಬೆಂಗಳೂರಿನಲ್ಲಿರುವ ಕೆಲವು ಕೋವಿಡ್ ಸೆಂಟರ್‍ಗಳಿಗೂ ಸಿಎಂ ಭೇಟಿ ನೀಡಿ, ಅಲ್ಲಿನ ಪರಿಸರ, ಸೋಂಕಿತರಿಗೆ ಚಿಕಿತ್ಸೆ ನೀಡಲು ಕೈಗೊಂಡಿರುವ ಕ್ರಮಗಳ ಕುರಿತು ಸಂಬಂಧಪಟ್ಟವರಲ್ಲಿ ಚರ್ಚೆ ನಡೆಸಲಿದ್ದಾರೆ.

ರಾಜದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 25 ಸಾವಿರದ ಗಡಿ ದಾಟಿದೆ. ಈ ಸೋಂಕು ಹರಡುವಿಕೆ ನಿಯಂತ್ರಿಸುವುದು ಮುಖ್ಯಮಂತ್ರಿಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಹೀಗಾಗಿ ಸಿಎಂ ಯಡಿಯೂರಪ್ಪ ಕೊರೋನಾ ವಿರುದ್ಧ ಹೋರಾಡುವ ಬಗ್ಗೆ ಚರ್ಚಿಸಲು ಸಾಲುಸಾಲು ಸಭೆಗಳನ್ನು ನಡೆಸುತ್ತಿದ್ದು, ನಾಳೆ ಕೋವಿಡ್ ಕೇರ್ ಸೆಂಟರ್‍ಗಳಿಗೆ ಭೇಟಿ ನೀಡುತ್ತಿದ್ದಾರೆ.

ಬೆಂಗಳೂರಿನಲ್ಲಿರುವ ಕೋವಿಡ್-19 ಕೇರ್ ಸೆಂಟರ್ಗಳಿಗೆ ಭೇಟಿ ನೀಡಲಿರುವ ಸಿಎಂ ಯಡಿಯೂರಪ್ಪ ಕೊರೋನಾ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳ ಪರಿಶೀಲನೆ ನಡೆಸಲಿದ್ದು, ಕೋವಿಡ್-19 ಕೇರ್ ಸೆಂಟರ್‍ಗಳಲ್ಲಿ ಕೊರೋನಾ ರೋಗಿಗಳಿಗೆ ಕಲ್ಪಿಸಿರುವ ವ್ಯವಸ್ಥೆ ಬಗ್ಗೆ ಪರಿಶೀಲಿಸಲಿದ್ಧಾರೆ.

ಕರ್ನಾಟಕದಲ್ಲೇ ಅತೀಹೆಚ್ಚು ಕೊರೋನಾ ಕೇಸುಗಳ ದಾಖಲಾಗುತ್ತಿರುವುದು ಬೆಂಗಳೂರಿನಲ್ಲೇ. ವಿರೋಧ ಪಕ್ಷಗಳು ಕೊರೋನಾ ಮಟ್ಟಹಾಕಲು ಬೆಂಗಳೂರನ್ನು ಸಂಪೂರ್ಣ ಲಾಕ್‍ಡೌನ್ ಮಾಡಿ ಎಂದು ಒತ್ತಾಯಿಸಿವೆ.  ಆದರೆ, ಬೆಂಗಳೂರು ನಗರದಲ್ಲಿ ಮತ್ತೊಮ್ಮೆ ಲಾಕ್‍ಡೌನ್ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿರುವ ಸರ್ಕಾರ ಕೊರೋನಾ ತಡೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಭಾರೀ ಸರ್ಕಸ್ ನಡೆಸುತ್ತಿದೆ.

Facebook Comments