ಅಕ್ಕ ವಿಶ್ವ ಕನ್ನಡ ವಚ್ರ್ಯುವಲ್ ಸಮ್ಮೇಳನ ಉದ್ಘಾಟಿಸಿದ ಸಿಎಂ ಬಿಎಸ್‍ವೈ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.6-ಕನ್ನಡ ಸಾಹಿತ್ಯ, ಕಲೆ, ಸಂಸ್ಕøತಿಯನ್ನು ವಿಶ್ವಮಟ್ಟದಲ್ಲಿ ಶ್ರೀಮಂತಗೊಳಿಸುವಲ್ಲಿ ಅಕ್ಕ ಸಂಸ್ಥೆಯ ಕೆಲಸ ಅದ್ಭುತವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಅಮೆರಿಕದ ಅಕ್ಕ ಸಂಸ್ಥೆ ಏರ್ಪಡಿಸಿದ್ದ ವಿಶ್ವ ಕನ್ನಡ ವಚ್ರ್ಯುವಲ್ ಸಮ್ಮೇಳನವನ್ನು ಬೆಂಗಳೂರಿನಿಂದಲೇ ಉದ್ಘಾಟಿಸಿ ಮಾತನಾಡಿದ ಅವರು, ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲಿಯೂ ಅಕ್ಕ ಸಂಸ್ಥೆ ವಿಶ್ವ ಕನ್ನಡ ಸಮ್ಮೇಳನ ಏರ್ಪಡಿಸುವ ಮೂಲಕ ಕನ್ನಡದ ಮನಸ್ಸುಗಳನ್ನು ವಿದೇಶಗಳಲ್ಲಿ ಬೆಸೆಯುವ ಕೆಲಸ ಮಾಡಿದೆ.

ಕಳೆದ ಎರಡು ದಶಕಗಳಿಂದಲೂ ಕನ್ನಡದ ಕಂಪನ್ನು, ಕನ್ನಡದ ಕಹಳೆಯನ್ನು ವಿದೇಶಗಳಲ್ಲಿ ಮೊಳಗಿಸುತ್ತಿದೆ. ಕನ್ನಡವನ್ನು ಉಳಿಸಿ ಬೆಳೆಸುತ್ತಿರುವ ಅವರ ಸೇವೆ ಅಪೂರ್ವವಾದದ್ದು ಎಂದು ಯಡಿಯೂರಪ್ಪ ಮುಕ್ತ ಕಂಠದಿಂದ ಪ್ರಶಂಸಿಸಿದರು.

ವಿಶ್ವದೆಲ್ಲೆಡೆ ಕನ್ನಡದ ಬೇರುಗಳು ಗಟ್ಟಿಯಾಗಿ ನಿಂತಿವೆ. ಕನ್ನಡ ಸಂಘಟನೆಗಳು ಕನ್ನಡವನ್ನು ಪಸರಿಸುವ, ಕನ್ನಡದ ಕಂಪನ್ನು ಸೂಸುವ ಕೆಲಸವನ್ನು ಮಾಡುತ್ತಿವೆ. ವಿಶ್ವ ಮೆಚ್ಚಿದ ನಾಯಕ, ಪ್ರಧಾನಿ ನರೇಂದ್ರ ಮೋದಿ ಅವರ ಗುಣಗಳನ್ನು ಜಗತ್ತಿಗೇ ಸಾರುವ ಕಾಯಕಕ್ಕೆ ಅಮೆರಿಕ ಕನ್ನಡಿಗರು ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ ಎಂದು ಅವರು ಹೇಳಿದರು.

ಕನ್ನಡ ಮತ್ತು ಕರ್ನಾಟಕಕ್ಕೆ ವಿಶ್ವಮಟ್ಟದ ಶ್ರೇಷ್ಠತೆ, ಮಾನ್ಯತೆ ದೊರೆತಿದೆ. ಅದಕ್ಕೆ ತವೆಲ್ಲರ ನಿಷ್ಕಾಳಜಿ, ನಿಸ್ವಾರ್ಥ ಸೇವೆ ಕಾರಣ ಎಂದು ಅವರು ಹೇಳಿದರು. ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ಹುಟ್ಟೂರು, ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿಗೆ ಸರ್ಕಾರದೊಂದಿಗೆ ಕೈ ಜೋಡಿಸಿ ನೆರವಿನ ಹಸ್ತ ಚಾಚಬೇಕೆಂದು ಈ ಸಂದರ್ಭದಲ್ಲಿ ಅವರು ಮನವಿ ಮಾಡಿದರು.

ಕೊರೊನಾ ಸಮಯದಲ್ಲಿ ವಿದೇಶದಲ್ಲಿನ ಕನ್ನಡಿಗರು ರಾಜ್ಯಕ್ಕೆ ಸಾಕಷ್ಟು ಆರ್ಥಿಕ ನೆರವು ನೀಡಿರುವುದು ಶ್ಲಾಘನೀಯ. ಪಡಿತರ ಕಿಟ್, ಆರೋಗ್ಯ ಕಿಟ್‍ಗಳು ಸೇರಿದಂತೆ ಹಲವಾರು ರೀತಿಯ ಮೂಲಕ ತಮ್ಮ ಔದಾರ್ಯವನ್ನು ತೋರಿದ್ದೀರಿ. ಔದಾರ್ಯಕ್ಕೆ ಮತ್ತೊಂದು ಹೆಸರೇ ಕನ್ನಡಿಗರು ಎಂದರೆ ತಪ್ಪಾಗಲಾರದು.

ಪ್ರವಾಹ ಸಂದರ್ಭದಲ್ಲೂ ಕೂಡ ತಾವು ನಮ್ಮ ನಾಡಿನ ಜನರ ನೋವಿಗೆ ಮಿಡಿದಿದ್ದೀರ. ಎಲ್ಲೇ ಇದ್ದರೂ ತಾಯ್ನಾಡಿನ ಜನರ ಸಂಕಷ್ಟಕ್ಕೆ ಮಿಡಿಯುವ ತಮ್ಮ ಹೃದಯ ವೈಶಾಲ್ಯತೆ ಮೆಚ್ಚುವಂಥದ್ದು ಎಂದು ಯಡಿಯೂರಪ್ಪ ಹೇಳಿದರು.

ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಸಂಸದ ಶಿವಕುಮಾರ್ ಉದಾಸಿ ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

Facebook Comments