ತುರ್ತು ಪ್ರವಾಹ ಪರಿಹಾರಕ್ಕೆ ಪ್ರಧಾನಿಗೆ ಸಿಎಂ ಬಿಎಸ್‍ವೈ ಪತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಶಿಕಾರಿಪುರ,ಅ.19- ಉತ್ತರಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಪ್ರವಾಹದಿಂದ ನಿರೀಕ್ಷೆಗೂ ಮೀರಿದ ಹೆಚ್ಚಿನ ಪ್ರಮಾಣದಲ್ಲಿ ನಷ್ಟ ಸಂಭವಿಸಿದ್ದು, ಪರಿಹಾರ ಕಾರ್ಯ ಕೈಗೊಳ್ಳಲು ಕೂಡಲೇ ರಾಜ್ಯಕ್ಕೆ ಆರ್ಥಿಕ ನೆರವು ನೀಡುವಂತೆ ಪ್ರಧಾನಿಗೆ ಪತ್ರ ಬರೆಯುವುದಾಗಿ ಮುಖ್ಯ ಮಂತ್ರಿ ಯಡಿಯೂರಪ್ಪ ಹೇಳಿದರು.  ತಮ್ಮ ತವರು ಕ್ಷೇತ್ರ ಶಿಕಾರಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬುಧವಾರ ಖುದ್ದು ನಾನೇ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸುತ್ತೇನೆ.

ವಸ್ತುಸ್ಥಿತಿ ಅಧ್ಯಯನ ನಡೆಸಿದ ಬಳಿಕ ಪರಿಹಾರಕ್ಕಾಗಿ ಕೇಂದ್ರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.  ಈಗಾಗಲೇ ಪ್ರವಾಹ ಪರಿಸ್ಥಿತಿ ಕುರಿತಂತೆ ಪ್ರಧಾನಿಯವರ ಜೊತೆ ನೇರವಾಗಿಯೇ ಮಾತುಕತೆ ನಡೆಸಿ ರಾಜ್ಯದ ಪರಿಸ್ಥಿತಿಯನ್ನು ವಿವರಿಸಲಾಗಿದೆ. ಪ್ರವಾಹ ಪೀಡಿತ ಕರ್ನಾಟಕಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ಮೋದಿ ಅವರು ಅಭಯ ನೀಡಿದ್ದಾರೆ ಎಂದರು.

ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿದಂತೆ ಅಧಿಕಾರಿಗಳ ಜೊತೆ ನಾನೇ ಖುದ್ದು ವಿಡಿಯೋ ಕಾನ್ಫರೆನ್ಸ್ ನಡೆಸಿ ಪರಿಹಾರ ಕಾರ್ಯ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಸಚಿವರಾದ ಆರ್.ಅಶೋಕ್, ಶಶಿಕಲಾ ಜೊಲ್ಲೆ, ಪ್ರಭು ಚವ್ಹಾಣ್, ಲಕ್ಷ್ಮಣ ಸವದಿ ಸೇರಿದಂತೆ ಶಾಸಕರು ಸಂತ್ರಸ್ತರನ್ನು ಭೇಟಿಯಾಗಿ ಪರಿಹಾರ ಕಾರ್ಯ ಕೈಗೊಂಡಿದ್ದಾರೆ.

ಸ್ಥಳೀಯ ಆಡಳಿತಕ್ಕೂ ನಾನೇ ಖುದ್ದುಸೂಚನೆ ಕೊಟ್ಟು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ನಿರ್ದೇಶಿಸಿದ್ದೇನೆ. ಸರ್ಕಾರ ಎಲ್ಲಿಯೂ ಕೂಡ ಸಂತ್ರಸ್ತರನ್ನು ನಿರ್ಲಕ್ಷ್ಯ ಮಾಡಿಲ್ಲ. ಈಗಾಗಲೇ ಪರಿಹಾರ ಕಾರ್ಯ ಆರಂಭವಾಗಿದೆ ಎಂದು ತಿಳಿಸಿದರು.

ವಸತಿ ನಿಲಯಗಳು ಸೇರಿದಂತೆ ಮತ್ತಿತರ ಕಡೆ ಸಂತ್ರಸ್ತರನ್ನು ಸ್ಥಳಾಂತರ ಮಾಡುವ ಕಾರ್ಯ ನಡೆಯುತ್ತಿದೆ. ಮಹಿಳೆಯರು, ಗರ್ಭಿಣಿಯರು, ಮಕ್ಕಳು ಸೇರಿದಂತೆ ಎಲ್ಲರಿಗೂ ಪೌಷ್ಟಿಕವಾದ ಆಹಾರವನ್ನೇ ನೀಡಬೇಕೆಂದು ಸೂಚಿಸಿದ್ದೇನೆ.

ಮನೆ ಕಳೆದುಕೊಂಡವರಿಗೆ ಹೊಸದಾಗಿ ಮನೆ ನಿರ್ಮಿಸಿಕೊಡುತ್ತೇವೆ. ಆರಂಭಿಕ ಹಂತದಲ್ಲಿ ಮನೆ ದುರಸ್ತಿಗೆ 10 ಸಾವಿರ ರೂ. ಬಿಡುಗಡೆ ಮಾಡಿದ್ದೇವೆ. ಸಂತ್ರಸ್ತರು ದೃತಿಗೆಡಬಾರದು ಸರ್ಕಾರ ನಿಮ್ಮ ಜೊತೆ ಇರಲಿದೆ ಎಂದು ಸಿಎಂ ಅಭಯ ನೀಡಿದರು.

Facebook Comments