ಮಳೆ ಅನಾಹುತದ ಬಗ್ಗೆ ಎಚ್ಚರ ವಹಿಸಿ : ಅಧಿಕಾರಿಗಳಿಗೆ ಸಿಎಂ ಸೂಚನೆ
ಬೆಂಗಳೂರು, ಅ.24- ನಗರದಲ್ಲಿ ಮಳೆ ಅನಾಹುತ ಹೆಚ್ಚಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಕೂಡಲೇ ಮಳೆ ಅನಾಹುತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುವುದರ ಜತೆಗೆ ಇಂದು ಮತ್ತು ನಾಳೆ ಆಗಲಿರುವ ಭಾರೀ ಪ್ರಮಾಣದ ಮಳೆ ಬಗ್ಗೆ ಎಚ್ಚರ ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಯಲ್ಲೋ ಅಲರ್ಟ್: ರಾಜ್ಯಾದ್ಯಂತ ಇನ್ನೂ ಮೂರು ದಿನ ಕರಾವಳಿ ಸೇರಿದಂತೆ ಹತ್ತಕ್ಕೂ ಹೆಚ್ಚು ಜಿಲ್ಲಾಗಳಲ್ಲಿ ಮಳೆ ಆರ್ಭಟ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರು ನಗರ, ಗ್ರಾಮಾಂತರ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು, ಮಲೆನಾಡು ಸೇರಿದಂತೆ ಒಟ್ಟು 12 ಜಿಲ್ಲಾಗಳಲ್ಲಿ ಯಲ್ಲೇ ಅಲರ್ಟ್ ಘೋಷಣೆ ಮಾಡಲಾಗಿದೆ. ತಗ್ಗು ಪ್ರದೇಶಗಳಲ್ಲಿರುವ ಮನೆಗಳ ಜನರು ಎಚ್ಚರದಿಂದಿರಬೇಕು. ಸೋಮವಾರದವರೆಗೂ ಜನರು ಮನೆಯಿಂದ ಹೊರಬರದಂತೆ ನೋಡಿಕೊಳ್ಳಬೇಕು ಎಂದು ಹವಾಮಾನ ಇಲಾಖೆ ಮನವಿ ಮಾಡಿಕೊಂಡಿದೆ.
ತತ್ತರಿಸಿದ ಬೆಂಗಳೂರು: ನಿನ್ನೆ ಸಿಲಿಕಾನ್ ಸಿಟಿಯಲ್ಲಿ ಗುಡುಗು-ಸಿಡಿಲಿನೊಂದಿಗೆ ಮೂರು ಗಂಟೆಗೂ ಹೆಚ್ಚು ಕಾಲ ಆರ್ಭಟಿಸಿದ ವರುಣನ ಅಬ್ಬರಕ್ಕೆ ಜನತೆ ತತ್ತರಿಸಿ ಹೋಗಿದ್ದಾರೆ. ಧಾರಾಕಾರವಾಗಿ ಸುರಿದ ದಾಖಲೆ ಮಳೆಗೆ ಹಲವು ಬಡಾವಣೆಗಳು ಸಂಪೂರ್ಣವಾಗಿ ಜಲಾವೃತವಾದವು. ರಸ್ತೆಗಳು ಹೊಳೆಗಳಾಗಿ ವಾಹನಗಳು ತೇಲಿ ಹೋದವು. ಗುಡುಗು-ಸಿಡಿಲಿನ ಅಬ್ಬರದೊಂದಿಗೆ ಸುರಿದ ಮಳೆ ಕರಾವಳಿ, ಮಲೆನಾಡನ್ನು ನೆನಪಿಸುವಂತಿತ್ತು.
ಹೊಸಕೆರೆಹಳ್ಳಿಯಲ್ಲಿ ವೃಷಭಾವತಿ ಕಾಲುವೆಗೆ ಸಂಪರ್ಕಿಸುವ ಬೃಹತ್ ರಾಜಕಾಲುವೆಯ ಕಾಮಗಾರಿಗಾಗಿ ನೀರಿನ ದಿಕ್ಕನ್ನು ಬದಲಿಸಿರುವುದೇ ಅನಾಹುತಕ್ಕೆ ಪ್ರಮುಖ ಕಾರಣ. ನೀರಿನ ದಿಕ್ಕನ್ನು ಬದಲಿಸಿದ ಪರಿಣಾಮ ಭಾರೀ ಪ್ರಮಾಣದ ನೀರು ಒಮ್ಮೆಲೆ ನುಗ್ಗಿ ಬಂದಿದೆ. ಪರಿಣಾಮ ರಾಜಕಾಲುವೆ ಸಮೀಪದ ಮನೆಗಳು, ಕಟ್ಟಡಗಳು ಸಂಪೂರ್ಣ ಜಲಾವೃತಗೊಂಡು 500ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಜನ ಪರದಾಡುವಂತಾಯಿತು.
ಬೆಂಗಳೂರು ದಕ್ಷಿಣ ಭಾಗದಲ್ಲಿ ಮಳೆಯ ಅಬ್ಬರ ಹೆಚ್ಚಾಗಿತ್ತು. ಬಸವನಗುಡಿ, ಕತ್ರಿಗುಪ್ಪೆ, ಗಿರಿನಗರ, ಜಯನಗರ, ಹೊಸಕೆರೆಹಳ್ಳಿ, ಬನಶಂಕರಿ, ಬಿಟಿಎಂ ಲೇಔಟ, ನಾಯಂಡನಹಳ್ಳಿ, ಬ್ಯಾಟರಾಯನಪುರ, ಹನುಮಂತನಗರ, ವಿದ್ಯಾಪೀಠ ಸುತ್ತಮುತ್ತ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮಳೆಯಿಂದ ಅವಾಂತರಗಳೇ ಸೃಷ್ಟಿಯಾಗಿವೆ. ಹೊಸಕೆರೆಹಳ್ಳಿ ಕೆರೆಯಂತಾಗಿತ್ತು. ಕೋರಮಂಗಲ, ಜೆಪಿ ನಗರ, ವಿಲ್ಸನ್ಗಾರ್ಡನ್, ಕೆಂಗೇರಿ, ರಾಜರಾಜೇಶ್ವರಿನಗರದ ಬೆಮೆಲ್ ಲೇಔಟ್, ಐಡಿಯಲ್ ಹೋಮ್ಸ್, ಸರ್ಎಂವಿ ವಿಶ್ವೇಶ್ವರಯ್ಯ ಬಡಾವಣೆ ಸೇರಿದಂತೆ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು.ಮಳೆ ನೀರಿನೊಂದಿಗೆ ಮನೆಗೆ ಹರಿದು ಬಂದ ಕೊಳಚೆಯನ್ನು ಹೊರಹಾಕಲು ನಿವಾಸಿಗಳು ರಾತ್ರಿಯಿಡೀ ಜಗರಣೆ ಮಾಡಿದರು.
ಹೊಸಕೆರೆಹಳ್ಳಿಯ ದತ್ತಾತ್ರೇಯ ಬಡಾವಣೆ ಸಂಪೂರ್ಣ ಜಲಾವೃತವಾಗಿತ್ತು. ರಸ್ತೆಯಲ್ಲಿಯೇ 6 ಅಡಿ ಮಳೆ ನೀರು ನಿಂತಿತ್ತು. ರಾಜಕಾಲುವೆ 15 ಅಡಿ ಮೀರಿ ಹರಿಯುತ್ತಿತ್ತು. 350 ಮನೆಗಳು, 50 ಶೆಡ್ಗಳು, 100ಕ್ಕೂ ಹೆಚ್ಚು ಗುಡಿಸಲುಗಳಿಗೆ ನೀರು ನುಗ್ಗಿತ್ತು. ಹೊಸಕೆರೆಹಳ್ಳಿ ಪಿಇಎಸ್ ಕಾಲೇಜು ಹಿಂಭಾಗದ ರಾಜಕಾಲುವೆ ಪಕ್ಕದ ರಸ್ತೆಯಲ್ಲೇ ನದಿಯಂತೆ ರಭಸವಾಗಿ ನೀರು ಹರಿದ ಪರಿಣಾಮ ಮಾರುತಿ ಕಾರೊಂದು ಕೊಚ್ಚಿಕೊಂಡು ಹೋಯಿತು. ದತ್ತಾತ್ರೇಯ ನಗರ ಒಂದರಲ್ಲೇ 300ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.
ನೆಲಮಹಡಿಯಲ್ಲಿ ಸಿಲುಕಿದ್ದವರನ್ನು ಅಗ್ನಿಶಾಮಕ ತಂಡ ಹಾಗೂ ಎಸ್ಡಿಆರ್ಎಫ್ ಸಿಬ್ಬಂದಿ ಬೋಟ್ ಮೂಲಕ ರಕ್ಷಣೆ ಮಾಡಿದರು. ಹೊಸಕೆರೆಹಳ್ಳಿ ದತ್ತಾತ್ರೇಯ ದೇವಾಲಯವೂ ಮುಳುಗಿತ್ತು.
ಭಾರೀ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ಕೋರಮಂಗಲ 4ನೇ ಬ್ಲಾಕ್, ಸಿಟಿ ಬೆಡ್ ಭಾಸ್ಕರ್ ರಾವ್ ಪಾರ್ಕ್ ಹಾಗೂ ಶ್ರೀಕಂಠೇಶ್ವರ ಪಾರ್ಕ್ ಸುತ್ತಮುತ್ತಲ ರಸ್ತೆಗಳು ಹಾಗೂ ಮನೆಗಳು ಜಲಾವೃತವಾಗಿ ಸವಾರರು ಹಾಗೂ ನಿವಾಸಿಗಳು ಪರದಾಡಿದರು. ಬನಶಂಕರಿ 2ನೆ ಹಂತ, ಎಲ್ಐಸಿ ಕಾಲೋನಿ 1ನೆ ಕ್ರಾಸ್, ಐಐಟಿ ಬಡಾವಣೆ, ಕೋರಮಂಗಲ 4ನೆ ಬ್ಲಾಕ್, ಜೆಪಿ ನಗರ 6ನೆ ಹಂತ, ಅರೆಕೆಂಪನಹಳ್ಳಿ ವಾರ್ಡ್, ಕತ್ರಿಗುಪ್ಪೆ ವಿಠಲನಗರ, ವಸಂತಪುರ,ಜೆಸಿ ನಗರ, ಕೆಆರ್ ಮಾರುಕಟ್ಟೆ, ಜೆಸಿ ರಸ್ತೆ, ಕಾಳಿದಾಸ ವೃತ್ತ, ಬೊಮ್ಮನಹಳ್ಳಿಯ ಸಾಕಷ್ಟು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು.
ರಾಜಜಿನಗರ, ವಿಜಯನಗರ, ಶಾಂತಿನಗರ, ಮೆಜೆಸ್ಟಿಕ್, ಯಶವಂತಪುರ, ಬಸವನಗುಡಿ, ಗಾಂಧಿನಗರ, ಮಡಿವಾಳ, ಹೆಬ್ಬಾಳ, ಹೊಸಕೆರೆಹಳ್ಳಿ, ರಾಜರಾಜೇಶ್ವರಿನಗರ, ಕೆಂಗೇರಿ, ಆರ್ಟಿ ನಗರ ಸೇರಿದಂತೆ ಅನೇಕ ಭಾಗಗಳಲ್ಲಿ ಜನರ ತೀವ್ರ ಪರದಾಡುವಂತಾಗಿತ್ತು. ರಾಜಕಾಲುವೆಗಳು ತುಂಬಿ ಹರಿಯುತ್ತಿದ್ದು, ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಗೆ ನುಗ್ಗಿದ ನೀರಿನಲ್ಲಿ ಸಿಲುಕಿಕೊಂಡಿದ್ದ ಬಾಣಂತಿ ಹಾಗೂ 15 ದಿನದ ಮಗುವನ್ನು ಸಾರ್ವಜನಿಕರು ರಕ್ಷಿಸಿರುವ ಘಟನೆ ಹೊಸಕೆರೆಹಳ್ಳಿಯಲ್ಲಿ ನಡೆದಿದೆ. ಮಗುವನ್ನು ಬಾಹುಬಲಿ ಸಿನಿಮಾ ಮಾದರಿಯಲ್ಲಿ ಎದೆ ಮಟ್ಟದ ನೀರಿನಲ್ಲಿ ಕೈನಲ್ಲಿ ಹಿಡಿದು ಎದುರು ಮನೆಯ ಎರಡನೆ ಅಂತಸ್ತಿಗೆ ಕಳುಹಿಸುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.
ಕಾಮಗಾರಿಗಳೇ ಕಾರಣ: ಬೇಸಿಗೆಯಲ್ಲಿ ನಡೆಸಬೇಕಾಗಿದ್ದ ಕಾಮಗಾರಿಗಳನ್ನು ಮಳೆಗಾಲದಲ್ಲಿ ನಡೆಸಲಾಗುತ್ತಿದೆ. ಅನೇಕ ಕಡೆ ರಸ್ತೆಗಳನ್ನು ಅಗೆದು ತಿಂಗಳಾದರೂ ಸರಿಪಡಿಸಿಲ್ಲ. ರಾಜಕಾಲುವೆಗಳಿಗೆ ಸಂಪರ್ಕಿಸುವ ಮಾರ್ಗಗಳನ್ನು ಅಗೆಯಲಾಗಿದೆ. ಬಿಬಿಎಂಪಿ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯೇ ಈ ಅನಾಹುತಗಳಿಗೆ ಕಾರಣ ಎಂದು ಜನ ಆರೋಪಿಸಿದ್ದಾರೆ. ಬನಶಂಕರಿ, ಬಸವನಗುಡಿ, ಕತ್ರಿಗುಪ್ಪೆ, ಹೊಸಕೆರೆಹಳ್ಳಿ, ಮೈಸೂರು ರಸ್ತೆಯಲ್ಲಿ ಮಳೆಯಿಂದ ಅವಾಂತರಗಳೇ ಸೃಷ್ಟಿಯಾಗಿದೆ. ಇನ್ನೂ ಕೂಡ ಮನೆಯೊಳಗಿನ ನೀರನ್ನು ತೆರವು ಗೊಳಿಸುವ ಕಾರ್ಯ ಭರದಿಂದ ಸಾಗಿದೆ.
ಪರಿಹಾರದ ಭರವಸೆ: ಮಳೆ ಅನಾಹುತ ಪ್ರದೇಶಗಳಿಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕಂದಾಯ ಸಚಿವ ಆರ್. ಅಶೋಕ್ ಅವರು ಸಂತ್ರಸ್ತರಿಗೆ ಸರ್ಕಾರದಿಂದ ನೆರವು ಒದಗಿಸುವ ಭರವಸೆ ನೀಡಿದರು. ದತ್ತಾತ್ರೇಯ ಬಡಾವಣೆಯಲ್ಲದೆ ನಗರದಲ್ಲಿ ಎಲ್ಲೆಲ್ಲಿ ಮಳೆ ಅನಾಹುತ ಸಂಭವಿಸಿದೆ ಅಂತಹ ಪ್ರತಿ ಮನೆಗಳಿಗೆ ಭೇಟಿ ನೀಡಿ ಸರ್ವೆ ಮಾಡಿ ವರದಿ ನೀಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಆರ್.ಅಶೋಕ್ ಸೂಚಿಸಿದರು. ಮಳೆ ಸಂತ್ರಸ್ತರಿಗೆ ಎರಡು ದಿನಗಳ ಆಹಾರದ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಅನಾಹುತ ಪ್ರದೇಶಗಳಿಗೂ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ. ಅನಾಹುತ ತಪ್ಪಿಸಲು ಶಾಶ್ವತ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.
ಮಳೆ ಅನಾಹುತ ಕುರಿತಂತೆ ಚರ್ಚಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಭೆ ಕರೆದಿದ್ದಾರೆ. ಸಭೆಯಲ್ಲಿ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ಅಡಿಯಲ್ಲಿ ಮಳೆ ಅನಾಹುತ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಮನವಿ ಮಾಡಿಕೊಳ್ಳುವುದಾಗಿ ಅಶೋಕ್ ಹೇಳಿದರು.