ಬೆಂಗಳೂರಲ್ಲಿ ಮಹಾ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಿಎಂ ಭೇಟಿ, 25,000 ಪರಿಹಾರ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.24- ಕಳೆದ ರಾತ್ರಿ ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ಮಹಾಮಳೆಯಿಂದ ಹಾನಿಗೊಳಗಾದ ಸಂತ್ರಸ್ತರಿಗೆ ತಕ್ಷಣದ ಪರಿಹಾರವಾಗಿ ಸರ್ಕಾರ 25 ಸಾವಿರ ಪರಿಹಾರ ಘೋಷಿಸಿದೆ. ಮನೆ, ದವಸ-ಧಾನ್ಯ ಸೇರಿದಂತೆ ತಕ್ಷಣವೇ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಅನುಕೂಲವಾಗುವಂತೆ ಸಂತ್ರಸ್ತರಿಗೆ ಚೆಕ್ ಮೂಲಕ 25 ಸಾವಿರ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಕಟಿಸಿದರು.

ತಮ್ಮ ನಿವಾಸ ಕಾವೇರಿ ಬಳಿ ಮಳೆಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತ್ರಸ್ತರಿಗೆ ತಕ್ಷಣವೇ ಪ್ರತಿ ಕುಟುಂಬಕ್ಕೆ 25 ಸಾವಿರ ಪರಿಹಾರವನ್ನು ಚೆಕ್ ಮೂಲಕ ನೀಡಬೇಕೆಂದು ಬಿಬಿಎಂಪಿ ಆಡಳಿತಾಧಿಕಾರಿ, ಆಯುಕ್ತರಿಗೆ ಸೂಚನೆ ಕೊಡಲಾಗಿದೆ ಎಂದು ತಿಳಿಸಿದರು. ಮಳೆಯಿಂದ ಮನೆ ಕುಸಿದುಬಿದ್ದರೆ ಇಲ್ಲವೆ ಮನೆಯಲ್ಲಿದ್ದ ದವಸ-ಧಾನ್ಯಗಳು, ಗೃಹೋಪಯೋಗಿ ವಸ್ತುಗಳು ಸೇರಿದಂತೆ ಅಗತ್ಯ ವಸ್ತುಗಳು ಹಾನಿಗೊಳಗಾಗಿದ್ದರೆ ಖರೀದಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಹಾನಿಗೊಳಗಾದ ಪ್ರದೇಶಗಳಿಗೆ ನಾನೇ ಭೇಟಿ ಕೊಟ್ಟು ವಸ್ತುಸ್ಥಿತಿ ಅಧ್ಯಯನ ಮಾಡಲಿದ್ದೇನೆ. ಕಂದಾಯ ಸಚಿವರಾದ ಆರ್.ಅಶೋಕ್ ಸೇರಿದಂತೆ ಸಚಿವರು ಹಾಗೂ ಅಧಿಕಾರಿಗಳು ಅಹೋರಾತ್ರಿ ಕೆಲಸ ಮಾಡುತ್ತಿದ್ದಾರೆ. ಬಿಬಿಎಂಪಿ ಆಡಳಿತಾಧಿಕಾರಿ, ಆಯುಕ್ತರು, ವಲಯ ಆಯುಕ್ತರು ಸೇರಿದಂತೆ ಅಧಿಕಾರಿಗಳು ಮೈ ಚಳಿ ಬಿಟ್ಟು ಕೆಲಸ ಮಾಡಬೇಕೆಂದು ಸಿಎಂ ಸೂಚಿಸಿದರು.

ಇಂದು ಮತ್ತೆ ನಾಳೆ ಇನ್ನೂ ವ್ಯಾಪಕ ಮಳೆಯಾಗಲಿರುವ ಹಿನ್ನೆಲೆಯಲ್ಲಿ ತಗ್ಗು ಪ್ರದೇಶ ಸೇರಿದಂತೆ ಮತ್ತಿತರ ಕಡೆ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲು ಸೂಚಿಸಿದ್ದೇನೆ. ಮಳೆ ಬಂದ ಸಂದರ್ಭದಲ್ಲಿ ಈ ರೀತಿ ಹಾನಿಗೊಳಗಾಗುವುದನ್ನು ತಪ್ಪಿಸಲು ಶಾಶ್ವತ ಪರಿಹಾರ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು. ಸಚಿವರು, ಶಾಸಕರು, ಅಧಿಕಾರಿಗಳು ನಗರದಲ್ಲಿದ್ದು ಹಾನಿಗೊಳಗಾಗಿರುವ ಪ್ರದೇಶಗಳಿಗೆ ತೆರಳಿ ಸಂತ್ರಸ್ತರ ಅಹವಾಲು ಆಲಿಸಬೇಕು. ಈಗಾಗಲೇ ಪರಿಹಾರ ಕಾರ್ಯ ಆರಂಭವಾಗಿದೆ. ಯಾವುದೇ ಕಾರಣಕ್ಕೂ ಯಾರೊಬ್ಬರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದರು.

ತುರ್ತು ಪರಿಹಾರ ಕೈಗೊಳ್ಳಿ: ಇದಕ್ಕೂ ಮುನ್ನ ಯಡಿಯೂರಪ್ಪ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಮಳೆ ಹಾನಿ ಸಂಬಂಧ ಸಚಿವರು ಮತ್ತು ಅಧಿಕಾರಿಗಳ ಜತೆ ಸಭೆ ನಡೆಸಿದರು.
ಕಂದಾಯ ಸಚಿವ ಆರ್.ಅಶೋಕ್, ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ನಗರ ಪೆÇಲೀಸ್ ಆಯುಕ್ತ ಕಮಲ್ ಪಂಥ್ ಸೇರಿದಂತೆ ಮತ್ತಿತರರ ಜತೆ ಪರಿಸ್ಥಿತಿ ಕುರಿತಂತೆ ಮಾಹಿತಿ ಪಡೆದರು.

ಕಳೆದ ರಾತ್ರಿ ನಗರದ ಕೆಲವು ಪ್ರದೇಶಗಳಲ್ಲಿ ನಿರೀಕ್ಷೆಗೂ ಮೀರಿದ ಮಳೆಯಾಗಿದೆ. ಕೆಲವು ಕಡೆ ಮನೆಗಳು ಕುಸಿದು ಬಿದ್ದಿರುವ ಬಗ್ಗೆಯೂ ವರದಿಯಾಗಿದೆ. ತಗ್ಗು ಪ್ರದೇಶಗಳಲ್ಲಿ ವ್ಯಾಪಕ ಹಾನಿಯಾಗಿರುವುದರಿಂದ ಕೂಡಲೇ ಪರಿಹಾರ ಕಾರ್ಯ ಕೈಗೊಳ್ಳಬೇಕೆಂದು ತಾಕೀತು ಮಾಡಿದರು.

ಉಪಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಪರಿಹಾರ ಕಾರ್ಯವನ್ನು ಸಮರ್ಪಕವಾಗಿ ಕೈಗೊಳ್ಳದಿದ್ದರೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ. ಅಶೋಕ್ ಅವರ ನೇತೃತ್ವದಲ್ಲಿ ಸಂತ್ರಸ್ತರಿಗೆ ಪರಿಹಾರ ಕಾರ್ಯ ಕೈಗೊಳ್ಳಿ ಎಂದು ನಿರ್ದೇಶನ ನೀಡಿದರು.

ನಗರ ಭಾಗದ ಸಚಿವರು ಹಾಗೂ ಶಾಸಕರು ಕಡ್ಡಾಯವಾಗಿ ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಹಾನಿಗೊಳಗಾಗಿದ್ದರೆ ಸಂತ್ರಸ್ತರ ಸಮಸ್ಯೆ ಆಲಿಸಿ. ಕೂಡಲೇ ಅಗತ್ಯವಿರುವ ಕಡೆ ಸಂತ್ರಸ್ತರಿಗೆ ಆಹಾರ ಪೊಟ್ಟಣಗಳು, ಬ್ರೆಡ್, ಹಾಲು, ಹೊದಿಕೆ, ಬಟ್ಟೆ ವಿತರಣೆ ಮಾಡಬೇಕೆಂದು ಅಧಿಕಾರಿಗಳಿಗೆ ಹೇಳಿದ್ದಾರೆ.
ಇಂದು ಮತ್ತು ನಾಳೆ ಮಳೆಯಾಗುವ ಸಾಧ್ಯತೆ ಇರುವುದರಿಂದ ಪುನಃ ಹೆಚ್ಚಿನ ಅನಾಹುತವಾಗದಂತೆ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Facebook Comments