ಶಿರಾದಲ್ಲಿ ನಾಳೆ ಸಿಎಂ ರೋಡ್‍ಶೋ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.29-ಪ್ರತಿಷ್ಠೆಯ ಕಣವಾಗಿ ಪರಿಣಮಿಸಿರುವ ತುಮಕೂರು ಜಿಲ್ಲೆ ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡ ಪರವಾಗಿ ನಾಳೆ ಮುಖ್ಯಮಂತ್ರಿ ಬಿ.ಎಸ್ . ಯಡಿಯೂರಪ್ಪ ಮೊದಲ ಬಾರಿಗೆ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಈವರೆಗೂ ಬಿಎಸ್‍ವೈ ಅವರು ಚುನಾವಣಾ ಪ್ರಚಾರಕ್ಕೆ ರಂಗಪ್ರವೇಶ ಮಾಡಿರಲಿಲ್ಲ. ರಾಜ್ಯದಲ್ಲಿ ಉಂಟಾದ ಪ್ರವಾಹ ಹಾಗೂ ಕೊರೊನಾ ಮೇಲುಸ್ತುವಾರಿಯನ್ನು ಅವರೇ ನಿರ್ವಹಣೆ ಮಾಡುತ್ತಿರುವುದರಿಂದ ಪ್ರಚಾರದಿಂದ ದೂರ ಉಳಿದಿದ್ದರು.

ನಾಳೆ ದಿನಪೂರ್ತಿ ಶಿರಾ ಕ್ಷೇತ್ರದಲ್ಲೇ ಠಿಕಾಣಿ ಹೂಡಲಿರುವ ಅವರು, ಡಾ.ರಾಜೇಶ್ ಗೌಡ ಪರವಾಗಿ ಕ್ಷೇತ್ರದ ನಾನಾ ಕಡೆ ಬಹಿರಂಗ ಪ್ರಚಾರ, ರೋಡ್ ಶೋ ನಡೆಸಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡುವರು. ಈ ಹಿಂದೆಯೇ ಪ್ರಚಾರಕ್ಕೆ ಬರಬೇಕೆಂದು ಪಕ್ಷದ ಮುಖಂಡರು ಯಡಿಯೂರಪ್ಪ ಅವರಿಗೆ ಕೋರಿದ್ದರು. ಪ್ರವಾಹ ಸಂದರ್ಭದಲ್ಲಿ ನಾನು ಪ್ರಚಾರಕ್ಕೆ ಬಂದರೆ ಅದು ಸಕಾರಾತ್ಮಕ್ಕಿಂತ ನಕಾರಾತ್ಮಕ ಪರಿಣಾಮ ಬೀರಬಹುದೆಂಬ ಕಾರಣಕ್ಕಾಗಿ 2ನೇ ಹಂತದ ನಾಯಕರೇ ಪ್ರಚಾರ ನೋಡಿಕೊಳ್ಳಬೇಕೆಂದು ಸೂಚಿಸಿದರು.

ಉತ್ತರ ಕರ್ನಾಟಕ ಹಾಗೂ ಬೆಂಗಳೂರು ಸೇರಿದಂತೆ ಮತ್ತಿತರ ಭಾಗಗಳಲ್ಲಿ ಪ್ರವಾಹದಿಂದ ಸಾವಿರಾರು ಜನರು ಸಂತ್ರಸ್ತರಾಗಿರುವ ಸಂದರ್ಭದಲ್ಲಿ ಪ್ರಚಾರ ನಡೆಸಿದರೆ ಪ್ರತಿಪಕ್ಷಗಳು ಅದನ್ನೇ ಅಸ್ತ್ರ ಮಾಡಿಕೊಳ್ಳಬಹುದೆಂಬ ಕಾರಣಕ್ಕಾಗಿ ಬೆಂಗಳೂರಿನಲ್ಲೇ ಕುಳಿತು ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದರು. ನಾಳೆ ಶಿರಾ ಹಾಗೂ ಶನಿವಾರ ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ ಯಡಿಯೂರಪ್ಪ ಅಭ್ಯರ್ಥಿ ಮುನಿರತ್ನ ಪರವಾಗಿ ಪ್ರಚಾರ ನಡೆಸಲಿದ್ದಾರೆ.

ಅಂದಹಾಗೆ ಶಿರಾದಲ್ಲಿ ಬಿಎಸ್‍ವೈ ಅವರು ಪ್ರಚಾರ ನಡೆಸಲು ಕಾರಣ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಮುಂದಿದ್ದಾರೆ ಎಂದು ಗುಪ್ತಚರ ಇಲಾಖೆ ವರದಿ ನೀಡಿದೆ ಎಂದು ತಿಳಿದು ಬಂದಿದೆ.  ಬಿಜೆಪಿಗಿಂತ ಅವರು ಕೇವಲ 3 ಸಾವಿರ ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಬಹುದು ಎಂಬುದು ಪಕ್ಷವು ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

ಇದೀಗ ಯಡಿಯೂರಪ್ಪ ಶಿರಾ ಕ್ಷೇತ್ರದ ಪ್ರಚಾರದಲ್ಲಿ ಧುಮುಕುತ್ತಿರುವುದರಿಂದ ಹೊಸ ಹುಮ್ಮಸ್ಸು ಬಂದು ಬಿಜೆಪಿ ಗೆಲುವಿಗೆ ಅನುಕೂಲವಾಗಲಿದೆ ಎಂಬುದು ಕಾರ್ಯಕರ್ತರ ಒತ್ತಾಸೆಯಾಗಿದೆ. ಬಿಜೆಪಿ ತನ್ನ ಮತ ಪಾಲನ್ನು ಪಡೆಯುತ್ತಿದೆ ಎಂದು ಕಂಡುಬಂದರೂ ಈಗ ನೇರ ಹಣಾಹಣಿಗೆ ಸಿದ್ದವಾಗುತ್ತಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಒಂದೇ ವರ್ಗದ ಮತದಾರರಿಗಾಗಿ ಹೋರಾಟ ನಡೆಸುತ್ತಿದ್ದಾರೆ.ಲಿಂಗಾಯತರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ, ಮತ್ತು ಕೇಸರಿ ಪಕ್ಷಕ್ಕೆ ಈ ಸಮುದಾಯದಿಂದ ಯಾವುದೇ ತೊಂದರೆ ಇಲ್ಲ, ಹೀಗಾಗಿ ಲಿಂಗಾಯತ ಮನವೊಲಿಕೆಗೆ ಬಿಜೆಪಿ ತಲೆ ಕೆಡಿಸಿಕೊಳ್ಳುತ್ತಿಲ್ಲ.

Facebook Comments