ಯೋಗೀಶ್ ಕುಟುಂಬ ಸಾಕಷ್ಟು ನೊಂದಿದೆ, ಸತ್ಯಾಂಶ ಹೊರಬರಬೇಕು : ಸಿಎಂ ಬಿಎಸ್‍ವೈ

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು,ನ.5- ಧಾರಾವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಸಿಬಿಐ ತನಿಖಾ ತಂಡ ಮಾಜಿ ಸಚಿವ ವಿನಯ್‍ಕುಲಕರ್ಣಿ ಅವರನ್ನು ವಶಕ್ಕೆ ಪಡೆದಿರುವುದನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.  ಪ್ರಕರಣದ ಸತ್ಯಾಸತ್ಯತೆ ಇದರಿಂದ ಹೊರಬರಲಿದ್ದು, ಸಿಬಿಐ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಿದೆ.

ಪ್ರತಿಪಕ್ಷ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಆರೋಪದಲ್ಲಿ ಎಳ್ಳಷ್ಟು ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದರು. ಕಡಲಕಿನಾರೆ ಮಂಗಳೂರಿನಲ್ಲಿ ಇಂದಿನಿಂದ ನಡೆಯುತ್ತಿರುವ ರಾಜ್ಯ ಕಾರ್ಯಕಾರಿಣಿ ಸಭೆ ಆರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗೀಶ್ ಗೌಡ ಕೊಲೆಯಾದಾಗ ಅವರು ಕುಟುಂಬದವರು ಸಾಕಷ್ಟು ನೊಂದಿದ್ದರು.

ಯೋಗೀಶ್ ಅವರ ಪತ್ನಿ, ಮಕ್ಕಳು ಹಾಗೂ ಸಹೋದರರು ಸೇರಿದಂತೆ ಕುಟುಂಬದವರು ತನಿಖೆ ನಡೆಸಬೇಕೆಂದು ಮನವಿ ಮಾಡಿದ್ದರು. ನ್ಯಾಯಾಲಯದ ಸೂಚನೆಯಂತೆ ತನಿಖೆ ನಡೆಯುತ್ತದೆ. ಸತ್ಯಾಂಶ ಎಂದಿದ್ದರೂ ಹೊರಬರಬೇಕು. ತಡವಾದರೂ ಸಿಬಿಐ ತೆಗೆದುಕೊಂಡಿರುವ ಕ್ರಮ ಸರಿಯಾಗಿದೆ ಎಂದು ಹೇಳಿದರು.

ಈ ಹಿಂದೆಯೇ ತನಿಖೆ ನಡೆಯಬೇಕಿತ್ತು. ಬೇರೆ ಬೇರೆ ಕಾರಣಗಳಿಂದ ಇದು ವಿಳಂಬವಾಗಿದೆ. ಸಿಬಿಐ ಸ್ವಾಯತ್ತ ಸಂಸ್ಥೆಯಾಗಿದ್ದು, ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.ಕುಟುಂಬದವರ ಮನವಿಯಂತೆ ತನಿಖೆ ಮಾಡಲಾಗುತ್ತದೆ.

ಕಾಂಗ್ರೆಸಿಗರು ಪ್ರತಿಯೊಂದು ವಿಷಯವನ್ನು ರಾಜಕಾರಣ ಮಾಡುವ ಕುತಂತ್ರ ಮಾಡುತ್ತಾರೆ. ವಿನಯ್‍ಕುಲಕರ್ಣಿ ಏನೇ ತಪ್ಪು ಮಾಡಿಲ್ಲ ಎಂದ ಮೇಲೆ ಹೆದರುವುದು ಏಕೆ? ತನಿಖೆ ಪೂರ್ಣಗೊಂಡ ನಂತರ ಸತ್ಯ ಗೊತ್ತಾಗಲಿದೆ. ಪ್ರತಿಪಕ್ಷದ ಆರೋಪದಲ್ಲಿ ಎಳ್ಳಷ್ಟು ಸತ್ಯಾಂಶವಿಲ್ಲ ಎಂದು ಪುನರುಚ್ಚರಿಸಿದರು.

Facebook Comments