‘ಲವ್ ಜಿಹಾದ್‍’ಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ನಿರ್ಧಾರ, ಸುಳಿವು ನೀಡಿದ ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು,ನ.5- ಲವ್ ಜಿಹಾದ್ ಹೆಸರಿನಲ್ಲಿ ರಾಜ್ಯದ ಕೆಲವು ಕಡೆ ಮತಾಂತರ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಇದಕ್ಕೆ ಅಂತ್ಯ ಹಾಡಲು ಕಠಿಣ ಕಾನೂನು ಜಾರಿ ಮಾಡುವ ಸುಳಿವನ್ನು ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ್ದಾರೆ. ಮತಾಂತರ ವಿಷಯವನ್ನು ನಮ್ಮ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ.

ಲವ್ ಜಿಹಾದ್‍ನಲ್ಲಿ ಮತಾಂತರ ಮಾಡುವ ಶಕ್ತಿಗಳು ರಾಜ್ಯದಲ್ಲಿ ಸಕ್ರಿಯವಾಗಿವೆ. ಈಗಾಗಲೇ ಅಧಿಕಾರಿಗಳ ಜೊತೆ ಈ ಬಗ್ಗೆ ಚರ್ಚಿಸಲಾಗಿದೆ ಎಂದು ಹೇಳಿದರು. ಇಲ್ಲಿನ ಓಶಿಯನ್ ಪರ್ಲ್ ಹೋಟೆಲ್‍ನ ಸಿ.ವಿ.ರಮಣ ಪೈ ಹಾಲ್‍ನಲ್ಲಿ ಆರಂಭವಾದ ಬಿಜೆಪಿ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮತಾಂತರಕ್ಕೆ ಮುಕ್ತಿ ಹಾಡಲು ಕಠಿಣ ಕಾನೂನು ಜಾರಿ ಮಾಡಬೇಕಾದ ಅಗತ್ಯವಿದೆ ಎಂದು ಪರೋಕ್ಷವಾಗಿ ಸುಳಿವು ಕೊಟ್ಟರು.

ತಮ್ಮ ಭಾಷಣದಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಉಲ್ಲೇಖಿಸಿದ ಬಿಎಸ್‍ವೈ, ಅನಿವಾರ್ಯ ಪರಿಸ್ಥಿತಿಯಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. 2023ಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಗೆದ್ದು ನಾವು ಮತ್ತೆ ಅಧಿಕಾರ ಹಿಡಿಯಲಿದ್ದೇವೆ ಎಂದು ಅಚಲ ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ಆರು ತಿಂಗಳಿನಿಂದ ರಾಜ್ಯದಲ್ಲಿ ಕೊರೊನಾ ಇದ್ದ ಕಾರಣ ಲಾಕ್‍ಡೌನ್ ಜಾರಿ ಮಾಡಲಾಗಿತ್ತು. ಪರಿಣಾಮ ಎಲ್ಲ ಚಟುವಟಿಕೆಗಳು ಸ್ತಬ್ಧಗೊಂಡು ಆರ್ಥಿಕ ಪರಿಸ್ಥಿತಿ ಹಿನ್ನಡೆ ಕಂಡಿತ್ತು. ಇದೀಗ ಪರಿಸ್ಥಿತಿ ಸುಧಾರಣೆಯಾಗುತ್ತಿದ್ದು, ಪುನಃ ಯಥಾಸ್ಥಿತಿಗೆ ಬರುತ್ತಿದೆ ಎಂದು ಅವರು ಹೇಳಿದರು.

ಕೊರೊನಾದಂತಹ ಕಷ್ಟದ ಸಂದರ್ಭದಲ್ಲಿ ಸರ್ಕಾರ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಪ್ರತಿಯೊಂದು ಸಮುದಾಯಕ್ಕೂ ಸಹಾಯ ನೀಡಲು ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದೇವೆ. ಇದರಿಂದ ಅನೇಕರಿಗೆ ನೆರವಾಗಿದೆ ಎಂದರು. ಕರ್ನಾಟಕದಲ್ಲಿ ಬೇರು ಬಿಟ್ಟಿದ್ದ ಡ್ರಗ್ಸ್ ಮಾಫಿಯಾವನ್ನು ಬೇರು ಮಟ್ಟದಿಂದಲೇ ಕಿತ್ತುಹಾಕಲು ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ. ಈವರೆಗೂ ಯಾವ ಸರ್ಕಾರಗಳು ಕೂಡ ಈ ಬಗ್ಗೆ ಗಮನಹರಿಸಿರಲಿಲ್ಲ. ಡ್ರಗ್ಸ್ ಮುಕ್ತ ಕರ್ನಾಟಕ ಮಾಡಲು ನಮ್ಮ ಸರ್ಕಾರ ಪಣ ತೊಟ್ಟಿದೆ ಎಂದು ಹೇಳಿದರು.

ಆರ್ಥಿಕ ಸಂಕಷ್ಟದ ನಡುವೆಯೇ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ತಲಾ 50 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಅನುದಾನದಲ್ಲಿ ನಿಮ್ಮ ನಿಮ್ಮ ಕ್ಷೇತ್ರಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಸಿಎಂ ಶಾಸಕರಿಗೆ ಕಿವಿಮಾತು ಹೇಳಿದರು.

ಪರಿಸ್ಥಿತಿ ಸುಧಾರಣೆಯಾದ ನಂತರ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗುವುದು. ಕೆಲವು ಕ್ಷೇತ್ರಗಳಲ್ಲಿ ಅನುದಾನದ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಆದ್ಯತೆ ಮೇರೆಗೆ ಅನುದಾನ ಬಿಡುಗಡೆ ಮಾಡಲಿದ್ದೇವೆ. 224 ಕ್ಷೇತ್ರಗಳಿಗೂ ಸಮಾನ ಹಂಚಿಕೆ ಮಾಡಲಿದ್ದೇನೆ ಎಂದು ಆಶ್ವಾಸನೆ ನೀಡಿದರು.

ಮಂಗಳೂರಿನಲ್ಲಿ 20 ವರ್ಷಗಳ ನಂತರ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ. ನಳೀನ್‍ಕುಮಾರ್ ಕಟೀಲ್ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ ಬೇರು ಮಟ್ಟದಿಂದ ಪಕ್ಷವನ್ನು ಅತ್ಯಂತ ಪ್ರಬಲವಾಗಿ ಸಂಘಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯ್ತಿಯಿಂದ ಹಿಡಿದು ಲೋಕಸಭೆವರೆಗೂ ಬಿಜೆಪಿ ಅಧಿಕಾರದಲ್ಲಿರಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಇನ್ನಷ್ಟು ಪರಿಶ್ರಮ ಹಾಕಬೇಕೆಂದು ಕರೆ ಕೊಟ್ಟರು.

ಕರಾವಳಿಯಲ್ಲಿ ಆಂತರಿಕ ಭದ್ರತೆಗೆ ಪ್ರಾಶಸ್ತ್ಯ ಕೊಡಲಿದ್ದೇವೆ. ಈ ಭಾಗದಲ್ಲಿ ಹೆಚ್ಚಿನ ಪ್ರವಾಸಿ ತಾಣಗಳು ಇರುವುದರಿಂದ ಪ್ರವಾಸೋದ್ಯಮಕ್ಕೂ ವಿಶೇಷ ಆದ್ಯತೆ ನೀಡಲಿದ್ದೇವೆ. ಸಾಗರದ ಅಲೆಗಳಿಂದ ವಿದ್ಯುತ್ ಉತ್ಪಾದನೆಗೆ ಕ್ರಮ ಕೈಗೊಂಡಿದ್ದೇವೆ. ಇನ್ನು 6 ತಿಂಗಳಲ್ಲಿ ಕರಾವಳಿ ಸಂಪೂರ್ಣವಾಗಿ ಬದಲಾವಣೆಯಾಗಲಿದೆ ಎಂದರು.

ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿರುವುದು ಸಂತಸದ ವಿಷಯ. ಆದರೆ ಇನ್ನು ಹಲವು ತಿಂಗಳುಗಳ ಕಾಲ ಜನರು ನಿಯಮಗಳನ್ನು ಪಾಲನೆ ಮಾಡಲೇಬೇಕು. ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕೆಂದು ಮನವಿ ಮಾಡಿದರು. ದೇಶದ ಇತಿಹಾಸದಲ್ಲೇ ಆಡಳಿತ ಪಕ್ಷದ 18 ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದರು. ಇದರಿಂದ ಸರ್ಕಾರ ರಚನೆ ಮಾಡಲು ಸಾಧ್ಯವಾಯಿತು ಎಂದು ಬಿಎಸ್‍ವೈ ಹೇಳಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಕೇಂದ್ರ ಸಚಿವರಾದ ಡಿ.ಬಿ.ಸದಾನಂದಗೌಡ, ಪ್ರಹ್ಲಾದ್ ಜೋಷಿ, ಸಚಿವರಾದ ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್, ಸಿ.ಟಿ.ರವಿ, ಕಾರ್ಯಕಾರಿಣಿ ಸದಸ್ಯರು, ಸಂಸದರು, ಮತ್ತಿತರರು ಭಾಗವಹಿಸಿದ್ದರು.

Facebook Comments