ತಿರುಮಂತ್ರವಾಗಲಿದೆಯೇ ಸಿಎಂ ಯಡಿಯೂರಪ್ಪನವರ ‘ಮತ ತಂತ್ರ’..!?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.17- ಮರಾಠ ಅಭಿವೃದ್ದಿ ನಿಗಮ ಸ್ಥಾಪನೆ ಮಾಡುವ ಮೂಲಕ ಉಪಚುನಾವಣೆಯಲ್ಲಿ ಮತಬುಟ್ಟಿಗೆ ಕೈ ಹಾಕಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ತಮ್ಮ ತಂತ್ರವೇ ತಿರುಗು ಬಾಣವಾಗುವ ಸಾಧ್ಯತೆಯಿದೆ. ಶಿರಾ ಉಪಚುನಾವಣೆ ಸಂದರ್ಭದಲ್ಲಿ ಕಾಡುಗೊಲ್ಲರ ಮತಗಳ ಮೇಲೆ ಕಾಣ್ಣಿಟ್ಟು ಅವರಿಗಾಗಿಯೇ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲಾಗಿತ್ತು.

ಈಗ ಬಸವಕಲ್ಯಾಣ ಉಪಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಮರಾಠ ಅಭಿವೃದ್ಧಿ ಪ್ರಧಿಕಾರ ರಚನೆ ಆಗಿದೆ. ರಾಜ್ಯ ಸರಕಾರದ ಈ ನಡೆ ಸಹಜವಾಗಿಯೇ ನಾನಾ ಸಮುದಾಯ, ಪಂಗಡಗಳಿಂದ ಇಂತಹುದೇ ಪ್ರಧಿಕಾರಗಳಿಗೆ ಬೇಡಿಕೆ ಹೆಚ್ಚಲು ಕಾರಣವಾಗಿದೆ.  ವೀರಶೈವ ಲಿಂಗಾಯತ ಸಮುದಾಯದ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಮಾಡಬೇಕೆಂದು ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ವಿ.ಸೋಮಣ್ಣ, ಬಿ.ಸಿ.ಪಾಟೀಲ್, ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರು ಅವರಿದ್ದ ನಿಯೋಗ ಮುಖ್ಯಮಂತ್ರಿಗೆ ಮನವಿ ಮಾಡಿದೆ.

ಮರಾಠ ಅಭಿವೃದ್ಧಿ ಪ್ರಾಧಿಕಾರ ಸಮರ್ಥಿಸುತ್ತಲೇ, ವೀರಶೈವ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಕೋರಿದ್ದಾರೆ. ಜೊತೆಗೆ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಕೊಡಬೇಕೆಂದು ಮನವಿ ಮಾಡಿದ್ದಾರೆ. ಬಿಜೆಪಿಯವರ ಈ ಪ್ರಾಧಿಕಾರದ ಅಸ್ತ್ರಕ್ಕೆ ವಿಪಕ್ಷಗಳು ಮೀಸಲಾತಿ ಅಸ್ತ್ರವನ್ನು ಪ್ರಯೋಗಿಸಿವೆ.

ಮಹಾರಾಷ್ಟ್ರದಲ್ಲಿ ಮರಾಠಿಗರಿಗೆ ಶೇ.16ರಷ್ಟು ಮೀಸಲಾತಿ ನೀಡಿದ ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿ ಲಿಂಗಾಯತರಿಗೆ ಶೇಕಡಾ 16ರಷ್ಟು ಮೀಸಲಾತಿ ನೀಡಬೇಕೆಂಬ ಬಸವರಾಜ್ ಹೊರಟ್ಟಿ ಕೂಗಿಗೆ ಮಾಜಿ ಮಂತ್ರಿ ಎಂಬಿ ಪಾಟೀಲ್ ಧ್ವನಿ ಗೂಡಿಸಿದ್ದಾರೆ.

ಇಂದು ಸಿಎಂಗೆ ಬಹಿರಂಗ ಪತ್ರ ಬರೆದಿದ್ದಾರೆ. ಕೆಲವರ ಬೇಡಿಕೆಯಂತೆ ಲಿಂಗಾಯತರಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಿ, 100-200ಕೋಟಿ ಅನುದಾನ ಒದಗಿಸಿದರೆ, ಹೆಚ್ಚಿನ ಪ್ರಯೋಜನ ಆಗಲ್ಲ. ಇದರ ಬದಲು ಲಿಂಗಾಯತರಿಗೆ ಶೇ.16ರಷ್ಟು ಮೀಸಲಾತಿ ನೀಡ್ಬೇಕು ಅಂತಾ ಆಗ್ರಹಿಸಿದ್ದಾರೆ. ಈ ಬೆಳವಣಿಗೆಯಿಂದ ಸಿಎಂ ಯಡಿಯೂರಪ್ಪ ಇಕ್ಕಟ್ಟಿಗೆ ಸಿಲುಕಿದ್ದಾರೆ.

ವೀರಶೈವ ಲಿಂಗಾಯತರಿಗೆ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕೆಂಬ ಕೂಗಿಗೆ ಖುದ್ದು ಡಿಸಿಎಂ ಲಕ್ಷ್ಮಣ ಸವದಿ ದನಿ ನೀಡಿರುವುದು ಇದಕ್ಕೆ ಪುರಾವೆಯಾಗಿದೆ. ವೀರಶೈವ ಲಿಂಗಾಯತರ ಸಮುದಾಯದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಬಡವರು ಮತ್ತು ಹಿಂದುಳಿದವರು ಇದ್ದು ಅವರಿಗಾಗಿ ಪ್ರತ್ಯೇಕ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಬೇಕೆಂದು ಲಕ್ಷ್ಮಣ ಸವದಿ ಸಿಎಂಗೆ ಮನವಿ ಮಾಡಿದ್ದಾರೆ.

ಇದರಿಂದ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಈ ಸಮುದಾಯದ ಬಡವರಿಗೆ ಮತ್ತು ಹಿಂದುಳಿದವರಿಗೆ ಅನುಕೂಲ ಸಿಗುವಂತಾಗಿ ಸಾಮಾಜಿಕ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಸವದಿ ಅವರು ಹೇಳಿದ್ದಾರೆ. ಒಂದು ವೇಳೆ ಸರಕಾರ ಈ ಮನವಿಗೆ ಅಸ್ತು ಎಂದರೇ ಜಾತಿವಾರು ಅಭಿವೃದ್ಧಿ ಪ್ರಾಧಿಕಾರಗಳಿಗೆ ಕೂಗು ಮಾರ್ದನಿಸಲಿದ್ದು, ಸರಕಾರಕ್ಕೆ ದೊಡ್ಡ ತಲೆನೋವು ತರುವುದರಲ್ಲಿ ಸಂಶಯವೇ ಇಲ್ಲ.

ರಾಜ್ಯ ಸರಕಾರದ ಈ ನಡೆಯಿಂದ ಉತ್ತೇಜಿತರಾಗಿ ಈಗಾಗಲೇ ಡಜನ್ಗಟ್ಟಲೆ ಸಮುದಾಯಗಳು ತಮಗೂ ಒಂದು ಪ್ರಾಧಿಕಾರದ ಬೇಡಿಕೆ ಇಡಲು ಸಜ್ಜಾಗಿ ನಿಂತಿವೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕೆಲಸ ಕಾರ್ಯಗಳಿಗೆ ಹಣ ಬಿಡುಗಡೆ ಮಾಡಲು ಮೀನಮೇಷ ಎಣಿಸುತ್ತಿರುವ ಸರಕಾರ 50 ಕೋಟಿ ರೂ ವೆಚ್ಚದಲ್ಲಿ ಮರಾಠ ಪ್ರಾಧಿಕಾರ ರಚನೆಗೆ ಮುಂದಾಗಿರುವುದು ಸಾಕಷ್ಟು ಟೀಕೆಗೂ ಗುರಿಯಾಗಿದೆ.

ಈ ಕೂಡಲೇ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯ ನಿರ್ಧಾರವನ್ನು ಕೈಬಿಡದಿದ್ದರೇ ಉಗ್ರ ಹೀರಾಟ ನಡೆಸುವುದಾಗಿ ಕನ್ನಡ ಪರ ಹೋರಾಟ ಸಮಗಟನೆಗಳು ಸರಕಾರಕ್ಕೆ ಎಚ್ಚರಿಕೆ ನೀಡಿವೆ. ಕೋವಿಡ್ ನೆಪದಲ್ಲಿ ಖಜÁನೆ ಖಾಲಿಯಾಗಿದ್ದರೂ ಹೊಸ ಪ್ರಾಧಿಕಾರಳನ್ನು ರಚಿಸಿ ಅವುಗಳಿಗೆ 50-100 ಕೋಟಿ ರೂ.ಗಳ ಅನುದಾನ ಮೀಸಲಿಡುತ್ತಿರುವುದರ ಬಗ್ಗೆ ಅಧಿಕಾರಿಗಳ ವಲಯದಲ್ಲಿ ಸಾಕಷ್ಟು ಅಸಮಾಧಾನ.

ಮೀಸಲಿಗೆ ಸುಪ್ರೀಂ ತಡೆ: ಕರ್ನಾಟಕದಲ್ಲಿ ಲಿಂಗಾಯತರಿಗೆ ಶೇಕಡಾ 16ರಷ್ಟು ಮೀಸಲಾತಿ ನೀಡಲು ಸಾಧ್ಯನಾ ಅನ್ನೋ ಪ್ರಶ್ನೆ ಎದುರಾಗುತ್ತಿದೆ. ಕಾಂಗ್ರೆಸ್ ಮಹಾರಾಷ್ಟ್ರ ಮಾದರಿಯನ್ನು ಪ್ರಸ್ತಾಪಿಸಿದೆ. ಆದರೆ ಮಹಾರಾಷ್ಟ್ರ ಸರ್ಕಾರದ ಆದೇಶಕ್ಕೆ ಸುಪ್ರೀಂಕೋರ್ಟ್ ಎರಡು ತಿಂಗಳ ಹಿಂದೆಯೇ ತಡೆ ನೀಡಿದೆ.

2018ರಲ್ಲಿ ಮಹಾರಾಷ್ಟ್ರ ಸರ್ಕಾರದಿಂದ ಮರಾಠಿಗರಿಗೆ ಮಹಾ ಮೀಸಲಾತಿ ನೀಡಿತ್ತು. ಮರಾಠಿಗರಿಗೆ ಶಿಕ್ಷಣ, ಉದ್ಯೋಗದಲ್ಲಿ ಶೇ.16ರಷ್ಟು ಮೀಸಲಾತಿ ಆದೇಶ ಮಹಾರಾಷ್ಟ್ರ ವಿಧಾನಸಭೆಯಲ್ಲಿ 2018ರ ನ.30ರಂದು ಬಿಲ್ ಪಾಸ್ ಮಾಡಲಾಗಿತ್ತು. ಆದರೆ, ಇದನ್ನು ಪ್ರಶ್ನಿಸಿ ಹಲವರು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು. ಶೇಕಡಾ 16ರಷ್ಟು ಮೀಸಲಾತಿ ಸರಿಯಲ್ಲ ಎಂದು 2019ರ ಜುಲೈನಲ್ಲಿ ಬಾಂಬೈ ಹೈಕೋರ್ಟ್ ತೀರ್ಪು ನೀಡಿತ್ತು.

ಉದ್ಯೋಗದಲ್ಲಿ ಶೇ.12ರಷ್ಟು, ಶಿಕ್ಷಣದಲ್ಲಿ ಶೇ.13ರಷ್ಟು ಮೀರದಂತೆ ಮೀಸಲಾತಿಗೆ ಸೂಚನೆ ಬಾಂಬೆ ಹೈಕೋರ್ಟ್ ಸೂಚನೆ ನೀಡಿತ್ತು. ಬಾಂಬೆ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು.

2020ರ ಸೆ.09ರಂದು ಬಾಂಬೆ ಹೈಕೋರ್ಟ್ ತೀರ್ಪುನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು. ಮರಾಠಿಗರಿಗೆ ಶೇ. 16ರಷ್ಟು ಮೀಸಲಾತಿ ಜಾರಿಗೊಳಿಸದಂತೆ ಮಹಾ ಸರ್ಕಾರಕ್ಕೆ ಸೂಚನೆ ನೀಡಿತ್ತು. ಆದ್ರೆ 2018ರಿಂದ ಮೀಸಲಾತಿ ಲಾಭ ಪಡೆದವರಿಗೆ ತೊಂದರೆ ಕೊಡದಂತೆ ಸೂಚನೆ ನೀಡಿದೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ಅಗತ್ಯವಿರುವ ಹಿನ್ನೆಲೆಯಲ್ಲಿ ಸಾಂವಿಧಾನಿಕ ಪೀಠ ರಚನೆ ಮಾಡಲಾಗಿದೆ.

Facebook Comments