ಬಿಎಸ್‌ವೈ ನಾಯಕತ್ವ ಬದಲಾವಣೆ ಚರ್ಚೆಗೆ ಬ್ರೇಕ್ ಹಾಕಿದ ಹೈಕಮಾಂಡ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.21- ರಾಜ್ಯದ ಉಪಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡಿರುವ ಕೇಂದ್ರ ಬಿಜೆಪಿ ವರಿಷ್ಠರು, ಸದ್ಯಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ನಾಯಕತ್ವ ಬದಲಾವಣೆಗೆ ಕೈ ಹಾಕದಿರಲು ತೀರ್ಮಾನಿಸಿದೆ.  ಡಿಸೆಂಬರ್ ತಿಂಗಳೊಳಗೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಿದ್ದಾರೆ ಎಂಬ ಪುಕಾರುಗಳು ಬಿಜೆಪಿ ವಲಯದಲ್ಲಿ ಕೇಳಿಬಂದಿದ್ದವು. ಇದಕ್ಕೆ ಪುಷ್ಟಿ ನೀಡುವಂತೆ ಕೆಲವು ಘಟನೆಗಳು ಕೂಡ ಬಿಎಸ್‍ವೈ ನಾಯಕತ್ವ ಬದಲಾಗಲಿದೆ ಎಂಬ ಮಾತು ಜೋರಾಗಿ ಕೇಳಿಬರುತ್ತಿತ್ತು.

ಸದ್ಯ ಈ ವದಂತಿಗಳಿಗೆ ಪೂರ್ಣ ವಿರಾಮ ಹಾಕಿರುವ ಕೇಂದ್ರ ವರಿಷ್ಠರು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಗೆ ಕಾಲ ಪಕ್ವವಾಗಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.  ಯಾವುದೇ ಸಕಾರಣವಿಲ್ಲದೆ ಅವರ ನಾಯಕತ್ವವನ್ನು ಬದಲಾಯಿಸಿದರೆ ಪಕ್ಷದ ಬೆನ್ನೆಲುಬಾಗಿರುವ ವೀರಶೈವ ಲಿಂಗಾಯಿತ ಸಮುದಾಯ ಚುನಾವಣೆಯಲ್ಲಿ ತಿರುಗಿ ಬೀಳಬಹುದೆಂಬ ಆತಂಕ ಎದುರಾಗಿದೆ.

ದಕ್ಷಿಣ ಭಾರತದಲ್ಲಿ ಬಿಜೆಪಿ ನೆಲೆಯಿರುವುದು ಕರ್ನಾಟದಲ್ಲಿ ಮಾತ್ರ. ಏನೇ ತಂತ್ರಮಂತ್ರ ಮಾಡಿದರೂ ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಪಾಂಡಿಚೇರಿ, ಪುದುಚೇರಿಗಳಲ್ಲಿ ಅಕಾರಕ್ಕೆ ಬರಲು ಸಾಧ್ಯವಾಗಿಲ್ಲ.  ಕರ್ನಾಟಕದಲ್ಲಿ ಮತ್ತೆ ಅಕಾರ ಕಳೆದುಕೊಂಡರೆ ಅಕಾರಕ್ಕೆ ಬರುವುದು ಸಾಧ್ಯವಾಗುವುದಿಲ್ಲ ಎಂಬುದನ್ನು ಮನಗಂಡಿರುವ ದೆಹಲಿ ವರಿಷ್ಠರು ಸೂಕ್ತ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಕುರಿತಂತೆ ತೀರ್ಮಾನ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ.

ಆದರೆ ಸದ್ಯಕ್ಕಂತೂ ಯಡಿಯೂರಪ್ಪ ನಾಯಕತ್ವವನ್ನು ಬದಲಾವಣೆ ಮಾಡುವುದು ಅಷ್ಟೂ ಸರಳವಾಗಿಲ್ಲ ಎಂಬುದು ದೆಹಲಿ ನಾಯಕರಿಗೂ ಗೊತ್ತು.  ತಮ್ಮನ್ನು 2010ರಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸಿದ್ದಕ್ಕೆ 2013ರ ಚುನಾವಣೆಯಲ್ಲಿ ಬಿಎಸ್‍ವೈ ಸ್ವಂತ ಪಕ್ಷ ಕಟ್ಟಿ ಪಕ್ಷವನ್ನು ಮಕಾಡೆ ಮಲಗಿಸಿದ್ದರು.

ಈಗ ಯಡಿಯೂರಪ್ಪ ಬೆನ್ನಿಗೆ ವೀರಶೈವ ಲಿಂಗಾಯಿತ ಸಮುದಾಯ ಪ್ರಬಲವಾಗಿ ನಿಂತಿರುವುದರಿಂದ ಬಿಜೆಪಿ ಪ್ರತಿ ಚುನಾವಣೆಯಲೂ ಅನಾಯಸವಾಗಿ ಗೆದ್ದುಬರುತ್ತಿದೆ.  ಗೆಲ್ಲಲು ಸಾಧ್ಯವೇ ಇಲ್ಲದಂತಹ ಕ್ಷೇತ್ರಗಳಲ್ಲೂ ಕಮಲ ಅರಳಿದೆ. ಅಕಾರದಲ್ಲಿದ್ದಾಗ ಒಂದೇ ಒಂದು ಗ್ರಾಮಪಂಚಾಯ್ತಿ ಚುನಾವಣೆಯನ್ನು ಗೆಲ್ಲಲು ಸಾಧ್ಯವೇ ಇಲ್ಲದಂತಹ ಮಂಡ್ಯ ಜಿಲ್ಲೆಯಲ್ಲೇ ಜೆಡಿಎಸ್ ಭದ್ರಕೋಟೆಯನ್ನು ಛಿದ್ರ ಮಾಡಿ ಗೆಲುವು ಸಾಸಲಾಗಿತ್ತು.

ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲೂ ಶಿರಾದಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಪ್ರತಿಪಕ್ಷಗಳಿಗೆ ಬಿಎಸ್‍ವೈ ಮರ್ಮಾಘಾತವನ್ನು ನೀಡಿದ್ದರು. ಹೀಗೆ ಪ್ರತಿ ಚುನಾವಣೆಯಲ್ಲೂ ಯಡಿಯೂರಪ್ಪ ನಾಯಕ್ವ ಬಲಗೊಳ್ಳುತ್ತಿರುವುದರಿಂದ ದೆಹಲಿ ವರಿಷ್ಠರು ನಾಯಕತ್ವ ಬದಲಾವಣೆಯಂತಹ ದುಸ್ಸಾಹಸಕ್ಕೆ ಕೈ ಹಾಕುವ ಸಾಧ್ಯತೆ ತೀರಾಕಡಿಮೆ ಎನ್ನಲಾಗುತ್ತಿದೆ.

ಮುಂದಿನ ಎರಡೂವರೆ ವರ್ಷಗಳ ಕಾಲ ತಮ್ಮ ಕುರ್ಚಿಯನ್ನು ಭದ್ರ ಪಡಿಸಿಕೊಳ್ಳಲೇಬೇಕಾದ ಇಕ್ಕಟ್ಟಿಗೆ ಸಿಲುಕಿರುವ ಯಡಿಯೂರಪ್ಪ ಸದ್ಯದಲ್ಲೇ ನಡೆಯಲಿರುವ ಮಸ್ಕಿ, ಬಸವಕಲ್ಯಾಣ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಸಿದ್ದಾರೆ. ಹೀಗಾಗಿ ಈಗಾಗಲೇ ಪ್ರತಿಯೊಂದು ಕ್ಷೇತ್ರಗಳಿಗೂ ಜÁತಿವಾರು ಸಚಿವರನ್ನು ಉಸ್ತುವಾರಿಯಾಗಿ ನೇಮಿಸಿದ್ದಾರೆ.

ಒಂದು ಹಂತದಲ್ಲಿ ಯಡಿಯೂರಪ್ಪನವರ ನಾಯಕತ್ವಕ್ಕೆ ಕಂಟಕ ಎದುರಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿರುವಾಗಲೇ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಪರೋಕ್ಷವಾಗಿ ಬಿಎಸ್‍ವೈಗೆ ಬಲ ತಂದುಕೊಟ್ಟಂತಾಗಿದೆ. ಸ್ಥಳೀಯ ನಾಯಕರನ್ನು ಕಡೆಗಣಿಸಿ ಎಲ್ಲ ಸಂದರ್ಭಗಳಲ್ಲೂ ನರೇಂದ್ರಮೋದಿ, ಅಮಿತ್ ಷಾ ಅವರ ಮುಖ ನೋಡಿಯೇ ಮತ ಹಾಕುವುದಿಲ್ಲ ಎಂಬುದು ಎರಡು ರಾಜ್ಯಗಳ ಫಲಿತಾಂಶ ಸಾಬೀತು ಮಾಡಿದೆ. ಇದು ಪರೋಕ್ಷವಾಗಿ ಯಡಿಯೂರಪ್ಪನವರ ಆತ್ಮಸ್ಥೈರ್ಯವನ್ನು ಹೆಚ್ಚುವಂತೆ ಮಾಡಿದೆ.

ಕರ್ನಾಟಕದಲ್ಲಿ ಬಿಜೆಪಿಗೆ ಸಂಬಂಸಿದಂತೆ ನನ್ನನ್ನು ಕಡೆಗಣಿಸಿದರೆ ಪಕ್ಷಕ್ಕೆ ಉಳಿಗಾಲವಿಲ್ಲ ಎಂಬ ಸಂದೇಶವನ್ನು ಈಗಾಗಲೇ ಬಿಸ್ವೈ ಸೂಚ್ಯವಾಗಿ ಹೈಕಮಾಂಡ್ಗೆ ತಲುಪಿಸಿದ್ದಾರೆ. ಆದ್ದರಿಂದಲೇ ಉಪ ಚುನಾವಣೆ ನಡೆಯುವ ಕ್ಷೇತ್ರಗಳಿಗೆ ಹೈಕಮಾಂಡ್ ಯಡಿಯೂರಪ್ಪನವರ ಮಾತಿಗೆ ಹೆಚ್ಚಿನ ಮನ್ನಣೆ ನೀಡಲು ತೀರ್ಮಾನಿಸಿದೆ ಎನ್ನಲಾಗಿದೆ. ಜತೆಗೆ ಬಿಎಸ್ವೈ ನಾಯಕತ್ವಕ್ಕೆ ನಮ್ಮಿಂದ ಯಾವುದೇ ರೀತಿಯ ತೊಂದರೆ ಇಲ್ಲ ಎಂಬ ಸುಳಿವನ್ನೂ ಸಹ ನೀಡಿದೆ.

#ವಿಪಕ್ಷಗಳಲ್ಲೇ ಗೊಂದಲ:
ಆಡಳಿತಾರೂಢ ಬಿಜೆಪಿಯಲ್ಲಿ ಸಾಕಷ್ಟು ಗೊಂದಲಗಳಿದ್ದರೂ ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್‍ನಲ್ಲಿ ಉಂಟಾಗಿರುವ ಗೊಂದಲ ಪರೋಕ್ಷವಾಗಿ ಬಿಜೆಪಿಗೆ ವರದಾನ ತಂದುಕೊಟ್ಟಿದೆ. ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ , ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನಡುವೆ ನಡೆಯುತ್ತಿರುವ ವಾಕ್ಸಮರ ಬಿಜೆಪಿ ನಾಯಕರಲ್ಲಿ ಮಂದಹಾಸ ಮೂಡಿಸಿದೆ.

ಭವಿಷ್ಯದಲ್ಲಿ ಇನ್ನೆಂದೂ ಕಾಂಗ್ರೆಸ್-ಜೆಡಿಎಸ್ ಹೊಂದಾಗುವುದಿಲ್ಲ ಹಾಗೂ ಬಿಜೆಪಿ ಸರ್ಕಾರ ಪತನವಾಗಲು ಬಿಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿರುವುದು ಮುಳುಗುವವರಿಗೆ ಹುಲ್ಲುಕಟ್ಟಿ ಆಸರೆಯೆಂಬಂತಾಗಿದೆ ಬಿಜೆಪಿ ಸ್ಥಿತಿ.

Facebook Comments