ಬಿಜೆಪಿಯಲ್ಲಿ ಸಂಪುಟದೇ ಗೊಂದಲ, ಎಲ್ಲರ ಚಿತ್ತ ಯಡಿಯೂರಪ್ಪ ನಡೆಯತ್ತ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.26- ಆಡಳಿತಾರೂಢ ಬಿಜೆಪಿಯಲ್ಲಿ ಕ್ಷಣಕ್ಷಣಕ್ಕೂ ನಡೆಯುತ್ತಿರುವ ವಿದ್ಯಾಮಾನಗಳು ರೋಚಕ ಘಟ್ಟ ತಲುಪಿದ್ದು, ಸಿಎಂ ಬಿ.ಎಸ್. ಯಡಿಯೂರಪ್ಪ ನಡೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಸಚಿವ ಸಂಪುಟ ವಿಸ್ತರಣೆಯೋ ಇಲ್ಲವೇ ಪುನಾರಚನೆ ಎಂಬ ಗೊಂದಲ ದಲ್ಲಿರುವಾಗಲೇ ಕೆಲವು ಸಚಿವರ ದಿಢೀರ್ ದೆಹಲಿ ಭೇಟಿ, ಸಂಜೆ ಯಡಿಯೂರಪ್ಪನವರ ನಿವಾಸದಲ್ಲಿ ನಡೆಯಲಿರುವ ಸಭೆ, ಸಚಿವ ಸಂಪುಟ ಸಭೆ, ಸಂಸದರ ಸಭೆ ಹೀಗೆ ಸರಣಿ ಸಭೆಗಳು ನಡೆಯುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಕಚೇರಿ ಪೂಜೆಗೆ ಸಚಿವರಾದ ರಮೇಶ್ ಜಾರಕಿಹೊಳಿ, ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಕಂದಾಯ ಸಚಿವ ಆರ್.ಅಶೋಕ್ ಸೇರಿದಂತೆ ಮತ್ತಿತರರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಇತ್ತ ಯಡಿಯೂರಪ್ಪ ಸಂಜೆ ತಮ್ಮ ಅಕೃತ ನಿವಾಸ ಕಾವೇರಿಯಲ್ಲಿ ಆಪ್ತರ ಸಭೆ ಕರೆದಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

ಈ ಬೆಳವಣಿಗೆಗಳ ನಡುವೆಯೇ ನಾಳೆ ಬೆಳಗ್ಗೆ 10.30ಕ್ಕೆ ಸಚಿವ ಸಂಪುಟ ಸಭೆ ನಡೆಯಲಿದೆ. ಜೊತೆಗೆ ಸಂಜೆ ಗೃಹಕಚೇರಿ ಕೃಷ್ಣಾದಲ್ಲಿ ಸಂಸದರು ಮತ್ತು ರಾಜ್ಯಸಭಾಸ ಸದಸ್ಯರ ಸಭೆಯನ್ನೂ ಕರೆದಿದ್ದಾರೆ. ಈ ಎಲ್ಲ ಬೆಳವಣಿಗೆಗಳನ್ನು ಅವಲೋಕಿಸಿದರೆ ಬಿಜೆಪಿಯಲ್ಲಿ ಭರ್ಜರಿ ಬೆಳವಣಿಗೆಗಳು ನಡೆಯುತ್ತಿದ್ದು, ಶತಾಯಗತಾಯ ಮುಂದಿನ ಅವವರೆಗೂ ತಮ್ಮ ನಾಯಕತ್ವವನ್ನು ಗಟ್ಟಿ ಮಾಡಿಕೊಳ್ಳಲು ಎಲ್ಲಾ ರಾಜಕೀಯ ರಣತಂತ್ರಗಳನ್ನು ರೂಪಿಸುತ್ತಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಸಂಬಂಧ ದೆಹಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜೊತೆಗೆ ಮಾತುಕತೆ ನಡೆಸಿ ಒಂದು ವಾರವಾದರೂ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಕಂಡುಬಂದಿಲ್ಲ. ಇದರಿಂದ ಕೆಂಡಮಂಡಲರಾಗಿರುವ ಬಿಎಸ್‍ವೈ ಅವರು ನಿಗಮಮಂಡಳಿಗಳಲ್ಲಿ ಆಪ್ತರಿಗೆ ಮಣೆ ಹಾಕುತ್ತಿದ್ದಾರೆ. ಪಕ್ಷವು ಸೂಚಿಸಿದವರ ಜೊತೆಗೆ ತಮ್ಮ ಹಿತ ಕಾಪಾಡುವವರಿಗೆ ಆಪ್ತ ವಲಯದಲ್ಲಿ ಜಾಗ ಕಲ್ಪಿಸುವ ಮೂಲಕ ರಕ್ಷಣಾ ಕೋಟೆಯನ್ನು ನಿರ್ಮಿಸಿಕೊಳ್ಳಲು ಮುಂದಾಗಿದ್ದಾರೆ.

ಸಂಪುಟ ಪುನಾರಚನೆ ಆಗಲೇಬೇಕೆಂದು ಬಿಎಸ್‍ವೈ ಪಟ್ಟು ಹಿಡಿದಿದ್ದು, ಹಾಲಿ ಇರುವ 4ರಿಂದ 5 ಸಚಿವರಿಗೆ ಕೋಕ್ ನೀಡುವ ಉಮೇದಿನಲ್ಲಿದ್ದಾರೆ. ಆದರೆ ದೆಹಲಿ ವರಿಷ್ಠರು ಮಾತ್ರ ವಿಸ್ತರಣೆಗೆ ಓಕೆ ಎಂದಿದ್ದಾರೆ.

#ಸಂಪುಟ ಸಭೆ:
ನಾಳೆ ಬೆಳಗ್ಗೆ 10.30ಕ್ಕೆ ಯಡಿಯೂರಪ್ಪ ಅವರು ವಿಧಾನಸೌಧದಲ್ಲಿ ಸಂಪುಟ ಸಭೆ ಕರೆದಿದ್ದಾರೆ. ಸಂಜೆ 4 ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಂಸದರ ಸಭೆಯನ್ನು ಆಯೋಜಿಸಿದ್ದಾರೆ. ಮುಂಬರುವ ಗ್ರಾಮಪಂಚಾಯ್ತಿ, ಎರಡು ವಿಧಾನಸಭೆ, ಒಂದು ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ದತೆ ಕುರಿತಂತೆ ಸಭೆ ಕರೆಯಲಾಗಿದೆ ಎಂದು ಹೇಳಲಾಗುತ್ತಿದೆ.

ಆದರೆ ತಮ್ಮ ನಾಯಕತ್ವದ ವಿರುದ್ಧ ಉಂಟಾಗಿರುವ ಗೊಂದಲಗಳಿಗೆ ತೆರೆ ಎಳೆಯುವುದು ಹಾಗೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರಣಕ್ಕಾಗಿಯೇ ಈ ಸಭೆ ಕರೆಯಲಾಗಿದೆ ಎಂದು ಹೇಳಲಾಗುತ್ತಿದೆ.  ಇನ್ನೊಂದೆಡೆ ನವದೆಹಲಿಯಲ್ಲಿ ಬೀಡುಬಿಟ್ಟಿರುವ ಸಚಿವ ರಮೇಶ್ ಜಾರಕಿಹೊಳಿ, ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್‍ಗೆ ಮಂತ್ರಿ ಸ್ಥಾನ ಕೊಡಿಸಲು ಲಾಬಿ ನಡೆಸುತ್ತಿದ್ದಾರೆ. ಆದರೆ ಬಿಜೆಪಿಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ಒಟ್ಟಿನಲ್ಲಿ ಬಿಜೆಪಿಯ ನಡೆಯುತ್ತಿರುವ ಕ್ಷಿಪ್ರ ಬೆಳವಣಿಗೆಗಳು ಕುತೂಹಲಕ್ಕೆ ಕಾರಣವಾಗುತ್ತಿದೆ.

Facebook Comments