ಯೋಗೇಶ್ವರ್ ಅವರನ್ನು ಮಂತ್ರಿ ಮಾಡೇ ಮಾಡ್ತೀವಿ : ಸಿಎಂ ಬಿಎಸ್‍ವೈ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.1- ಕೆಲವು ಶಾಸಕರ ವಿರೋಧದ ನಡುವೆಯೂ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರನ್ನು ನೂರಕ್ಕೆ ನೂರರಷ್ಟು ಮಂತ್ರಿ ಮಾಡುತ್ತೇವೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಡ್ಡಿ ಮುರಿದಂತೆ ಹೇಳಿದ್ದಾರೆ. ಯೋಗೇಶ್ವರ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಬಿಜೆಪಿಯೊಳಗೆ ಕೆಲವು ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಸ್ವತಃ ಸಿಎಂ ಅವರೇ ನೂರಕ್ಕೆ ನೂರರಷ್ಟು ಅವರನ್ನು ಮಂತ್ರಿ ಮಾಡುತ್ತೇವೆ ಎಂದು ಹೇಳಿರುವುದು ಮಹತ್ವ ಪಡೆದುಕೊಂಡಿದೆ.

ವಿಧಾನಸೌಧ ನಿರ್ಮಾತೃ ದಿ.ಕೆಂಗಲ್ ಹನುಮಂತಯ್ಯ ಅವರ ಪುಣ್ಯತಿಥಿ ಅಂಗವಾಗಿ ವಿಧಾನಸೌಧದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಯೋಗೇಶ್ವರ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ನಿಮ್ಮ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹಾಗೂ ಕೆಲವು ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಅವರು(ಯೋಗೇಶ್ವರ್) ಸಂಪುಟಕ್ಕೆ ಬರುವುದು ಖಚಿತ ಎಂದು ಹೇಳಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದ ಯೋಗೇಶ್ವರ್ ಇತ್ತೀಚೆಗೆ ವಿಧಾನಪರಿಷತ್‍ಗೆ ನಾಮಕರಣಗೊಂಡಿದ್ದರು. ಚುನಾವಣೆಯಲ್ಲಿ ಸೋತಿರುವವರನ್ನು ಸಂಪುಟಕ್ಕೆ ತೆಗೆದುಕೊಳ್ಳಬಾರದು ಎಂದು ಬಿಜೆಪಿಯ ಒಂದ ಬಣ ಆಗ್ರಹಿಸಿತ್ತು.

ಈಗಾಗಲೇ ಲಕ್ಷ್ಮಣಸವದಿಯನ್ನು ಡಿಸಿಎಂ ಮಾಡಿರುವುದೇ ಸಾಕು. ಮತ್ತೆ ಸೋತವರಿಗೆ ಮಣೆ ಹಾಕುವುದು ಬೇಡ ಎಂದು ಸಚಿವ ಸ್ಥಾನದ ಮೇಲೆ ಆಕಾಂಕ್ಷಿಗಳು ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೇರಿದಂತೆ ಮತ್ತಿತರರ ಮೇಲೆ ಒತ್ತಡ ಹಾಕಿದ್ದರು.

ಯೋಗೇಶ್ವರ್ ಅವರಿಗೆ ಸಂಪುಟದಲ್ಲಿ ಸ್ಥಾನ ಕೊಡಿಸಲು ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದರು. ಇದು ಸಹಜವಾಗಿ ಮಿತ್ರಮಂಡಳಿಯಲ್ಲೇ ಒಡಕು ಸೃಷ್ಟಿಸಿತ್ತು. ಒಂದು ಗುಂಪು ವಿರೋಧ ವ್ಯಕ್ತಪಡಿಸಿದರೆ, ಕೆಲವರು ಪರವಾಗಿದ್ದರು. ಇದಕ್ಕೆಲ್ಲಾ ಪೂರ್ಣ ವಿರಾಮ ಹಾಕಿರುವ ಸಿಎಂ ಸೈನಿಕನಿಗೆ ಸಂಪುಟದಲ್ಲಿ ಸ್ಥಾನ ಗಟ್ಟಿ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಚುನಾವಣೆಯಲ್ಲಿ ಜನರಿಂದ ನೇರವಾಗಿ ಆಯ್ಕೆಯಾದವರನ್ನೇ ಮಂತ್ರಿ ಮಾಡಬೇಕು ಎಂಬುದು ಬಿಜೆಪಿಯ ಒಂದು ಬಣದ ಒತ್ತಾಯವಾಗಿತ್ತು. ಸೋತವರನ್ನೇ ಸಂಪುಟಕ್ಕೆ ತೆಗೆದುಕೊಂಡರೆ 3ರಿಂದ 5,6 ಬಾರಿ ಗೆದ್ದವರು ಏನು ಮಾಡಬೇಕೆಂಬ ಮೂಲಭೂತ ಪ್ರಶ್ನೆಯನ್ನು ಮುಂದಿಟ್ಟಿದ್ದರು. ಅದರಲ್ಲೂ ಯಡಿಯೂರಪ್ಪನವರ ಪರಮಾಪ್ತ ಹಾಗೂ ರಾಜಕೀಯ ಕಾರ್ಯದರ್ಶಿಯಾಗಿರುವ ಎಂ.ಪಿ.ರೇಣುಕಾಚಾರ್ಯ ಬಹಿರಂಗವಾಗಿಯೇ ಯೋಗೇಶ್ವರ್ ವಿರುದ್ಧ ಕಿಡಿಕಾರಿದ್ದರು.

ಯೋಗೇಶ್ವರ್‍ಗೆ ಮಂತ್ರಿ ಸ್ಥಾನ ಕೊಡಿಸುವುದಾದರೆ ಮೊದಲು ಅಂತಹವರು ತಮ್ಮ ಸ್ಥಾನವನ್ನು ತ್ಯಾಗ ಮಾಡಬೇಕೆಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ಅವರಿಗೆ ಟಾಂಗ್ ನೀಡಿದ್ದರು. ಇದರ ಜತೆಗೆ ಶಾಸಕರಾದ ರಾಜೂಗೌಡ ನಾಯಕ್ ಸೇರಿದಂತೆ ಮತ್ತಿತರರು ಸೋತವರನ್ನೇ ಮಂತ್ರಿ ಮಾಡುವುದಾದರೆ ಕಳೆದ ವಿಧಾನಸಭೆಯಲ್ಲಿ ಪರಾಭವಗೊಂಡಿರುವ ಮಾಲೀಕಯ್ಯ ಗುತ್ತೇದಾರ್, ಬಾಬೂರಾವ್ ಚಿಂಚನಸೂರ್ ಸೇರಿದಂತೆ ಮತ್ತಿತರರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕೆಂದು ವ್ಯಂಗ್ಯವಾಡಿದ್ದರು.

ಈಗ ಯೋಗೇಶ್ವರ್ ಅವರನ್ನು ಸಂಪುಟಕ್ಕೆ ತೆಗೆದುಕೊಂಡಿದ್ದೇ ಆದಲ್ಲಿ ಬಿಜೆಪಿಯಲ್ಲಿ ಮುಂದೆ ನಡೆಯವ ರಾಜಕೀಯ ವಿದ್ಯಮಾನಗಳು ಕುತೂಹಲಕ್ಕೆ ಕಾರಣವಾಗಿದೆ.

Facebook Comments