ಡಿನೋಟಿಫಿಕೇಶನ್ ಪ್ರಕರಣ : ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ಸಿಎಂ ಬಿಎಸ್‍ವೈ ತಯಾರಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.26-ಕುರ್ಚಿಗೆ ಕಂಟಕವಾಗಬಹುದೆಂದು ಹೇಳಲಾಗುತ್ತಿರುವ ಬೆಳ್ಳಂದೂರು ಹಾಗೂ ದೇವರಬಿಸನಹಳ್ಳಿ ಡಿನೋಟಿಫಿಕೇಶನ್ ಪ್ರಕರಣ ಸಂಬಂಧ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ಜಗೆ ಮೇಲ್ಮನವಿ ಸಲ್ಲಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಸಜ್ಜಾಗಿದ್ದಾರೆ.  ಈ ಸಂಬಂಧ ಈಗಾಗಲೇ ಕಾನೂನು ತಜ್ಞರ ಜೊತೆ ಚರ್ಚಿಸಿರುವ ಅವರು, ಸುಪ್ರೀಂಕೋರ್ಟ್ ರಜಾ ಅವಧಿ ಮುಗಿಯುತ್ತಿದ್ದಂತೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ವಾರ ಹೈಕೋರ್ಟ್‍ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಮೈಕಲ್ ಕುನ್ನಾ ಅವರಿದ್ದ ಪೀಠವು ಯಡಿಯೂರಪ್ಪ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿ ಲೋಕಾಯುಕ್ತ ಕಣ್ಗಾವಲಿನಲ್ಲಿ ತನಿಖೆ ನಡೆಯಬೇಕೆಂದು ಆದೇಶ ನೀಡಿತ್ತು.  ಇದೀಗ ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಲು ಯಡಿಯೂರಪ್ಪನವರಿಗೆ ಅವಕಾಶ ಇಲ್ಲದಿರುವ ಕಾರಣ ಸುಪ್ರೀಂಕೋರ್ಟ್‍ನಲ್ಲಿ ಈ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಅರ್ಜಿ ಸಲ್ಲಿಸಬೇಕಾದ ಅನಿವಾರ್ಯತೆ ಇದೆ.

ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅವರ ಪ್ರಕರಣದಲ್ಲಿ, ವಿಚಾರಣೆ ಕೈ ಬಿಟ್ಟಂತೆ, ತಮ್ಮ ವಿರುದ್ಧದ ಆರೋಪವನ್ನು ಕೈ ಬಿಡಿ ಎಂದು ಯಡಿಯೂರಪ್ಪ ಈ ಪ್ರಕರಣದಲ್ಲಿ ಅರ್ಜಿ ಸಲ್ಲಿಸಿದ್ದರು.  ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಆದರೆ ನ್ಯಾಯಾಲಯದಿಂದ ಅರ್ಜಿ ವಜಾ ಆಗಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಕಾನೂನು ತಜ್ಞರ ಸಲಹೆ ಪಡೆದು ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

ಕಾನೂನು ತಜ್ಞರ ಸಲಹೆ ಪಡೆದ ವೇಳೆ, ಹೈಕೋರ್ಟ್‍ನಿಂದ ನಿಮ್ಮ ಅರ್ಜಿ ವಜಾಗೊಂಡಿರುವುದರಿಂದ ನೇರವಾಗಿ ಸುಪ್ರೀಂಕೋರ್ಟ್ ಗಮನಕ್ಕೆ ತರಬಹುದು. ಹೀಗಾಗಿ, ಅಂಜಿಕೆಯಿಲ್ಲದೆ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಅರ್ಜಿ ಸಲ್ಲಿಸಿ ಎಂದು ತಜ್ಞರು ಹೇಳಿದ್ದಾರೆ.

Facebook Comments