ನಿರೀಕ್ಷೆಗೆತಕ್ಕಂತೆ ಆಡಳಿತ ನಡೆಸಲು ಸಾಧ್ಯವಾಗಿಲ್ಲ : ಸಿಎಂ ಅಚ್ಚರಿ ಹೇಳಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.9- ರಾಜ್ಯದಲ್ಲಿ ಈ ಬಾರಿ ಕೋವಿಡ್, ಬರಗಾಲ, ಅತಿವೃಷ್ಟಿ ಕಾಣಿಸಿಕೊಂಡು ಆರ್ಥಿಕ ಪರಿಸ್ಥಿತಿ ಏರುಪೇರಾಗಿದ್ದರಿಂದ ನಾನು ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನಡೆಸಲು ಸಾಧ್ಯವಾಗಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಒಪ್ಪಿಕೊಂಡಿದ್ದಾರೆ.  ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತತ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಭೀಕರ ಪ್ರವಾಹ ಉಂಟಾಯಿತು. ಇದರ ಬೆನ್ನಲ್ಲೇ ಕೋವಿಡ್-19 ಬಂದು ಆರ್ಥಿಕ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡವು ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿದೆ. ಕೊರೊನಾ, ಅತಿವೃಷ್ಟಿ, ಬರಗಾಲಗಳ ಹೊಡೆತದಿಂದ ರಾಜ್ಯ ಆರ್ಥಿಕವಾಗಿ ನಲುಗಿ ಹೋಗಿದೆ. ಹೀಗಾಗಿ ನಾನು ನಿರೀಕ್ಷೆಯಂತೆ ಯಾವ ಕೆಲಸವನ್ನೂ ಮಾಡಿಲ್ಲ. ಬಜೆಟ್‍ನಲ್ಲಿಯೂ 40-50 ಸಾವಿರ ಕೋಟಿ ಖೋತಾ ಆಗಿದೆ ಎಂದು ವಾಸ್ತವ ಚಿತ್ರಣ ಬಿಡಿಸಿಟ್ಟರು.  ಕರ್ನಾಟಕವನ್ನು ದೇಶದಲ್ಲೇ ಮಾದರಿ ರಾಜ್ಯ ಮಾಡಬೇಕೆಂಬ ಗುರಿಯನ್ನು ಇಟ್ಟುಕೊಂಡಿದ್ದೆ. ಆದರೆ ಕೋವಿಡ್ ಅತಿವೃಷ್ಟಿ, ಬರಗಾಲ ಸಂದರ್ಭಗಳಿಂದಾಗಿ ಆರ್ಥಿಕ ಚಟುವಟಿಕೆಗಳು ಕೈಕೊಟ್ಟು ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನಡೆಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಬರುವ ದಿನಗಳಲ್ಲಿ ಪರಿಸ್ಥಿತಿ ಸುಧಾರಣೆಯಾಗುವ ಸಂಭವವಿದೆ. ನಮ್ಮ ನಿರೀಕ್ಷೆಗೆ ತಕ್ಕಂತೆ ವರಮಾನ ಸಂಗ್ರಹಣೆಯಾದರೆ ಜನರು ಸ್ವಾವಲಂಬಿಯಾಗಿ ಬದುಕಲು ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.  ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ದೆಹಲಿ ವರಿಷ್ಠರು ಯಾವಾಗ ಅನುಮತಿ ನೀಡುತ್ತಾರೋ ಆವಾಗಲೇ ವಿಸ್ತರಣೆಯಾಗುತ್ತದೆ. ಇದರಲ್ಲಿ ಯಾರಿಗೂ ಯಾವುದೇ ಗೊಂದಲವಿಲ್ಲ. ಎಲ್ಲರಿಗೂ ಇದು ಗೊತ್ತಿರುವ ವಿಷಯವೇ ಎಂದರು.

ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ ಎಂಬ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಿಎಂ, ವರಿಷ್ಠರು ಯಾವುದಕ್ಕೆ ಅನುಮತಿ ಕೊಡುತ್ತಾರೋ ಅದರಂತೆ ನಡೆಯಲಿದೆ ಎಂದು ಸ್ಪಷ್ಟನೆ ನೀಡಿದರು.  ಈ ಮೂಲಕ ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಆಗಲಿದೆಯೋ? ಇಲ್ಲವೋ? ಎಂಬುದು ಹೈಕಮಾಂಡ್? ನಿರ್ಧಾರಕ್ಕೆ ಬಿಟ್ಟಿದ್ದು ಎಂಬರ್ಥದಲ್ಲಿ ಹೇಳಿಕೆ ನೀಡಿದ್ದಾರೆ.
ವಿಚಾರಣೆ ನಡೆಯುತ್ತಿದೆ: ಅನೇಕರಿಗೆ ಆಸೆ, ಆಮಿಷಗಳನ್ನು ಒಡ್ಡಿ ವಂಚನೆ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಪಟ್ಟಿರುವ ಯುವರಾಜ್ ಪ್ರಕರಣ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಮ್ಮ ಪಕ್ಷಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ. ಅಧಿಕಾರದಲ್ಲಿದ್ದ ವೇಳೆ ಯಾವಾಗಲೋ ಬಂದು ಫೋಟೋ ತೆಗೆಸಿಕೊಂಡ ತಕ್ಷಣವೇ ಅದು ಅಪರಾಧವಾಗುವುದಿಲ್ಲ. ಆತನ ವಿರುದ್ಧ ತನಿಖೆ ನಡೆಯುತ್ತಿದೆ. ನಂತರ ಮುಂದಿನ ಕ್ರಮಗಳನ್ನು ಪೊಲೀಸರು ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು. ದೇಶದಲ್ಲಿ ಮೊದಲ ಆಟಿಕೆ ಕ್ಲಸ್ಟರ್ ಕಾರ್ಯಕ್ರಮಕ್ಕೆ ಭೂಮಿ ಪೂಜೆ ಮಾಡ್ತಾ ಇದ್ದೇವೆ. ಇದರ ಉದ್ಘಾಟನಾ ಸಮಾರಂಭಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕರೆಸಬೇಕೆಂಬ ಆಪೇಕ್ಷೆ ಇದೆ ಎಂದು ಇದೇ ವೇಳೆ ಹೇಳಿದ್ದಾರೆ.

Facebook Comments