ಕುರ್ಚಿ ಸಿಗದೇ ಕೊತಕೊತ ಕುದಿಯುತ್ತಿರುವವರಿಗೆ ಬಿಎಸ್‍ವೈ ಖಡಕ್ ವಾರ್ನಿಂಗ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.14- ಸಚಿವ ಸಂಪುಟದಲ್ಲಿ ಸ್ಥಾನ ಸಿಗದೇ ಅಸಮಾಧಾನಗೊಂಡಿರುವವರು ಅಗತ್ಯವಿದ್ದರೆ ದೆಹಲಿ ವರಿಷ್ಟರಿಗೆ ದೂರು ನೀಡಲಿ. ಇದಕ್ಕೆ ನನ್ನ ಅಭ್ಯಂತರವೇನಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭಿನ್ನಮತಿಯರಿಗೆ ನೇರವಾಗಿಯೇ ಬಹಿರಂಗ ಸವಾಲು ಹಾಕಿದ್ದಾರೆ. ದಾವಣಗೆರೆಗೆ ತೆರಳುವ ಮುನ್ನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಸಿಗದವರು ಅಸಮಾಧಾನವಿದ್ದರೆ ದೆಹಲಿಗೆ ಹೋಗಿ ದೂರು ಕೊಡಲಿ. ಅವರನ್ನು ತಡೆಯುವವರು ಯಾರು ಎಂದು ಪ್ರಶ್ನಿಸಿದರು.

ನಿಮಗೆ ಸಮಾಧಾನವೋ ಅಥವಾ ಅಸಮಾಧಾನವೋ ನನಗೆ ಗೊತ್ತಿಲ್ಲ. ಸಚಿವ ಸ್ಥಾನ ಸಿಕ್ಕಿಲ್ಲಲ ಎಂದು ಹಾದಿಬೀದಿಯಲ್ಲಿ ಮಾತನಾಡಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರಬೇಡಿ. ದೆಹಲಿಗೆ ಹೋದರೆ ಹೋಗಲಿ. ಎಲ್ಲವನ್ನು ವರಿಷ್ಟರು ನೋಡಿಕೊಳ್ಳುತ್ತಾರೆ ಎಂದು ಪರೋಕ್ಷವಾಗಿ ಭಿನ್ನಮತೀಯರಿಗೆ ಎಚ್ಚರಿಕೆ ಕೊಟ್ಟರು. ವರಿಷ್ಟರು ಕೊಟ್ಟ ಸೂಚನೆಯಂತೆ ಸಂಪುಟ ವಿಸ್ತರಣೆ ಮಾಡಲಾಗಿದೆ. ಯಾರನ್ನೂ ಕೂಡ ಕಡೆಗಣಿಸಿಲ್ಲ.

ಕೆಲವರು ಹಾದಿಬೀದಿಯಲ್ಲಿ ಮಾತನಾಡಿದರೆ ಸಚಿವ ಸ್ಥಾನ ಸಿಗುತ್ತದೆ ಎಂದು ಅಂದುಕೊಂಡಿದ್ದಾರೆ. ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಕೆಲಸವನ್ನು ಶಾಸಕರು ಮಾಡಬಾರದು ಎಂದು ಸಿಎಂ ಮನವಿ ಮಾಡಿದರು. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ವರಿಷ್ಟರೇ ತೀರ್ಮಾನಿಸುತ್ತಾರೆ. ಬಸವನಗೌಡ ಪಾಟೀಲ್ ಯತ್ನಾಳ್ ಅಂತಹವರು ಎಲ್ಲಾ ಪಕ್ಷದಲ್ಲೂ ಇದ್ದೇ ಇರುತ್ತಾರೆ.

ನಾನು ಅದಕ್ಕೆ ಹೆಚ್ಚು ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಹೇಳಿ ದಾವಣಗೆರೆಯತ್ತ ಪ್ರಯಾಣಿಸಿದರು. ನಿನ್ನೆ ಸಂಪುಟ ವಿಸ್ತರಣೆಯ ಬೆನ್ನಲ್ಲೇ ವಂಚಿತರು ಸಿಎಂ ಯಡಿಯೂರಪ್ಪನವರ ಮೇಲೆ ಕಿಡಿಕಾರಿದ್ದಾರೆ. ಪಕ್ಷ ನಿಷ್ಟೆ, ಹಿರಿತನ ಎಲ್ಲವನ್ನೂ ಕಡೆಗಣಿಸಿ ದುಡ್ಡುಕೊಟ್ಟವರು, ಬ್ಲಾಕ್‍ಮೇಲ್ ಮಾಡಿದವರು, ಸಿಡಿ ಇಟ್ಟುಕೊಂಡವರು, ನಾಯಕತ್ವ ಬದಲಾವಣೆಗೆ ಸಂಚು ರೂಪಿಸಿದವರನ್ನು ಸಿಎಂ ಸಂಪುಟಕ್ಕೆ ತೆಗೆದುಕೊಂಡಿದ್ದಾರೆ ಎಂದು ನೇರವಾಗಿಯೇ ವಾಗ್ದಾಳಿ ನಡೆಸಿದ್ದರು.

ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್, ಸತೀಶ್ ರೆಡ್ಡಿ, ಎಂ.ಪಿ.ರೇಣುಕಾಚಾರ್ಯ, ತಿಪ್ಪಾರೆಡ್ಡಿ, ಅರವಿಂದ್ ಬೆಲ್ಲದ್, ಸಿದ್ದು ಸವದಿ, ಎಸ್.ಎ.ರಾಮದಾಸ್, ಅಭಯ್‍ಪಾಟೀಲ್, ಕೆ.ಜೆ.ಬೋಪಯ್ಯ, ಶಿವನಗೌಡ ನಾಯಕ್, ರಾಜುಗೌಡ ನಾಯಕ್, ನಾಗೇಂದ್ರ ಸೇರಿದಂತೆ ಅನೇಕ ಶಾಸಕರು ಸಂಪುಟದಲ್ಲಿ ಸ್ಥಾನ ಸಿಗದಿರುವುದಕ್ಕೆ ಸಿಎಂ ಹಾಗೂ ಪಕ್ಷದ ವಿರುದ್ಧ ಕೊತಕೊತನೆ ಕುದಿಯುತ್ತಿದ್ದಾರೆ.

Facebook Comments