ಸಚಿವಾಕಾಂಕ್ಷಿಗಳ ಅಸಮಾಧಾನ ನಿವಾರಣೆಗೆ ಸಿಎಂ ಕಸರತ್ತು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.16- ಸಚಿವ ಸಂಪುಟ ವಿಸ್ತರಣೆ ಬಳಿಕ ಬೂದಿ ಮುಚ್ಚಿದ ಕೆಂಡದಂತಿರುವ ಸಚಿವಾಕಾಂಕ್ಷಿಗಳ ಅಸಮಾಧಾನ ನಿವಾರಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹರಸಾಹಸ ಪಡುತ್ತಿದ್ದಾರೆ. ಅತೃಪ್ತ ಶಾಸಕರಿಗೆ ಸಚಿವ ಪದವಿ ಬದಲಿಗೆ, ಅದಕ್ಕೆ ಸರಿಸಮನಾದ ಪರ್ಯಾಯ ಹುದ್ದೆ ನೀಡುವ ಹಾಗೂ ಭಿನ್ನಮತೀಯ ಶಾಸಕರಿಗೆ ಹೆಚ್ಚಿನ ಅನುದಾನ ನೀಡುವ ಭರವಸೆ ನೀಡಿ ಬಂಡಾಯದ ಚಟುವಟಿಕೆಗಳನ್ನು ಹತ್ತಿಕ್ಕುವ ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ಬಸವನಗೌಡ ಪಾಟೀಲ್ ಯತ್ನಾಳ್, ಎಂ.ಪಿ.ರೇಣುಕಾಚಾರ್ಯ, ಜಿ.ಹೆಚ್. ತಿಪ್ಪಾರೆಡ್ಡಿ, ಸತೀಶ್ ರೆಡ್ಡಿ, ಎಸ್.ಎ.ರಾಮದಾಸ್, ಸುನೀಲ್ ಕುಮಾರ್, ಅಭಯ್ ಪಾಟೀಲ್, ಅರವಿಂದ ಬೆಲ್ಲದ್, ಹೆಚ್.ವಿಶ್ವನಾಥ್ , ಸಿದ್ದು ಸವದಿ, ಶಿವನಗೌಡ ನಾಯಕ್, ರಾಜೂಗೌಡ, ನೆಹರೂ ಓಲೇಕಾರ, ಅಪ್ಪಚ್ಚು ರಂಜನ್ ಸೇರಿದಂತೆ ಹಲವರು ತಮಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಅತೃಪ್ತಿ ಹೊರಹಾಕಿದ್ದಾರೆ. ಬಂಡಾಯವೆದ್ದಿರುವ ಅತೃಪ್ತ ಶಾಸಕರಲ್ಲಿ ಹೆಚ್.ವಿಶ್ವನಾಥ್, ಬಸನಗೌಡ ಯತ್ನಾಳ್ ಹೊರತು ಪಡಿಸಿದರೆ ಉಳಿದವರ ಅಸಮಾಧಾನ ನಿವಾರಣೆ ಮಾಡುವುದು ಸಿಎಂಗೆ ಅಷ್ಟು ಕಷ್ಟವಲ್ಲ.

ಸಚಿವ ಸಂಪುಟ ವಿಸ್ತರಣೆಗೂ ಮುನ್ನವೇ ಹಲವಾರು ಸಚಿವಾಕಾಂಕ್ಷಿಗಳಿಗೆ ನಿಗಮ ಮಂಡಳಿಗೆ ನೇಮಿಸುವ ಭರವಸೆ ನೀಡಿ ಹೆಚ್ಚಿನ ಬಂಡಾಯ ಸೃಷ್ಟಿಯಾಗದಂತೆ ನೋಡಿಕೊಂಡಿದ್ದಾರೆ. ಇದರ ಪರಿಣಾಮವಾಗಿ ಪ್ರಬಲ ಸಚಿವಾಕಾಂಕ್ಷಿಗಳು ಸಹ ಮಂತ್ರಿ ಸ್ಥಾನ ಸಿಗದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಲು ಸಾಧ್ಯವಾಗದೇ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ದಿನದಿಂದ ದಿನಕ್ಕೆ ಹೆಚ್ಚಿನ ಶಾಸಕರ ಭಿನ್ನಮತದ ಧ್ವನಿ ಕ್ಷೀಣಿಸತೊಡಗಿದೆಯಾದರೂ ತೀವ್ರ ಅಸಮಾಧಾನಗೊಂಡಿರುವ ಎಚ್.ವಿಶ್ವನಾಥ್ ಮತ್ತು ಬಸವನಗೌಡ ಯತ್ನಾಳ್ ಅವರ ಬಂಡಾಯದ ಸ್ವರೂಪ ಯಾವ ಹಂತಕ್ಕೆ ತಲುಪಲಿದೆ ಎನ್ನುವುದನ್ನು ಈಗಲೇ ಊಹಿಸುವುದು ಕಷ್ಟ. ಮುಖ್ಯಮಂತ್ರಿ ಯಡಿಯೂರಪ್ಪ ಮಾತ್ರ ಸಚಿವ ಸ್ಥಾನ ಸಿಗದ ಅತೃಪ್ತ ಶಾಸಕರನ್ನು ವಿಶ್ವಾಸಕ್ಕೆ ತಗೆದುಕೊಂಡು ಭಿನ್ನಮತ ಸ್ಫೋಟಗೊಳ್ಳದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ.

ಕೆಲವು ಶಾಸಕರ ಅತೃಪ್ತಿ ಹೋಗಲಾಡಿಸುವ ಜವಾಬ್ದಾರಿಯನ್ನು ಪಕ್ಷದ ರಾಜ್ಯಾಧ್ಯಕ್ಷರು, ಹಿರಿಯ ಮುಖಂಡರು ಮತ್ತು ಹಿರಿಯ ಸಚಿವರಿಗೆ ನೀಡಿದ್ದಾರೆ. ಶಾಸಕರು ಗುಂಪುಕಟ್ಟಿಕೊಂಡು ಸರಕಾರಕ್ಕೆ ಹಾನಿಯಾಗುವಂತೆ ಭಿನ್ನಮತೀಯ ಚಟುವಟಿಕೆ ನಡೆಸದಂತೆ ಜಾಗೃತಿ ವಹಿಸಲಾಗುತ್ತಿದೆ. 13 ಜಿಲ್ಲೆಗಳಿಗೆ ಇಲ್ಲ ಪ್ರಾತಿನಿಧ್ಯ: ಒಂದು ಸ್ಥಾನ ಹೊರತುಪಡಿಸಿ ಯಡಿಯೂರಪ್ಪ ಅವರ ಸಂಪುಟ ಬಹುತೇಕ ಭರ್ತಿಯಾಗಿದ್ದರೂ ರಾಜ್ಯದ 13 ಜಿಲ್ಲೆಗಳಿಗೆ ಕ್ಯಾಬಿನೆಟ್‍ನಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ.

ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ಕೋಲಾರ, ಬಳ್ಳಾರಿ, ದಾವಣಗೆರೆ, ಚಿಕ್ಕಮಗಳೂರು, ಯಾದಗಿರಿ, ಕಲಬುರಗಿ, ರಾಯಚೂರು, ವಿಜಯಪುರ, ಕೊಪ್ಪಳ ಜಿಲ್ಲೆಗಳಿಗೆ ಮಂತ್ರಿ ಭಾಗ್ಯ ಸಿಕ್ಕಿಲ್ಲ.  ಒಟ್ಟು 34 ಸಂಖ್ಯಾಬಲದ ಮಂತ್ರಿ ಮಂಡಲದಲ್ಲಿ ಮೊನ್ನೆ ನಡೆದ ಸಚಿವ ಸಂಪುಟ ವಿಸ್ತರಣೆಯಿಂದ 33 ಸ್ಥಾನ ಭರ್ತಿಯಾದಂತಾಗಿದೆ. 31 ಜಿಲ್ಲೆಗಳನ್ನು ಹೊಂದಿರುವ ರಾಜ್ಯದಲ್ಲಿ ಹೆಚ್ಚಿನ ಜಿಲ್ಲೆಗಳಿಗೆ ಸಚಿವ ಭಾಗ್ಯ ದೊರೆತಿಲ್ಲ.

28 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಬೆಂಗಳೂರು ಮಹಾನಗರಕ್ಕೆ 8 ಸಚಿವ ಸ್ಥಾನ ದೊರೆತಿದ್ದರೆ (ಸುರೇಶ್ ಕುಮಾರ್, ಆರ್.ಅಶೋಕ, ಅಶ್ವತ್ಥ ನಾರಾಯಣ, ವಿ.ಸೋಮಣ್ಣ, ಅರವಿಂದ ಲಿಂಬಾವಳಿ, ಬೈರತಿ ಬಸವರಾಜು, ಎಂಟಿಬಿ ನಾಗರಾಜ್, ಎಸ್.ಟಿ.ಸೋಮಶೇಖರ್) ರಾಜ್ಯದಲ್ಲಿ ಬೆಂಗಳೂರು ನಂತರ ಅತಿ ಹೆಚ್ಚು 18 ವಿಧಾನಸಭಾ ಕ್ಷೇತ್ರ ಹೊಂದಿರುವ ಬೆಳಗಾವಿ ಜಿಲ್ಲೆಗೆ 5 ಸಚಿವ ಸ್ಥಾನ (ಲಕ್ಷ್ಮಣ ಸವದಿ, ರಮೇಶ ಜಾರಕಿಹೊಳಿ, ಶಶಿಕಲಾ ಜೊಲ್ಲೆ, ಶ್ರೀಮಂತ ಪಾಟೀಲ್, ಉಮೇಶ ಕತ್ತಿ) ದೊರೆತಿದೆ. ಚಿಕ್ಕ ಜಿಲ್ಲೆಗಳಲ್ಲಿ ಒಂದಾದ ಹಾವೇರಿ ಜಿಲ್ಲೆಗೆ 3 ಸಚಿವ ಸ್ಥಾನ (ಬಸವರಾಜ ಬೊಮ್ಮಾಯಿ, ಬಿ.ಸಿ.ಪಾಟೀಲ್, ಆರ್.ಶಂಕರ್) ಲಭಿಸಿದೆ.

ಬಿಜೆಪಿಯ ಮೊದಲ ಸರ್ಕಾರದಲ್ಲಿ ಪ್ರಾಬಲ್ಯ ಸಾಧಿಸಿದ್ದ ಬಳ್ಳಾರಿ ಜಿಲ್ಲೆಗೆ ಸಂಪುಟದಲ್ಲಿ ಯಾವುದೇ ಪ್ರಾತಿನಿಧ್ಯ ದೊರೆತಿಲ್ಲ. ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಮೂಲತಃ ಬಳ್ಳಾರಿ ಜಿಲ್ಲೆಯವರಾದರೂ ಅವರು ಪ್ರತಿನಿಧಿಸುವ ಮೊಳಕಾಲ್ಮೂರು ವಿಧಾನಸಭೆ ಕ್ಷೇತ್ರ ಚಿತ್ರದುರ್ಗ ಜಿಲ್ಲೆಗೆ ಸೇರಿದ್ದರಿಂದ ಬಳ್ಳಾರಿ ಜಿಲ್ಲೆ ಸಚಿವ ಸ್ಥಾನದಿಂದ ವಂಚಿತಗೊಂಡಿದೆ.

ಯಡಿಯೂರಪ್ಪ ಪ್ರತಿನಿಧಿಸುವ ಶಿವಮೊಗ್ಗ ಜಿಲ್ಲೆಗೆ ಕ್ಯಾಬಿನೆಟ್ನಲ್ಲಿ ಎರಡು ಪ್ರಾತಿನಿಧ್ಯ ಸಿಕ್ಕಿದೆ. ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಈ ಜಿಲ್ಲೆಯ ಮತ್ತೊಬ್ಬ ಮಂತ್ರಿಯಾಗಿದ್ದಾರೆ. ಆಪರೇಷನ್ ಕಮಲದಿಂದಾಗಿ ವಲಸೆ ಬಂದ ಮುಖಂಡರಿಗೆ ಸಚಿವ ಸ್ಥಾನ ನೀಡುವ ಭರವಸೆಯಿಂದಾಗಿ ಎಲ್ಲಾ ಜಿಲ್ಲೆಗಳಿಗೆ ಸಚಿವ ಸ್ಥಾನದ ಪ್ರಾತಿನಿಧ್ಯ ನೀಡಲಾಗಿಲ್ಲ ಎನ್ನುವ ಸಮರ್ಥನೆಯನ್ನು ಪಕ್ಷದ ಮುಖಂಡರು ನೀಡುತ್ತಾರಾದರೂ ಬೆಂಗಳೂರು ನಗರಕ್ಕೆ 8, ಬೆಳಗಾವಿ ಜಿಲ್ಲೆಗೆ 5 ಹಾವೇರಿ ಜಿಲ್ಲೆಗೆ 3 ಸಚಿವ ಸ್ಥಾನದ ಪ್ರಾತಿನಿಧ್ಯ ನೀಡಿದ್ದಕ್ಕೆ ಸಮರ್ಥನೀಯ ಕಾರಣಗಳನ್ನು ಕೊಡಲಾಗುತ್ತಿಲ್ಲ.

Facebook Comments