ಬಿಡಿಎ ಅಧಿಕಾರಿಗಳಿಗೆ ಸಿಎಂ ಬಿಎಸ್‍ವೈ ತರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.18- ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ(ಬಿಡಿಎ)ದಲ್ಲಿ ನಡೆದಿರುವ ಹಗರಣಗಳ ಕುರಿತಂತೆ ತಕ್ಷಣವೇ ವಿಶೇಷ ತನಿಖಾ ದಳ(ಎಸ್‍ಐಟಿ) ತನಿಖೆ ನಡೆಸಿ ವರದಿ ನೀಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಬಿಡಿಎ ಕಚೇರಿಯಲ್ಲಿಂದು ಅಧಿಕಾರಿಗಳ ಜೊತೆ ಪ್ರಗತಿಪರಿಶೀಲನಾ ಸಭೆ ನಡೆಸಿದ ಅವರು, ಇಲ್ಲಿ ಸಾಕಷ್ಟು ಅಕ್ರಮಗಳು ನಡೆದಿರುವ ಬಗ್ಗೆ ದೂರುಗಳು ಬಂದಿವೆ. ಇದನ್ನು ಗಂಭೀರವಾಗಿ ಸರ್ಕಾರ ಪರಿಗಣಿಸಿಸಲಿದೆ. ಎಸ್‍ಐಟಿ ಮೂಲಕ ತನಿಖೆ ನಡೆಸಲು ನಮ್ಮ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಆದಷ್ಟು ಶೀಘ್ರ ವರದಿ ನೀಡಬೇಕೆಂದು ಆದೇಶಿಸಲಾಗಿದೆ. ವರದಿ ಬಂದ ನಂತರ ಹಗರಣದಲ್ಲಿ ಯಾರ್ಯಾರು ಶಾಮೀಲಾಗಿದ್ದಾರೋ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಬಿಡಿಎನಲ್ಲಿ ಇತ್ತೀಚೆಗೆ ಮಧ್ಯವರ್ತಿಗಳ ಹಾವಳಿ ವಿಪರೀತವಾಗಿದೆ. ಕಚೇರಿ ಸುತ್ತಮುತ್ತ ಇವರೇ ಠಿಕ್ಕಾಣಿ ಹೂಡಿಕೊಂಡು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಇಂಥವರನ್ನು ಇಟ್ಟುಕೊಳ್ಳಬಾರದೆಂದು ಸೂಚನೆ ಕೊಟ್ಟರು.

ಬಿಡಿಎ ಇನ್ನು ಏಜೆಂಟರ್‍ನಿಂದ ಮುಕ್ತವಾಗಬೇಕು. ಇನ್ನು ಮುಂದೆ ಕಚೇರಿಯೊಳಗೆ ಬರಲೇಬಾರದು. ಸಾರ್ವಜನಿಕರಿಗೆ ಅಧಿಕಾರಿಗಳು ನೇರವಾಗಿ ಕೆಲಸ ಮಾಡಬೇಕು. ಏಜೆಂಟರ ಹಾವಳಿ ಮೊದಲು ಕೊನೆಯಾಗಬೇಕೆಂದು ಸೂಚಿಸಿದರು. ಬಿಡಿಎನಲ್ಲಿ ಅಮೂಲಾಗ್ರ ಬದಲಾವಣೆಯಾಗಬೇಕು. ಇದಕ್ಕಾಗಿ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕು. ಪ್ರತಿ ಎರಡು ತಿಂಗಳಿಗೊಮ್ಮೆ ಅಧಿಕಾರಿಗಳ ಜೊತೆ ಪರಿಶೀಲನಾ ಸಭೆ ನಡೆಸುತ್ತೇನೆ. ಸಾರ್ವಜನಿಕರ ಸಮಯ ವ್ಯರ್ಥ ಮಾಡದೆ ನಿಗದಿತ ಸಮಯದೊಳಗೆ ಕೆಲಸ ಮಾಡಿಕೊಡಬೇಕೆಂದು ಸಿಎಂ ಸೂಚನೆ ಕೊಟ್ಟರು.

ಇಸ್ರೇಲ್ ಮೂಲದ ಮಾಜ್, ಎಂಬ ಸಂಸ್ಥೆಯು ಪೆರಿಪಲ್ ರಿಂಗ್ ರಸ್ತೆ ನಿರ್ಮಾಣ ಮಾಡಲು ಮುಂದೆ ಬಂದಿದೆ. ಇದು ಸುಮಾರು 21 ಸಾವಿರ ಕೋಟಿಯ ಯೋಜನೆಯಾಗಿದ್ದು, ಇದು ಒಂದೆರಡು ತಿಂಗಳೊಳಗೆ ಅಂತಿಮವಾಗಲಿದೆ . ಖಾಸಗಿ ಸಹಭಾಗಿತ್ವದಲ್ಲಿ ಕಾಮಗಾರಿ ನಡೆಯಲಿದೆ. ಇದಕ್ಕೆ ರಾಜ್ಯ ಸರ್ಕಾರವು ಅನುಮತಿಯನ್ನು ನೀಡಿದೆ ಎಂದರು. ಬಿಡಿಎನಿಂದ ನಿರ್ಮಾಣವಾಗುತ್ತಿರುವ ಕಾಮಗಾರಿಗಳು ಕಾಲಮಿತಿಯೊಳಗೆ ಪೂರ್ಣಗೊಳ್ಳಬೇಕು. ಸುಖಾಸುಮ್ಮನೆ ವಿಳಂಬ ಮಾಡಿದರೆ ಸಹಿಸುವುದಿಲ್ಲ ಎಂದು ಹೇಳಿದರು.

ಬೆಂಗಳೂರಿನಲ್ಲಿ ಬಡಾವಣೆ ನಿರ್ಮಾಣ ಮಾಡಲು ರೈತರು ನೀಡಿರುವ ಜಮೀನುಗಳಿಗೆ ತಕ್ಷಣವೇ ಭೂ ಪರಿಹಾರ ನೀಡಬೇಕು. ಅವರು ಕಚೇರಿಯಿಂದ ಕಚೇರಿಗೆ ಅಲೆದು ಸಾಕಾಗಿದ್ದಾರೆ. ಇನ್ನು ಯಾವುದೇ ವಿಳಂಬವಾಗುವುದಿಲ್ಲ ಎಂದು ಹೇಳಿದ್ದಾರೆ. ಬಿಡಿಎಯಲ್ಲಿ ಪ್ರಸ್ತುತ 24 ಮಂದಿ ಎಂಜಿನಿಯರ್‍ಗಳು ಹೆಚ್ಚುವರಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಇಲ್ಲಿ ಮಾಡಲು ಕೆಲಸವೇ ಇಲ್ಲ.ಹೀಗಾಗಿ ಇವರನ್ನು ತಕ್ಷಣವೇ ಮಾತೃ ಇಲಾಖೆಗೆ ಕಳುಹಿಸಲು ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ ಎಂದರು.

ಇನ್ನು ಬಿಡಿಎನಲ್ಲಿ 194 ಮಂದಿ ವಕೀಲರು ಕೆಲಸ ನಿರ್ವಹಿಸುತ್ತಿದ್ದಾರೆ. ಇಲ್ಲಿ ಯಾರು ನಮ್ಮ ಪರವಾಗಿ ನ್ಯಾಯಾಲಯಗಳಲ್ಲಿ ಕೆಲಸ ಮಾಡುತ್ತಾರೋ ಅಂಥವರನ್ನು ಮಾತ್ರ ಇಟ್ಟುಕೊಳ್ಳಬೇಕು. ಅನಗತ್ಯವಾಗಿರುವ ವಕೀಲರನ್ನು ಕೈಬಿಡಬೇಕೆಂದು ಸೂಚಿಸಲಾಗಿದೆ ಎಂದು ಸಿಎಂ ತಿಳಿಸಿದರು. ಸಭೆಯಲ್ಲಿ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಬಿಬಿಎಂಪಿ ಆಯುಕ್ತರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments