ಎಸ್ಸಿ-ಎಸ್ಟಿ ನೌಕರರ ಬಡ್ತಿ ಅನ್ಯಾಯ ಸರಿಪಡಿಸುವಂತೆ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.23-ಕರ್ನಾಟಕದಲ್ಲಿ ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮದಡಿ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದೆ.

ರಾಜ್ಯದ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಲ್ಲಿ ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ 2017ರಎಲ್ಲ ಪ್ರಾಧಿಕಾರ ಕೇಡರ್‍ಗಳಲ್ಲಿ ಅಂತಿಮ ಜೇಷ್ಠತಾ ಪಟ್ಟಿ ತಯಾರಿಸುವ ಪ್ರಕ್ರಿಯೆಯನ್ನು 2019ರ ಜೂನ್ 15ರೊಳಗೆ ಪೂರ್ಣಗೊಳಿಸುವಂತೆ ಆದೇಶ ನೀಡಿದ್ದರು. ಅಂತಿಮ ಆದೇಶದ ಗಡುವು ಮುಗಿದು ಮೂರು ತಿಂಗಳು ಕಳೆದರೂ ಇನ್ನು ಬಹುತೇಕ ಸರ್ಕಾರಿ ಇಲಾಖೆಗಳಲ್ಲಿ ಈ ಸೂಚನೆಯನ್ನು ಪಾಲಿಸಿ ಮೀಸಲಾತಿ ಆಧಾರದಲ್ಲಿ ಜೇಷ್ಠತಾ ಪಟ್ಟಿ ಪ್ರಕಟಿಸಿ ಮುಂಬಡ್ತಿಗೆ ಚಾಲನೆ ನೀಡಿಲ್ಲ ಎಂದು ನೌಕರರ ಸಂಘದ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ ಆರೋಪಿಸಿದ್ದಾರೆ.

ಸರ್ಕಾರದ ಉಲ್ಲೇಖ ಮತ್ತು ಆದೇಶವನ್ನು ಪಾಲಿಸುವ ಬದಲಿಗೆ ಕೆಲವು ಇಲಾಖೆಗಳ ಅಧಿಕಾರಿಗಳು ಆದೇಶದ ಪ್ರತಿಗಳನ್ನು ಟ್ಯಾಗ್ ಮಾಡುವ ಪ್ರವೃತ್ತಿಯನ್ನು ಮುಂದುವರೆಸುತ್ತಿದ್ದು, ಇದರಿಂದ ಬಡ್ತಿ ಮೀಸಲಾತಿ ಕಾಯ್ದೆಯಡಿ ಮುಂಬಡ್ತಿ ಪಡೆಯಬೇಕಿರುವವರಿಗೆ ಅನ್ಯಾಯವಾಗುತ್ತಿದೆ.  ಇದನ್ನು ತಪ್ಪಿಸಲು ಹಾಗೂ ನೌಕರರಿಗೆ ನ್ಯಾಯ ಒದಗಿಸಲು ಎಸ್ಸಿ, ಎಸ್ಟಿ ಅಧಿಕಾರಿಗಳು ಮತ್ತು ನೌಕರರಿಗೆ ನಿರ್ದಿಷ್ಟ ಗಡುವಿನೊಳಗೆ ಎಲ್ಲ ಇಲಾಖೆಗಳು ಮತ್ತು ಸರ್ಕಾರದ ಅಧೀನ ಮಂಡಳಿಗಳು ಮತ್ತು ಪ್ರಾಧಿಕಾರಗಳು, ಸ್ವಾಯತ್ತ ಸಂಸ್ಥೆಗಳು ಆಯಾ ಕೇಡರ್‍ನ ಅಂತಿಮ ಜೇಷ್ಠತಾ ಪಟ್ಟಿಗಳನ್ನು ಹೊರಡಿಸಿ ಮುಂಬಡ್ತಿ ನೀಡಲು ಸರ್ಕಾರದಿಂದ ಸ್ಪಷ್ಟ ಆದೇಶ ನೀಡಲು ಒತ್ತಾಯಿಸಿದ್ದಾರೆ.

– ಈಗಾಗಲೇ ಒಂದು ಗಡುವಿನ ದಿನಾಂಕ ಮುಗಿದಿದ್ದು, ಮತ್ತೊಮ್ಮೆ ಅಂತಿಮ ದಿನಾಂಕ ನಿಗದಿಪಡಿಸಿ ಎಲ್ಲ ಇಲಾಖೆಗಳಿಗೆ ಮುಂಬಡ್ತಿ ಪ್ರಕ್ರಿಯೆ ನಡೆಸಲು ಆದೇಶಿಸಬೇಕು.
– ಆಯಾ ಕೇಡರ್‍ನಲ್ಲಿ ಮುಂಬಡ್ತಿ ನೀಡುವಾಗ 1979ರ ರೋಷ್ಟರ್ ನಿಯಮ ಅನುಸರಿಸಲು ಅವಕಾಶ ಕಲ್ಪಿಸಬೇಕು.
– ಆಯಾ ಕೇಡರ್ ಮುಂಬಡ್ತಿ ನೀಡುವಾಗ ಎಸ್.ಸಿ., ಎಸ್.ಟಿ ನೌಕರರು ಜೇಷ್ಟತೆಗೆ ಅನುಸಾರವಾಗಿ un-reserved   ಬಿಂದುವಿಗೆ ಎದುರಾಗಿ ಮುಂಬಡ್ತಿ ಹೊಂದಲು ಅರ್ಹತೆ ಇದ್ದಲ್ಲಿ ಈ ಬಿಂದುವನ್ನು ಪರಿಗಣಿಸಿ ಮುಂಬಡ್ತಿ ನೀಡಬೇಕು.

– ಆಯಾ ಕೇಡರ್‍ un-reserved ಬಿಂದುವಿಗೆ ಎದುರಾಗಿ ಮುಂಬಡ್ತಿ ಹೊಂದಿದ ಎಸ್.ಸಿ/ ಎಸ್.ಟಿ ನೌಕರರನ್ನು ಶೇ. 15 ಮತ್ತು ಶೇ. 3ರ ಪ್ರಾತಿನಿಧ್ಯಕ್ಕೆ ಲೆಕ್ಕ ಹಾಕಬಾರದು. ಅವರನ್ನು ಸಾಮಾನ್ಯ ಬಿಂದುವಿಗೆ ಪರಿಗಣಿಸಬೇಕು. ಯಾವ ಎಸ್.ಸಿ/ಎಸ್.ಟಿ ನೌಕರರು 1, 2, 7, 14, 21, 27ರ ರೋಷ್ಟರ್ ಬಿಂದುಗಳ ಪ್ರಕಾರ ಮುಂಬಡ್ತಿ ಪಡೆದಿದ್ದಾರೋ ಅಂತವರನ್ನು ಮಾತ್ರ ಶೇ. 15 ಮತ್ತು ಶೇ. 3ರ ಪ್ರಾತಿನಿಧ್ಯಕ್ಕೆ ಲೆಕ್ಕ ಹಾಕಬೇಕು.

-1979ರ ರೋಷ್ಟರ್ ನಿಯಮದ un-reserved  ಬಿಂದುವಿಗೆ ಎದುರಾಗಿ ಮುಂಬಡ್ತಿ ಪಡೆದಿದ್ದ ಕೆಲವು ಎಸ್.ಸಿ/ಎಸ್.ಟಿ ಅಧಿಕಾರಿ ನೌಕರರನ್ನು ಸಹ ಪವಿತ್ರ ಪ್ರಕರಣದಲ್ಲಿ ಹಿಂಬಡ್ತಿಯಗೊಳಿಸಲಾಗಿತ್ತು. ಅಂತಹ ನೌಕರರಿಗೆ ಹಿಂಬಡ್ತಿಗೊಳಿಸಿದ ದಿನಾಂಕದ ಪೂರ್ವದಲ್ಲಿ ಮುಂಬಡ್ತಿ ಹೊಂದಲು ಇರುವ ಅರ್ಹತೆಯನ್ನು ಪರಿಗಣಿಸಿ ಮುಂದಿನ ಹುದ್ದೆಗಳಿಗೆ ಅರ್ಹತಾ ದಿನಾಂಕದಿಂದ ಅನ್ವಯವಾಗುವಂತೆ ಕರ್ನಾಟಕ ರಾಜ್ಯ ಸಿವಿಲ್ ಸೇವಾ (ಮುಂಬಡ್ತಿ, ವೇತನ ಮತ್ತು ಪಿಂಚಣಿಗಳ ಕ್ರಮಬದ್ಧತೆ) ಅಧಿನಿಯಮ, 1973ರ ಕಲಂ 4, 5, 6 ಮತ್ತು 7ನ್ನು ಕಲಂ 9 ರೊಡನೆ ಗಮನಿಸಿ ಮುಂಬಡ್ತಿ ನೀಡಬೇಕು.

– ಜೇಷ್ಠತೆ ನಿಗದಿಪಡಿಸಲು ಉದಾಸೀನ ಮಾಡಿರುವ ಅಧಿಕಾರಿಗಳು ಮತ್ತು ನೌಕರರುಗಳ ವಿರುದ್ಧ ಸಿಸಿಎ ನಿಯಮಾವಳಿಗಳ ಪ್ರಕಾರ ಮತ್ತು ನಡತೆ ನಿಯಮಗಳ ಪ್ರಕಾರ ಕರ್ತವ್ಯ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಸೇವೆಯಿಂದ ಅಮಾನತ್ತು ಮಾಡಬೇಕು.

– ಸೂಪರ್‍ನ್ಯೂಮರಿ ಹುದ್ದೆಯಲ್ಲಿ ಸೇವೆಗೆ ಪುನರ್ ಸ್ಪಾಪನೆಗೊಂಡಿರುವ ಎಸ್.ಸಿ/ಎಸ್.ಟಿ ನೌಕರರನ್ನು ಈ ಹಿಂದಿನ ಬಡ್ತಿ ಹೊಂದಿದ ಹುದ್ದೆ ಸ್ಥಾನದಲ್ಲೇ ಪರಿಗಣಿಸಬೇಕು. ಎಸ್.ಸಿ/ಎಸ್.ಟಿ ನೌಕರರನ್ನು ಹಿಂಬಡ್ತಿಗೊಳಿಸಿದ ಸ್ಥಾನದಲ್ಲಿ ಮುಂಬಡ್ತಿ ಪಡೆದಿರುವ ಸಾಮಾನ್ಯ ವರ್ಗದ ಅಧಿಕಾರಿ ನೌಕರರುಗಳನ್ನು ಈ ಕೂಡಲೇ ಹಿಂಬಡ್ತಿಗೊಳಿಸಬೇಕು ಎಂದು ಸಂಘದ ಪ್ರಧಾನಕಾರ್ಯದರ್ಶಿ ಎ.ರಾಜಶೇಖರ್ ಆಗ್ರಹಿಸಿದ್ದಾರೆ.

ಸರ್ಕಾರ ಈ ಕೂಡಲೇ ಇತ್ತ ಗಮನಹರಿಸಿ ಪರಿಶಿಷ್ಟ ಪಂಗಡಗಳ ನೌಕರರಿಗೆ ಸಿಗಬೇಕಾದ ಮುಂಬಡ್ತಿ ನೀಡಲು ಎಲ್ಲ ರೀತಿ ಕ್ರಮ ವಹಿಸಬೇಕು ಎಂದು ಈಗಾಗಲೇ ಇದೇ 19ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇವೆ. ಹಾಗೆಯೇ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಅವರಿಗೆ ಮನವಿ ಸಲ್ಲಿಸಿದ್ದು, ಈ ಸಂಬಂಧ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದು ಹೇಳಿದರು.

Facebook Comments