3ನೇ ಬಾರಿ ಖಾತೆ ಮರುಹಂಚಿಕೆ ಮಾಡಿ ಯಡವಟ್ಟು ಮಾಡಿಕೊಂಡ್ರಾ ಸಿಎಂ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.27-ಮೂರನೇ ಬಾರಿ ಖಾತೆ ಮರುಹಂಚಿಕೆ ಮಾಡುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಪಾಯವನ್ನು ಮೈಮೇಲೆ ಎಳೆದುಕೊಂಡಿದ್ದಾರಾ? ಎಂಬ ಚರ್ಚೆ ಇದೀಗ ಬಿಜೆಪಿಯಲ್ಲಿಯೇ ಶುರುವಾಗಿದೆ. ಎರಡು ಪ್ರಮುಖ ಖಾತೆಗಳನ್ನು ಒಬ್ಬ ಸಚಿವರಿಗೆ ಕೊಡುವ ಮೂಲಕ ಯಡಿಯೂರಪ್ಪ ಅವರು ಪಕ್ಷದಲ್ಲಿನ ಬಹುತೇಕ ಸಚಿವರನ್ನು ಎದುರು ಹಾಕಿಕೊಂಡಂತಾಗಿದೆ.

ಖಾತೆ ಹಂಚಿಕೆಯ ಗೊಂದಲದ ಬಗ್ಗೆ ಬಿಜೆಪಿ ಹೈಕಮಾಂಡಿಗೂ ದೂರು ರವಾನೆಯಾಗಿದೆ. ಬಿಎಸ್‍ವೈ ಕಾರ್ಯವೈಖರಿಗೆ ನೂತನ ಸಚಿವರು ಅದರಲ್ಲಿಯೂ ಕಾಂಗ್ರೆಸ್-ಜೆಡಿಎಸ್‍ನಿಂದ ಬಂದಿದ್ದ ಸದಸ್ಯರ ಒತ್ತಡಕ್ಕೆ ಮಣಿದು ಯಡಿಯೂರಪ್ಪ ದಿನಕ್ಕೊಮ್ಮೆ ಅವರ ಖಾತೆ ಬದಲಿಸುತ್ತಿರುವ ಬಗ್ಗೆ ದೆಹಲಿ ನಾಯಕರ ಗಮನಕ್ಕೆ ತಂದಿದ್ದಾರೆ. ಈ ಮಧ್ಯೆ ಖಾತೆ ವಿಚಾರದಲ್ಲಿ ಯಾರ ಒತ್ತಡಕ್ಕೂ ಮಣಿಯದಂತೆ ಹೈಕಮಾಂಡ್ ಸಹ ಯಡಿಯೂರಪ್ಪನವರಿಗೆ ಸೂಚ್ಯವಾಗಿ ತಿಳಿಸಿದೆ ಎಂಬ ಮಾತುಗಳೂ ಕೇಳಿಬಂದಿವೆ.

ಅದರಿಂದಾಗಿ ಬಿಜೆಪಿಯಲ್ಲಿ ಮೂಲ-ವಲಸೆ ಕಂದಕ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿದ್ದು, ಅದು ಯಡಿಯೂರಪ್ಪ ಅವರ ಸರ್ಕಾರದ ಮೇಲೆ ಪರಿಣಾಮ ಬೀರುವ ಎಲ್ಲ ಸಾಧ್ಯತೆಗಳು ಕಂಡು ಬಂದಿವೆ. ಕಷ್ಟಕಾಲದಲ್ಲಿ ಸಿಎಂಗೆ ಬೆಂಗಾವಲಿನಂತಿದ್ದ ಸಚಿವರೇ ಇದೀಗ ರಾಜೀನಾಮೆ ಮಾತುಗಳನ್ನಾಡುತ್ತಿರುವುದು ಬಿಜೆಪಿ ಸರ್ಕಾರದ ಭವಿಷ್ಯದ ಕುರಿತು ಪ್ರಶ್ನೆ ಹುಟ್ಟುಹಾಕಿದೆ.

ಮೂರನೇ ಬಾರಿ ಖಾತೆ ಮರು ಹಂಚಿಕೆ ಮಾಡಿರುವ ಸಿಎಂ ಯಡಿಯೂರಪ್ಪ ಅವರು, ಮೂವರು ಸಚಿವರ ಖಾತೆಗಳನ್ನು ಬದಲಾವಣೆ ಮಾಡಿದ್ದಾರೆ. ಖಾತೆ ಬದಲಾವಣೆಯಿಂದ ಮೂಲ-ವಲಸೆ ಬಿಜೆಪಿಗರ ಮಧ್ಯದ ಕಂದಕ ಮತ್ತಷ್ಟು ಹೆಚ್ಚಾಗಲಿದೆ ಎಂಬ ಮಾತುಗಳು ಬಿಜೆಪಿ ವಲಯದಿಂದಲೇ ಕೇಳಿ ಬರುತ್ತಿವೆ.

ಅದಕ್ಕೆ ಪುಷ್ಠಿ ಕೊಡುವಂತೆ ಮೂಲ ಬಿಜೆಪಿ ಸಚಿವರ ಖಾತೆಗಳನ್ನು ವಲಸೆ ಬಿಜೆಪಿ ಸಚಿವರಿಗೆ ಸಿಎಂ ಹಂಚಿಕೆ ಮಾಡಿದ್ದಾರೆ. ಆ ಮೂಲಕ ಬಿಜೆಪಿ ಸರ್ಕಾರ ರಚನೆ ಸಂದರ್ಭದಲ್ಲಿ ತಮ್ಮ ರಾಜಕೀಯ ಭವಿಷ್ಯವನ್ನು ಪಣಕ್ಕೊಡ್ಡಿದವರ ಋಣವನ್ನು ಯಡಿಯೂರಪ್ಪ ತೀರಿಸಿದ್ದಾರೆ. ಆದರೆ ಯಡಿಯೂರಪ್ಪ ಅವರ ಋಣ ಸಂದಾಯ ಮೂಲ ಬಿಜೆಪಿಯ ಸಚಿವರು, ಶಾಸಕರ ಆಕ್ರೋಶಕ್ಕೆ ಗುರಿಯಾಗಿದೆ. ಜೊತೆಗೆ ಬಿಜೆಪಿ ಭವಿಷ್ಯದ ದೃಷ್ಟಿಯಿಂದ ದುಬಾರಿ ನಿರ್ಧಾರವನ್ನು ಯಡಿಯೂರಪ್ಪ ಅವರು ಕೈಗೊಂಡಿದ್ದಾರೆ ಎಂಬ ಚರ್ಚೆಗಳು ಶುರುವಾಗಿವೆ.

ಒಂದು ಬಾರಿ ಸರ್ಕಾರ ರಚನೆ ಮಾಡಲು ಸಹಾಯ ಮಾಡಿದವರಿಗೆ ಉತ್ತಮ ಖಾತೆಗಳನ್ನು ಕೊಡುವ ಮೂಲಕ ಕಳೆದ ನಾಲ್ಕೈದು ದಶಕಗಳಿಂದ ಪಕ್ಷ ಸಂಘಟನೆ ಮಾಡುತ್ತ ಬಂದಿರುವವರನ್ನು ಸಿಎಂ ಯಡಿಯೂರಪ್ಪ ಅವರು ನಿರ್ಲಕ್ಷ ಮಾಡಿದ್ದಾರೆ ಎಂಬ ಮಾತುಗಳು ಬಿಜೆಪಿಯಲ್ಲಿ ಈಗ ಜೋರಾಗಿ ಕೇಳಿ ಬರುತ್ತಿವೆ.

ಸುಧಾಕರ್ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದಿದ್ದೆ ಒಂದು ಕುತೂಹಲದ ಸಂಗತಿ. ಇದೀಗ ಬಯಸಿದ ಖಾತೆಗಳನ್ನು ಪಡೆಯುವ ಮೂಲಕ ಬಿಜೆಪಿ ನಾಯಕರಷ್ಟೆ ಅಲ್ಲ, ಕಾರ್ಯಕರ್ತರಲ್ಲಿಯೂ ಡಾ. ಸುಧಾಕರ್ ಕುತೂಹಲ ಮೂಡಿಸಿದ್ದಾರೆ. ಕೆಡರ್ ಬೇಸ್ ಪಾರ್ಟಿಯಲ್ಲಿ ಡಾ. ಸುಧಾಕರ್ ಅವರು ಇಷ್ಟೊಂದು ಪ್ರಭಾವಿಯಾಗಿದ್ದು ಹೇಗೆ ಎಂಬ ಪ್ರಶ್ನೆ ಕಾರ್ಯಕರ್ತರನ್ನು ಕಾಡುತ್ತಿದೆ.

ಸಿಎಂ ಯಡಿಯೂರಪ್ಪ ಅವರು ಖಾತೆ ಹಂಚಿಕೆ ಮಾಡಿದ್ದರೂ ಕೂಡ ಹೈಕಮಾಂಡ್ ಮೂಲಕ ತಮ್ಮ ಖಾತೆಗಳನ್ನು ಮರಳಿ ಪಡೆಯಲು ಸಚಿವ ಡಾ. ಸುಧಾಕರ್ ಸಫಲರಾಗಿದ್ದಾರೆಂದು ಬಿಜೆಪಿಯ ನಾಯಕರೊಬ್ಬರು ತಿಳಿಸಿದ್ದಾರೆ. ಡಾ. ಸುಧಾಕರ್ ಅವರು ಯಾವುದೇ ಪಕ್ಷದಲ್ಲಿದ್ದರೂ ತಮ್ಮ ಪ್ರಭಾವ ಹೊಂದಿರುತ್ತಾರೆ. ಹೀಗಾಗಿ ಈಗ ಯಡಿಯೂರಪ್ಪ ಅವರಿಗೆ ಮನಸ್ಸಿಲ್ಲದಿದ್ದರೂ ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ಹೆಚ್ಚುವರಿಯಾಗಿ ಅವರಿಗೆ ಕೊಡಲಾಗಿದೆ.

ಇದೀಗ ಮತ್ತೆ ಖಾತೆ ವಿಚಾರವಾಗಿ ಅಸಮಾಧಾನ ಭುಗಿಲೆದ್ದರೂ ಹೈಕಮಾಂಡ್ ಕಡೆಗೆ ಯಡಿಯೂರಪ್ಪ ಅವರು ಕೈತೋರಿಸಬಹುದು. ಆದರೆ ಅಸಮಾಧಾನಕ್ಕೋಳಗಾದ ಸಚಿವರು ಹಾಗೂ ಶಾಸಕರನ್ನು ಸಮಾಧಾನ ಮಾಡುವುದು ಅಷ್ಟೊಂದು ಸುಲಭವಲ್ಲ ಎಂಬುದು ಸ್ವತಃ ಸಿಎಂ ಅವರಿಗೂ ಗೊತ್ತಿದೆ.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಂಪುಟ ಪುನಾರಚನೆಯಲ್ಲಿ ತಲೆಕೆಡಿಸಿಕೊಂಡು ಐದು ದಿನಗಳಲ್ಲಿ ನಾಲ್ಕು ಬಾರಿ ಖಾತೆಗಳನ್ನು ಬದಲಾವಣೆ ಮಾಡಿದರೆ ಬಿಜೆಪಿಯ ಒಂದು ವರ್ಗ ಒಳಗೊಳಗೆ ಖುಷಿಪಡುತ್ತಿದೆ. ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾದಾಗಿನಿಂದಲೂ ಅವರ ವಿರುದ್ಧವಾಗಿರುವ ಈ ಗುಂಪು ಹಾಗೂ ಅದರ ಸದಸ್ಯರು, ಪ್ರಬಲ ವ್ಯಕ್ತಿಯ ಗೊಂದಲಕಾರಿ ಮಾರ್ಗದಿಂದ ಸಂತೋಷಗೊಂಡಿದ್ದಾರೆ ಎಂದು ಯಡಿಯೂರಪ್ಪ ಆಪ್ತ ಮೂಲಗಳು ಹೇಳಿವೆ.

ಅತೃಪ್ತ ಶಾಸಕರ ಜೊತೆಗೆ ಸಂಪುಟ ಪುನಾರಚನೆ ವೇಳೆ ಸ್ಥಾನ ಸಿಗದೆ ಅಸಂತೋಷಗೊಂಡವರ ಕೋಪ ಮತ್ತಷ್ಟು ಹೆಚ್ಚಾಗಬಹುದೆಂದು ಮುಖ್ಯಮಂತ್ರಿಯ ಕಡೆಯವರು ಆತಂಕ ವ್ಯಕ್ತಪಡಿಸಿದ್ದಾರೆ. 2019ರಲ್ಲಿ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅಧಿಕಾರ ವಹಿಸಿಕೊಂಡಾಗ, ಕಾಂಗ್ರೆಸ್ ಹಾಗೂ ಜೆಡಿಎಸ್ ತೊರೆದು ಬಂದ 17 ಮಂದಿ ಬಂಡಾಯ ಶಾಸಕರಿಗೆ ಸಚಿವ ಸ್ಥಾನದ ಜೊತೆಗೆ ಒಂದಿಷ್ಟು ಆಮಿಷವೊಡ್ಡಿ ಮೈತ್ರಿ ಮಾಡಿಕೊಳ್ಳಲಾಗಿತ್ತು.

ಇದೀಗ ಎಲ್ಲರಿಗೂ ಸಚಿವ ಸ್ಥಾನ ನೀಡಿಲ್ಲ. ಅದ್ದರಿಂದ ಯಡಿಯೂರಪ್ಪ ಮೇಲೆ ತೀವ್ರ ಒತ್ತಡ ಹಾಕಲಾಗುತ್ತಿದೆ. ಪ್ರತಾಪ್ ಗೌಡ ಪಾಟೀಲ್ ಹೊರತುಪಡಿಸಿದಂತೆ ಉಳಿದ ಎಲ್ಲಾ ಬಂಡಾಯಗಾರರು ಶಾಸಕರಾಗಿದ್ದಾರೆ. ಪ್ರತಾಪ್ ಗೌಡ ಪಾಟೀಲ್ ಕೂಡಾ ಶೀಘ್ರದಲ್ಲಿಯೇ ಚುನಾವಣೆ ಎದುರಿಸಲಿದ್ದಾರೆ.

ಯಡಿಯೂರಪ್ಪ ವಿರೋಧಿ ಗುಂಪು ಸಂಪುಟದಲ್ಲಿ ಸ್ಥಾನ ಪಡೆಯದಿರುವ ಬಂಡಾಯ ಶಾಸಕರನ್ನು ಸಂಪರ್ಕಿಸಿದೆ. ಈ ಅಸಂತುಷ್ಟ ಮುಖಂಡರು ಸರ್ಕಾರವನ್ನು ಅಸ್ಥಿರಗೊಳಿಸದಂತೆ ನಿಗಾ ವಹಿಸಲಾಗಿದೆ ಎಂದು ಯಡಿಯೂರಪ್ಪ ಬೆಂಬಲಿಗರು ಹೇಳಿದ್ದಾರೆ.

Facebook Comments