“ಕೋಮು ಗಲಭೆ, ಡ್ರಗ್ಸ್ ದಂಧೆ ಕಡಿವಾಣಕ್ಕೆ ಪೊಲೀಸರೇ ಸಜ್ಜಾಗಿ” : ಸಿಎಂ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.12- ಕೋಮು ಗಲಭೆ ಹತ್ತಿಕ್ಕುವುದು, ಮಾದಕ ವಸ್ತುಗಳಿಗೆ ಕಡಿವಾಣ, ಮಹಿಳೆಯರ ಸುರಕ್ಷತೆ ಸೇರಿದಂತೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರು ಸರ್ವಸನ್ನದ್ಧವಾಗಿರಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ರಾಜ್ಯದ ಯಾವುದೇ ಭಾಗದಲ್ಲೂ ಕೋಮು ಗಲಭೆ ಸಂಭವಿಸಬಾರದು. ದೇಶದಲ್ಲೇ ಕರ್ನಾಟಕ ಶಾಂತಿಗೆ ಹೆಸರಾಗಿದ್ದು, ಮುಂದಿನ ದಿನಗಳಲ್ಲೂ ಇದೇ ವ್ಯವಸ್ಥೆ ಮುಂದುವರೆಯಬೇಕೆಂದರು.

ಕೆಲವರು ಸರ್ಕಾರಕ್ಕೆ ಕೆಟ್ಟ ಹೆಸರು ತರುವ ದುರುದ್ದೇಶದಿಂದ ಕೋಮು ಗಲಭೆ ಸೃಷ್ಟಿಸಲು ಹವಣಿಸುತ್ತಾರೆ. ಅಂತಹ ಯಾವುದೇ ಶಕ್ತಿಗಳಿದ್ದರೂ ನಿರ್ಧಾಕ್ಷಿಣ್ಯವಾಗಿ ಹತ್ತಿಕ್ಕಿ. ಶಾಂತಿ, ಸುವ್ಯವಸ್ಥೆಯಲ್ಲಿ ಯಾರ ಮುಲಾಜಿಗೂ ಒಳಗಾಗಬಾರದು ಎಂದು ಸೂಚಿಸಿದರು. ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಪೊಲೀಸರು ಮತ್ತು ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಗಣಮಿಸಿದೆ.

ದುಷ್ಕøತ್ಯ ಎಸಗುವ ಆರೋಪಿಗಳನ್ನು 24ಗಂಟೆಯೊಳಗೆ ಪೊಲೀಸರು ಬಂಧಿಸುತ್ತಾರೆ. ಆದರೆ, ಸೈಬರ್ ಅಪರಾಧಗಳನ್ನು ಪತ್ತೆಹಚ್ಚುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದನ್ನು ತಡೆಗಟ್ಟುವ ಉದ್ದೇಶದಿಂದಲೇ ಬೆಂಗಳೂರು ಸೇರಿದಂತೆ ರಾಜ್ಯದ 8 ಕಡೆ ಸೈಬರ್ ಠಾಣೆಗಳನ್ನು ಪ್ರಾರಂಭಿಸುವುದಾಗಿ ಸಿಎಂ ಪ್ರಕಟಿಸಿದರು. ರಾಜ್ಯದಲ್ಲಿ ಮಹಿಳೆಯರು, ಮಕ್ಕಳು ಹಿರಿಯ ನಾಗರಿಕರು ಸೇರಿದಂತೆ ಎಲ್ಲರೂ ನೆಮ್ಮದಿಯಿಂದ ಇದ್ದಾರೆ ಎಂದರೆ ಅದಕ್ಕೆ ನಿಮ್ಮ ಪ್ರಾಮಾಣಿಕ ಕರ್ತವ್ಯಕಾರಣವಾಗಿದೆ. ನೀವು ಉತ್ತಮವಾಗಿ ಕೆಲಸ ಮಾಡುತ್ತಿರುವುದರಿಂದ ಕಾನೂನು ಸುವ್ಯವಸ್ಥೆಯೂ ಉತ್ತಮವಾಗಿದೆ ಎಂದು ಪ್ರಶಂಸಿಸಿದರು.

ರಾಜ್ಯ ಸರ್ಕಾರ ಎಲ್ಲಾ ರೀತಿಯ ಸಹಕಾರ ಕೊಡಲಿದೆ. ಯಾವುದೇ ಮುಲಾಜಿಗೂ ಒಳಗಾಗಬೇಡಿ. ನಿಮ್ಮ ಬೇಡಿಕೆಗಳನ್ನು ಈಡೇರಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಿಎಂ ಭರವಸೆ ನೀಡಿದರು.ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಮಹಿಳಾ ಮತ್ತು ಮಕ್ಕಳ ರಕ್ಷಣೆಯಲ್ಲಿ ಮುಂಚೂಣಿಯಲ್ಲಿದೆ. ಸೈಬರ್ ಅಪರಾಧ ತಡೆಯಲು ನಾವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದೇವೆ. ಎಂದರು.

ಸಾರ್ವಜನಿಕರ ಸುರಕ್ಷತೆಗೆ ನಮ್ಮ ಸರ್ಕಾರ ಹೆಚ್ಚಿನ ಆದ್ಯತೆ ಕೊಟ್ಟಿದೆ. ಉಗ್ರಗಾಮಿಗಳು ಹಾಗೂ ಸಮಾಜಘಾತುಕ ಶಕ್ತಿಗಳನ್ನು ಸದೆಬಡಿಯಲು ಭಯೋತ್ಪಾದನೆ ನಿಗ್ರಹ ದಳ ರಚನೆ ಮಾಡಲಾಗಿದೆ. ರಾಜ್ಯದಲ್ಲಿ ಎಮರ್ಜೆನ್ಸಿ ರೆಸ್ಪಾನ್ಸ್ ಸಿಸ್ಟಮ್ ಜಾರಿ ಮಾಡಲಾಗಿದೆ. ಬಹುದಿನಗಳ ಬೇಡಿಕೆಯಂತೆ ವಿಧಿ ವಿಜ್ಞಾನದ ನೂತನ ಕಟ್ಟಡವನ್ನು ನಿರ್ಮಿಸಿದ್ದೇವೆ ಎಂದು ಹೇಳಿದರು.

ಮುಂಬರುವ ದಿನಗಳಲ್ಲಿ ಪೊಲೀಸ್ ಇಲಾಖೆಗೆ ಅವರ ಅಗತ್ಯತೆಗಳನ್ನು ಪೂರೈಸಲು ನಾವು ಸಿದ್ದರಿದ್ದೇವೆ. ಇಂದು ನಡೆದ ಪೊಲೀಸ್ ಅಧಿಕಾರಿಗಳ ಜತೆಗಿನ ಸಭೆಯಲ್ಲಿ ಈ ಬಗ್ಗೆ ಸವಿಸ್ತಾರವಾಗಿ ಚರ್ಚೆ ಮಾಡಿದ್ದೇವೆ. ಪೊಲೀಸ್ ಠಾಣೆಗೆ ಬರುವ ಸಾರ್ವಜನಿಕರನ್ನು ಗೌರವಯುತವಾಗಿ ನಡೆಸಿಕೊಳ್ಳಿ ಎಂದು ಕಿವಿಮಾತು ಹೇಳಿದರು. ವಯೋಮಿತಿ ಹೆಚ್ಚಳ: ಬಹುದಿನಗಳ ಬೇಡಿಕೆಯಂತೆ ಸಬ್‍ಇನ್ಸ್‍ಪೆಕ್ಟರ್ (ಸಾಮಾನ್ಯ) ವಯೋಮಿತಿ ಹೆಚ್ಚಳವನ್ನು 28ರಿಂದ 30ಕ್ಕೆ , ಅದೇ ರೀತಿ ಎಸ್ಸಿ-ಎಸ್ಟಿಗೆ 30ರಿಂದ 32ಕ್ಕೆ ವಯೋಮಿತಿಯನ್ನು ಹೆಚ್ಚಳ ಮಾಡಲಾಗಿದೆ. ಮಹಿಳಾ ಮೀಸಲಾತಿ ಪ್ರಮಾಣವನ್ನು ಶೇ.25ಕ್ಕೆ ಹೆಚ್ಚಿಸಿದ್ದೇವೆ ಎಂದರು.

ಪೊಲೀಸ್ ಇಲಾಖೆಯು ಸಕ್ರಿಯವಾಗಿಯೂ ಹೆಚ್ಚು ಉತ್ತಮವಾಗಿ ಕೆಲಸ ಮಾಡಿದರೆ ಸರ್ಕಾರಕ್ಕೂ ಒಳ್ಳೆಯ ಹೆಸರು ಬರುತ್ತದೆ. ನೀವು ಎಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೀರೋ ಜನರು ನಿಮ್ಮನ್ನು ಅಷ್ಟೇ ಗೌರವದಿಂದ ಕಾಣುತ್ತಾರೆ. ಹೆಸರು ಮತ್ತು ಕೀರ್ತಿ ಎರಡನ್ನೂ ಸಂಪಾದಿಸಿಕೊಳ್ಳಿ ಎಂದು ಆಶಿಸಿದರು.

ಸಭೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್‍ಸೂದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್‍ಪಂತ್, ಸರ್ಕಾರದ ಮುಖ್ಯಕಾರ್ಯದರ್ಶಿ ರವಿಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Facebook Comments