ಮೀಸಲಾತಿ ಕುರಿತು ಸೂಕ್ತ ಸಂದರ್ಭದಲ್ಲಿ ಒಳ್ಳೆಯ ತೀರ್ಮಾನ: ಸಿಎಂ ಬಿಎಸ್‍ವೈ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.19- ವಿವಿಧ ಸಮುದಾಯಗಳು ಮೀಸಲಾತಿ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇಟ್ಟಿರುವ ಕುರಿತಾಗಿ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದೇನೆ ಸಿಎಂ ಯಡಿಯೂರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಬ್ಬ ಸಚಿವರು ಸಮುದಾಯಗಳ ಬೇಡಿಕೆ ಕುರಿತಾಗಿ ತಮ್ಮದೇ ಆದ ಅಭಿಪ್ರಾಯಗಳನ್ನು ನನ್ನ ಬಳಿ ಹಂಚಿಕೊಂಡಿದ್ದಾರೆ. ಸೂಕ್ತ ಸಂದರ್ಭದಲ್ಲಿ ಸರಿಯಾದ ನಿರ್ಣಯಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.

ಸಮುದಾಯಗಳಿಗೆ ಮೀಸಲಾತಿ ನೀಡುವ ಸಂಬಂಧ ಯಾವ ರೀತಿ ಕ್ರಮ ವಹಿಸಬೇಕು ಎಂಬುದರ ಬಗ್ಗೆ ಕಾನೂನು ತಜ್ಞರು ಹಾಗೂ ಸಂವಿಧಾನ ತಜ್ಞರ ಜೊತೆ ಚರ್ಚಿಸಲಾಗುವುದು. ಎಲ್ಲರಿಗೂ ಸಂವಿಧಾನಬದ್ಧ ನ್ಯಾಯ ಒದಗಿಸಲು ನಮ್ಮ ಸರ್ಕಾರ ಸಿದ್ದವಿದೆ ಎಂದರು. ಬಜೆಟ್ ಪೂರ್ವಭಾವಿ ಸಭೆಯ ಬಗ್ಗೆ ಮಾತನಾಡಿದ ಅವರು, ಈಗಾಗಲೇ ಬಹುತೇಕ ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳಿಂದ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ಮಾಹಿತಿ ಪಡೆದಿದ್ದೇನೆ.

ಗೃಹ ಸೇರಿದಂತೆ ಒಂದೆರಡು ಇಲಾಖೆಗಳು ಮಾತ್ರ ಬಾಕಿ ಇವೆ. ಬಹುತೇಕ ಎಲ್ಲ ಇಲಾಖೆಗಳ ಪೂರ್ವಭಾವಿ ಸಭೆ ನಡೆಸಲಾಗಿದೆ ಎಂದು ಹೇಳಿದರು. ಉಳಿದಿರುವ ಒಂದೆರಡು ಇಲಾಖೆಗಳ ಸಭೆ ಅರ್ಧ ದಿನದಲ್ಲಿ ಮುಗಿಯತ್ತದೆ. ಇದಾದ ನಂತರ ಬಜೆಟ್ ಪೂರ್ವ ಸಿದ್ದತೆಗಳು ಶುರುವಾಗಲಿದೆ ಎಂದು ವಿವರಿಸಿದರು.

ಈ ಬಾರಿಯ ಬಜೆಟ್‍ನಲ್ಲಿ ಇಲಾಖಾವಾರು ಏನೇನು ಕೊಡಬಹುದು, ಕಳೆದ ವರ್ಷ ಬಜೆಟ್‍ನಲ್ಲಿ ಎಷ್ಟು ಖರ್ಚಾಗಿದೆ, ಶೇಕಡವಾರು ಪ್ರಗತಿ ಎಲ್ಲದರ ಬಗ್ಗೆ ಸಮಗ್ರ ಮಾಹಿತಿ ಪಡೆದಿದ್ದೇನೆ. ಬಹಳ ಉಪಯುಕ್ತವಾದ ಚರ್ಚೆ ನಡೆದಿದೆ ಎಂದು ಸಿಎಂ ಸಂತಸ ವ್ಯಕ್ತಪಡಿಸಿದರು. ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತಿದ್ದೇವೆ. ಈಗಾಗಲೇ ಬಜೆಟ್ ಸಿದ್ದತೆ ಒಂದು ಹಂತಕ್ಕೆ ಬಂದಿದೆ ಎಂದು ಹೇಳಿದರು.

Facebook Comments