ಸ್ವಾರ್ಥ ಬಿಟ್ಟು ಜನರ ಹಿತ ಕಾಪಾಡಿದರೆ ಉತ್ತಮ ಸಮಾಜ ಸಾಧ್ಯ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.24- ಸ್ವಾತಂತ್ರ ಪೂರ್ವದಲ್ಲಿ ದೇಶಕ್ಕಾಗಿ ನಾನು ಎನ್ನುವ ಮುತ್ಸದ್ದಿಗಳಿದ್ದರು. ಆದರೆ ಸ್ವಾತಂತ್ರ್ಯ ಬಂದ ನಂತರ ನನಗಾಗಿ ದೇಶ ಎಂಬ ಸ್ವಾರ್ಥ ಬಂದಿದ್ದರಿಂದ ಇಂತಹ ದುಸ್ಥಿತಿ ಬಂದಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಷಾಧಿಸಿದರು. ವಿಧಾನಸೌಧದ ಬಾಂಕ್ವೆಟ್‍ಹಾಲ್‍ನಲ್ಲಿ ವಿಧಾನಮಂಡಲದ ಕಾಮನ್‍ವೆಲ್ತ್ ಸಂಸದೀಯ ಸಂಘದ ವತಿಯಿಂದ ನಡೆದ ಸಂಸದೀಯ ಮೌಲ್ಯಗಳ ಕುಸಿತವನ್ನು ತಡೆಗಟ್ಟುವ ಒಂದು ಆತ್ಮಾವಲೋಕನ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದೆ ಮುತ್ಸದ್ಧಿಗಳು ದೇಶಕ್ಕಾಗಿ ನಾನು ಎನ್ನುತ್ತಿದ್ದರು. ಸ್ವಾತಂತ್ರ್ಯದ ಬಳಿಕ ಎಲ್ಲರಲ್ಲೂ ನನಗಾಗಿ ದೇಶ ಎಂಬ ಸ್ವಾರ್ಥ ಭಾವನೆ ಮೂಡಿದ್ದರಿಂದಲೇ ದೇಶಇಂಥ ಸ್ಥಿತಿಯಲ್ಲಿದ್ದೇವೆ ಎಂದು ಬೇಸರ ಹೊರಹಾಕಿದರು. 12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಪ್ರತಿಯೊಬ್ಬ ಜನಪ್ರತಿನಿಧಿಗಳು ತಮ್ಮ ಸ್ವಾರ್ಥಕ್ಕಾಗಿ ಯೋಚಿಸದೆ ಸಾರ್ವಜನಿಕರ ಹಿತಕ್ಕಾಗಿ ಆಲೋಚಿಸಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾದ್ಯ ಎಂದಿದ್ದರು. ಅದು ಈಗ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.

ಯಾರು ಜನರ ಹಿತವನ್ನು ಬಯಸುತ್ತಾರೋ ಅಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆ ಯಶಸ್ವಿಯಾಗುತ್ತದೆ. ಎಲ್ಲಿ ಸ್ವಾರ್ಥ ಇರುತ್ತದೆಯೋ ಅಂತಹ ಕಡೆ ಮೌಲ್ಯಗಳು ಅಥವಾ ಆದರ್ಶಗಳಿಗೆ ಬೆಲೆ ಇರುವುದಿಲ್ಲ. ನಮಗೆ ಬಸವಣ್ಣನವರು ಹಾಕಿಕೊಟ್ಟ ಮಾರ್ಗದರ್ಶನಗಳು ಆದರ್ಶವಾಗಿರಬೇಕೆಂದು ಹೇಳಿದರು. ಜನಪ್ರತಿನಿಧಿಗಳು ಪ್ರತಿಯೊಬ್ಬರಿಗೂ ಆದರ್ಶಪ್ರಾಯವಾಗಿರಬೇಕು. ಜನಹಿತ ಬಿಟ್ಟು ಸ್ವಾರ್ಥಕ್ಕಾಗಿ ಅಧಿಖಾರ ಬಳಸಬಾರದೆಂಬುದನ್ನು ಬಸವಣ್ಣನವರೇ ಹೇಳಿಕೊಟ್ಟಿದ್ದಾರೆ. ಜನರಿಂದ ಆರಿಸಿಬಂದವರಿಗೆ ಜನತೆಯ ಕಾಳಜಿ ಇರಬೇಕೆಂದು ಕಿವಿಮಾತು ಹೇಳಿದರು.

ಇಂದು ಸಮಾಜದಲ್ಲಿ ಸಾಮಾಜಿಕ ಮೌಲ್ಯಗಳು ಕುಸಿಯುತ್ತಿವೆ. ರಾಷ್ಟ್ರಪಿತ ಮಹಾತ್ಮಗಾಂಧಿಯವರ ಸರ್ವೋದಯದ ಕನಸು ನನಸಾಗಬೇಕಾದರೆ ಶೋಷಿತರು, ದಮನಿತರ ಧ್ವನಿಯಾಗಿ ಜನಪ್ರತಿನಿಧಿಗಳು ಕೆಲಸ ಮಾಡಬೇಕೆಂದು ತಿಳಿಸಿದರು. ಪ್ರಜಾಪ್ರಭ್ವುದ ಮೌಲ್ಯಗಳು ಯಶಸ್ವಿಯಾಗಬೇಕಾದರೆ ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು. ಸದನದಲ್ಲಿ ಯಾವುದೇ ಕಾರಣಕ್ಕೂ ಅಹಿತಕರ ಘಟನೆಗಳು ನಡೆಯಬಾರದು. ಆ ರೀತಿ ನಾವು ಸದನದಲ್ಲಿ ನಡೆದುಕೊಂಡಾಗ ಮಾತ್ರ ಪ್ರಜಾಪ್ರಭುತ್ವದ ಅನುಷ್ಠಾನ ಸಾದ್ಯ ಎಂದು ಹೇಳಿದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಪ್ರಜಾಪ್ರಭುತ್ವದ ಆಶಯ ಈಡೇರಬೇಕೆಂದರೆ ಜನಪ್ರತಿನಿಧಿಗಳು ಮೊದಲು ತಮ್ಮ ಕರ್ತವ್ಯಗಳನ್ನು ನಿಭಾಯಿಸಬೇಕು ಎಂದು ಸಲಹೆ ಮಾಡಿದರು. ಸದಸ್ಯರು ಸದನದಲ್ಲಿ ಕಲಾಪದಲ್ಲಿ ಭಾಗಹಿಸುವ ಮುನ್ನ ಅಧ್ಯಯನ ನಡೆಸಬೇಕು. ಹಿರಿಯರಿಂದ ಸಲಹೆ, ಮಾರ್ಗದರ್ಶಗಳನ್ನು ಪಡೆಯಬೇಕು. ಚರ್ಚೆಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸಿದರೆ ಮಾತ್ರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬಹುದು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Facebook Comments