ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಬಿಡುಗಡೆಗೆ ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಕ್ರಮ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.25- ಕೋವಿಡ್-19 ಕಾರಣದಿಂದ ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ತಡೆ ಹಿಡಿಯಲ್ಪಟ್ಟಿದ್ದ ಅನುದಾನವನ್ನು ಬಿಡುಗಡೆ ಮಾಡಲು ಹಣಕಾಸು ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಾಸಕರಿಗೆ ಅಭಯ ನೀಡಿದ್ದಾರೆ. ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಶಾಸಕರು, ಸಚಿವರು, ಅಧಿಕಾರಿಗಳ ಜತೆ ಸಭೆ ನಡೆಸಿದ ಯಡಿಯೂರಪ್ಪ ಅವರು, ಅಭಿವೃದ್ಧಿ ಯೋಜನೆಗಳು ಮತ್ತು ಕ್ಷೇತ್ರದ ಅನುದಾನವನ್ನು ಬಿಡುಗಡೆ ಮಾಡಲು ಸದ್ಯದಲ್ಲೇ ಹಣಕಾಸು ಇಲಾಖೆಗಳ ಅಧಿಕಾರಿಗಳ ಜತೆ ಸಭೆ ನಡೆಸಲಾಗುವುದು. ಎಷ್ಟು ಸಾಧ್ಯವೋ ಅಷ್ಟು ಬೇಗ ನಿಮ್ಮ ನಿಮ್ಮ ಕ್ಷೇತ್ರಗಳಿಗೆ ಹಣ ಬಿಡುಗಡೆ ಮಾಡಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಆಶ್ವಾಸನೆ ನೀಡಿದರು.

ರಾಜ್ಯದಲ್ಲಿ ಈ ಬಾರಿ ಕೋವಿಡ್ ಬಂದ ಕಾರಣ ಎಲ್ಲ ಕಾರ್ಯ ಚಟುವಟಿಕೆಗಳು ಸ್ಥಗಿತಗೊಂಡು ಬೊಕ್ಕಸಕ್ಕೆ ಆದಾಯವೇ ನಿಂತುಹೋಗಿತ್ತು. ಇದೀಗ ಆರ್ಥಿಕ ಚಟುವಟಿಕೆಗಳು ಆರಂಭವಾಗಿವೆಯಾದರೂ ನಮ್ಮ ನಿರೀಕ್ಷೆಗೆ ತಕ್ಕಂತೆ ವರಮಾನ ಬರುತ್ತಿಲ್ಲ. ಆದರೂ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ದುರುದ್ದೇಶಪೂರ್ವಕವಾಗಿ ಯಾವುದೇ ಶಾಸಕರ ಕ್ಷೇತ್ರಗಳಿಗೆ ಅನುದಾನವನ್ನು ತಡೆಹಿಡಿದಿಲ್ಲ. ಲಾಕ್‍ಡೌನ್‍ನಿಂದ ರಾಜ್ಯದ ಬೊಕ್ಕಸಕ್ಕೆ ಎಷ್ಟು ಹಾನಿಯಾಗಿದೆ ಎಂಬುದು ನಿಮಗೆಲ್ಲರಿಗೂ ಗೊತ್ತಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ ಎಂಬುದು ನಿಮಗೆ ತಿಳಿದಿದೆ. ಸಣ್ಣಪುಟ್ಟ ವ್ಯತ್ಯಾಸಗಳಿದ್ದರೆ ನಾನು ಸರಿಪಡಿಸಿಕೊಡುತ್ತೇನೆ. ನನ್ನ ಮಾತಿನಲ್ಲಿ ನಂಬಿಕೆ ಇಡಿ ಎಂದು ತಿಳಿಸಿದ್ದಾರೆ.

ಸಚಿವರ ವಿರುದ್ಧ ದೂರು:  ಕೆಲವು ಸಚಿವರು ನಮ್ಮ ಕ್ಷೇತ್ರಗಳಿಗೆ ಸರಿಯಾಗಿ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಶಾಸಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ದೂರು ಕೊಟ್ಟಿದ್ದಾರೆ. ಮುಖ್ಯಮಂತ್ರಿ ಅವರು ಇಲಾಖೆಗಳಿಗೆ ಅನುದಾನ ಕೊಟ್ಟಿದ್ದರೂ ಕೆಲವು ಸಚಿವರು ದುರುದ್ದೇಶಪೂರ್ವಕವಾಗಿ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು 45ಕ್ಕೂ ಹೆಚ್ಚು ಶಾಸಕರು ದೂರು ನೀಡಿದ್ದಾರೆ. ಶಾಸಕರು ಕೆಲ ಸಚಿವರು ನಮ್ಮ ಮಾತುಗಳನ್ನು ಕೇಳುತ್ತಿಲ್ಲ. ನಮ್ಮ ಸರ್ಕಾರ ಅಧಿಕಾರದಲ್ಲಿದ್ದರೂ ನಮ್ಮ ಸಚಿವರೇ ನಮ್ಮ ಮಾತು ಕೇಳುತ್ತಿಲ್ಲ ಎಂದು ನೋವು ತೋಡಿ ಕೊಂಡಿದ್ದಾರೆ.

ಮುಖ್ಯವಾಗಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್, ಅರೋಗ್ಯ ಮತ್ತು ಕುಟುಂಬ ಕಲ್ಯಾಣ, ಲೋಕೋಪಯೋಗಿ, ಕಂದಾಯ, ಉನ್ನತ ಶಿಕ್ಷಣ ಸೇರಿದಂತೆ ಆರು ಸಚಿವರ ಮೇಲೆ ಶಾಸಕರು ದೂರು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶಾಸಕರ ಮನವಿ ಮೇರೆಗೆ ಮುಖ್ಯಮಂತ್ರಿಗಳು ಗ್ರಾಮೀಣಾಭಿವೃದ್ಧಿ ಸಚಿವರಾಗಿರುವ ಕೆ.ಎಸ್.ಈಶ್ವರಪ್ಪ ಅವರ ಗಮನಕ್ಕೆ ತರದೆ ಅನುದಾನ ಬಿಡುಗಡೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ, ತಮ್ಮ ಗಮನಕ್ಕೆ ತರದೆ ತಮ್ಮ ಇಲಾಖೆಯ ಅನುದಾನ ಬಿಡುಗಡೆ ಮಾಡಿದ್ದಕ್ಕೆ ಈಶ್ವರಪ್ಪ ಮುನಿಸಿಕೊಂಡಿದ್ದಾರೆ.

ಹಾಗಾಗಿ ಸಿಎಂ ಸಹಿ ಮಾಡಿ ನೀಡಿದ ಅನುದಾನವನ್ನು ಈಶ್ವರಪ್ಪ ತಡೆಯುತ್ತಿದ್ದಾರೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ. ಈಶ್ವರಪ್ಪ ಸೇರಿದಂತೆ ಆರು ಸಚಿವರ ವಿರುದ್ಧ ಶಾಸಕರು ಸಿಎಂಗೆ ದೂರು ಸಲ್ಲಿಸಿ, ಅನುದಾನ ಬಿಡುಗಡೆಗೊಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈಶ್ವರಪ್ಪ ಮತ್ತು ಸಿಎಂ ನಡುವೆ ಮತ್ತೆ ಶೀತಲ ಸಮರ ಆರಂಭಗೊಂಡಿದೆಯಾ ಎಂಬ ಚರ್ಚೆಗಳು ರಾಜ್ಯ ಬಿಜೆಪಿ ಅಂಗಳದಲ್ಲಿ ಆರಂಭಗೊಂಡಿವೆ.

ಯಾವುದೇ ಕ್ಷೇತ್ರಕ್ಕೂ ಅನುದಾನ ಕೊರತೆ ಮಾಡಲ್ಲ. ಹಣಕಾಸು ಸ್ಥಿತಿ ನೋಡಿಕೊಂಡು ಹಂತ ಹಂತವಾಗಿ ಎಲ್ಲರಿಗೂ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಅಭಿವೃದ್ಧಿ ಯೋಜನೆಗಳಿಗೂ ಹಣ ನೀಡಲಾಗುತ್ತದೆ ಎಂದು ಶಾಸಕರಿಗೆ ಸಿಎಂ ಅಭಯ ನೀಡಿದ್ದಾಗಿ ತಿಳಿದು ಬಂದಿದೆ. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ನಾರಾಯಣ್ ಗೌಡ, ಶ್ರೀರಾಮುಲು, ಮುರಗೇಶ್ ನಿರಾಣಿ, ಬಸವರಾಜ ಬೊಮ್ಮಾಯಿ, ಶಾಸಕರಾದ ಎಂ.ಪಿ.ಕುಮಾರಸ್ವಾಮಿ, ರಾಜೀವ್, ರೇಣುಕಾಚಾರ್ಯ, ಬೆಳ್ಳಿ ಪ್ರಕಾಶ್, ಸುನೀಲ್ ನಾಯಕ್, ದಿನಕರ್ ಶೆಟ್ಟಿ, ಉದಯ್ ಗರುಡಾಚಾರ್, ತಿಪ್ಪಾರೆಡ್ಡಿ, ಗೂಳಿಹಟ್ಟಿ ಶೇಖರ್, ರಾಜುಗೌಡ,

ಬಸವರಾಜು ದಡೆಸಗೂರು, ಅರಗ ಜ್ಞಾನೇಂದ್ರ, ರಾಜೇಶ್ ಗೌಡ, ಹರೀಶ್ ಪೂಂಜ, ಜ್ಯೋತಿ ಗಣೇಶ್, ಎಸ್.ವಿ.ರಾಮಚಂದ್ರನ್, ರೂಪಾಲಿ ನಾಯಕ್, ವೇದವ್ಯಾಸ ಕಾಮತ್, ನೆಹರು ಓಲೇಕಾರ್, ದೊಡ್ಡನಗೌಡ ಪಾಟೀಲ ಕಿತ್ತೋರ್, ರಘುಪತಿ ಭಟ್, ಹಾಲಪ್ಪ ಆಚಾರ್, ಅಮೃತ ದೇಸಾಯಿ, ಡಾ.ಅವಿನಾಶ್ ಜÁಧವ್, ದೊಡ್ಡನಗೌಡ ಪಾಟೀಲ ಹುನಗುಂದ, ನಿರಂಜನ, ಡಿ. ಎಸ್.ಸುರೇಶ್, ಚಂದ್ರಪ್ಪ ಉಪಸ್ಥಿತರಿದ್ದರು.

Facebook Comments