ಬಗೆಹರಿಯದ ನಿಗಮ ಮಂಡಳಿಗಳ ತಲೆನೂವು, ಬಿಜೆಪಿಯಲ್ಲಿ ತಳಮಳ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.19- ಅತೃಪ್ತರ ಮನವೊಲಿಸಲು ವಿವಿಧ ನಿಗಮ ಮಂಡಳಿಯಲ್ಲಿ ನೀಡಲಾಗಿದ್ದ ಹುದ್ದೆಯನ್ನು ಯಾರೊಬ್ಬರೂ ಅಲಂಕರಿಸದಿರುವುದರಿಂದ ಬಿಜೆಪಿಯಲ್ಲಿ ತಳಮಳ ಸೃಷ್ಟಿಯಾಗಿದೆ. ಡಿಸೆಂಬರ್ 5ರಂದು 15 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ನ.11ರಿಂದ ಅಧಿಸೂಚನೆ ಹೊರಬೀಳಲಿದೆ. ಅಷ್ಟರೊಳಗೆ ನಿಗಮ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಸ್ವೀಕರಿಸದಿದ್ದರೆ ಫಲಿತಾಂಶದ ನಂತರವೇ ತೆಗೆದುಕೊಳ್ಳಬೇಕಾಗುತ್ತದೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬಿಜೆಪಿ ಮುಖಂಡ ವಿ.ಎಸ್.ಪಾಟೀಲ್ ಹೊರತುಪಡಿಸಿದರೆ ಉಳಿದ ಯಾರೊಬ್ಬರೂ ಈವರೆಗೂ ಅಧಿಕಾರ ಸ್ವೀಕರಿಸಿಲ್ಲ. ಇದು ಬಿಜೆಪಿಯಲ್ಲಿ ಮತ್ತಷ್ಟು ಚಿಂತೆಗೀಡು ಮಾಡಿದೆ.  ಕೆ.ಆರ್.ಪುರಂನ ಮಾಜಿ ಶಾಸಕ ನಂದೀಶ್ ರೆಡ್ಡಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಅಧ್ಯಕ್ಷ ಸ್ಥಾನವನ್ನು ಎರಡು ದಿನಗಳ ಹಿಂದೆ ನೀಡಲಾಗಿತ್ತು. ಅಲ್ಲದೆ ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನವನ್ನು ಕೊಡಲಾಗಿತ್ತು. ಆದರೂ ಈವರೆಗೂ ನಂದೀಶ್ ರೆಡ್ಡಿ ಅಧಿಕಾರ ತೆಗೆದುಕೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ತಮಗೆ ನೀಡಿರುವ ಸ್ಥಾನಗಳನ್ನು ಅಲಂಕರಿಸದೇ ಇರುವ ಅತೃಪ್ತರು ಕೊನೆ ಕ್ಷಣದವರೆಗೂ ಬಿಜೆಪಿಯಿಂದ ಟಿಕೆಟ್ ಪಡೆಯುವ ಪ್ರಯತ್ನದಲ್ಲಿದ್ದಾರೆ. ಆದರೆ ಈಗಾಗಲೇ ನಡೆದಿರುವ ಮಾತುಕತೆಯಂತೆ ಕೆ.ಆರ್.ಪುರಂನಿಂದ ಅನರ್ಹ ಶಾಸಕ ಭೈರತಿ ಬಸವರಾಜ್‍ಗೆ ಟಿಕೆಟ್ ನೀಡಲು ಸಮ್ಮತಿಸಲಾಗಿದೆ. ಇನ್ನು ಹೊಸಕೋಟೆಯಿಂದ ಆಕಾಂಕ್ಷಿಯಾಗಿರುವ ಶರತ್ ಬಚ್ಚೇಗೌಡಗೆ ಅತ್ಯಂತ ಸಂಪದ್ಭರಿತವಾದ ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಆದೇಶ ನೀಡಿದ್ದರೂ ಅಧಿಕಾರ ತೆಗೆದುಕೊಳ್ಳದಿರುವುದು ಬಿಜೆಪಿಗೆ ತಲೆನೋವಾಗಿದೆ.

ಶರತ್ ಬಚ್ಚೇಗೌಡ ಕೂಡ ಕೊನೆ ಕ್ಷಣದವರೆಗೂ ಬಿಜೆಪಿ ಅಭ್ಯರ್ಥಿಯಾಗುವ ನಿರೀಕ್ಷೆಯಲ್ಲಿದ್ದಾರೆ. ಇಲ್ಲದಿದ್ದರೆ ಕಾಂಗ್ರೆಸ್‍ಗೂ ಪಕ್ಷಾಂತರ ಮಾಡುವ ತೀರ್ಮಾನಕ್ಕೂ ಬಂದಿದ್ದಾರೆ.
ಈ ಕ್ಷೇತ್ರದಿಂದ ಮಾಜಿ ಸಚಿವ ಎಂ.ಟಿ.ಬಿ.ನಾಗರಾಜ್‍ಗೆ ಬಿಜೆಪಿ ಟಿಕೆಟ್ ಕೊಡುವುದು ಪಕ್ಕ ಆಗಿರುವುದರಿಂದ ಶರತ್ ಬಚ್ಚೇಗೌಡ ಯಾವ ತೀರ್ಮಾನ ಕೈಗೊಳ್ಳಬೇಕೆಂಬ ಹೊಯ್ದಾಟದಲ್ಲಿದ್ದಾರೆ.

ಹಿರೇಕೆರೂರಿನಲ್ಲಿ ಯು.ಬಿ.ಬಣಕಾರ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸ್ಥಾನ ಪಡೆಯಲು ಸಮ್ಮತಿಸಿರುವುದರಿಂದ ಇಲ್ಲಿ ಬಿ.ಸಿ.ಪಾಟೀಲ್ ಹಾದಿ ಸುಗಮವಾದಂತಿದೆ.
ಗೋಕಾಕ್‍ನಿಂದ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕವಾಗಿದ್ದ ಅಶೋಕ್ ಪೂಜಾರಿ ಕೂಡ ಈವರೆಗೂ ಅಧಿಕಾರ ಸ್ವೀಕರಿಸಿಲ್ಲ. ಉಪಚುನಾವಣೆಯಲ್ಲಿ ತನಗೆ ಈ ಕ್ಷೇತ್ರದಿಂದ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ಅದಮ್ಯ ವಿಶ್ವಾಸದಲ್ಲಿದ್ದಾರೆ.

ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಪ್ರಮುಖ ಪಾತ್ರ ವಹಿಸಿದ್ದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಇದಕ್ಕಾಗಿಯೇ ಅಶೋಕ್ ಪೂಜಾರಿಗೆ ಗಡಿ ಅಭಿವೃದ್ದಿ ಪ್ರಾಧಿಕಾರದ ಸ್ಥಾನಮಾನ ನೀಡಲಾಗಿತ್ತು.  ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೆ ಕಾಂಗ್ರೆಸ್‍ಗೆ ಗುಟುರು ಹಾಕುತ್ತಿರುವ ರಾಜು ಕಾಗೆ ಕಾಡ(ಘಟಪ್ರಭಾ ಯೋಜನೆ) ಅಧ್ಯಕ್ಷರಾಗಿದ್ದರೂ ಅಧಿಕಾರ ಸ್ವೀಕರಿಸಿಲ್ಲ. ಕಾಗವಾಡದಿಂದ ನನಗೆ ಟಿಕೆಟ್ ಬೇಕೆಂದು ಅವರು ಪಟ್ಟು ಹಿಡಿದಿದ್ದಾರೆ.

ಈ ಕ್ಷೇತ್ರದಿಂದ ಅನರ್ಹ ಶಾಸಕ ಶೀಮಂತ್ ಪಾಟೀಲ್ ಇಲ್ಲವೇ ಅವರ ಪುತ್ರನಿಗೆ ಟಿಕೆಟ್ ಖಾತ್ರಿಯಾಗಿದೆ. ಬಿಜೆಪಿ ಟಿಕೆಟ್ ಕೊಡದಿದ್ದರೆ ರಾಜು ಕಾಗೆ ಕಾಗೆ ಹಾರಿಸುವುದು ಪಕ್ಕ ಎನ್ನಲಾಗುತ್ತಿದೆ.  ವಿಜಯನಗರದಿಂದ ಗವಿಯಪ್ಪಗೆ ಸಣ್ಣ ಕೈಗಾರಿಕೆ, ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ನೀಡಲಾಗಿತ್ತು. ಉಪಚುನಾವಣೆಯಲ್ಲಿ ಆನಂದ್ ಸಿಂಗ್ ಹಾದಿ ಸುಗಮಗೊಳಿಸುವ ಉದ್ದೇಶದಿಂದ ಬಿಜೆಪಿ ಈ ತೀರ್ಮಾನಕ್ಕೆ ಬಂದಿತ್ತು.

ಆದರೆ ಗವಿಯಪ್ಪ ಕೂಡ ಅಧಿಕಾರ ತೆಗೆದುಕೊಳ್ಳದೆ ಭಿನ್ನಮತೀಯರ ಮಟ್ಟಿಯಲ್ಲಿದ್ದಾರೆ.  ಮಸ್ಕಿಯಿಂದ ಬಸವರಾಜ್ ತುರುವಿಹಾಳ್‍ಗೆ ಕಾಡ(ತುಂಗಭದ್ರ ಯೋಜನೆ) ಅಧ್ಯಕ್ಷ ಸ್ಥಾನವನ್ನು ನೀಡಲಾಗಿತ್ತು. ಇವರು ಕೂಡ ಕಾಂಗ್ರೆಸ್‍ನಿಂದ ಟಿಕೆಟ್ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದು, ಬಿಜೆಪಿಗೆ ಟಾಟಾ ಹೇಳಲು ಮುಂದಾಗಿದ್ದಾರೆ.

ಹೀಗೆ ಅತೃಪ್ತರ ಮನವೊಲಿಕೆಗೆ ನಿಗಮ ಮಂಡಳಿಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ನೀಡಿ ಮೂಗಿಗೆ ತುಪ್ಪ ಸವರಲು ಮುಂದಾಗಿದ್ದರೂ ಫಲ ನೀಡುವ ಲಕ್ಷಣಗಳು ಕಾಣದಿರುವುದು ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಸಿದೆ.

Facebook Comments