ನೀರಿನ ಬವಣೆ ನೀಗಿಸಲು ತುರ್ತು ಕ್ರಮಕ್ಕೆ ಜಲಮಂಡಳಿಗೆ ಸಿಎಂ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, -ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಜನತೆಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಬೆಂಗಳೂರು ನೀರು ಸರಬರಾಜು ಮತ್ತು ಜಲಮಂಡಳಿ (ಬಿಡಬ್ಲ್ಯುಎಸ್‍ಎಸ್‍ಬಿ) ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿಂದು ಜಲಮಂಡಳಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಅಧಿಕಾರಿಗಳು ನೀರು ಸರಬರಾಜಾಗುವ ವೇಳೆ ಸೋರಿಕೆಯಾಗದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು.

ನೀರಿನ ಪೈಪ್‍ಗಳು ಒಡೆದು ಹೋಗಿದ್ದರೆ ದುರಸ್ತಿ ಮಾಡಿಸುವುದು ಸೇರಿದಂತೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ನಿರ್ದೇಶಿಸಿದರು. ಶೇ.100ರಷ್ಟು ನೀರು ಸೋರಿಕೆಯಾಗುವುದನ್ನು ತಡೆಗಟ್ಟಿದರೆ ಬಹುತೇಕ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ. ರಸ್ತೆಗಳನ್ನು ಅಗೆಯು ವಾಗ ನೀರಿನ ಪೈಪ್‍ಗಳು ಒಡೆದು ಹೋದರೆ ತಕ್ಷಣವೇ ಸರಿಪಡಿಸಬೇಕು. ವಿಳಂಬ ಮಾಡುವು ದರಿಂದ ಸಮಸ್ಯೆ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ನೀರಿನ ಪೈಪ್ ಅಳವಡಿ ಸಲು ಜೆಸಿಬಿ ಮೂಲಕ ರಸ್ತೆ ಅಗೆಯದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ತಾಕೀತು ಮಾಡಿದರು.

ಪೈಪ್ ಅಳವಡಿಸಲು ಎಷ್ಟು ಬೇಕೋ ಅಷ್ಟು ಮಾತ್ರ ಅಗೆದು ಕೂಡಲೇ ಮುಚ್ಚಿ ಹಾಕಿ. ಹಿಂದಿನ ರೀತಿಯಲ್ಲೇ ರಸ್ತೆಯನ್ನು ಮರುಸ್ಥಾಪಿಸಬೇಕು. ಅಧಿಕಾರಿಗಳು ಸಾಧ್ಯವಾದಷ್ಟು ಎಲ್ಲೆಲ್ಲಿ ನೀರು ಸೋರಿಕೆಯಾಗುತ್ತಿದೆಯೋ ಅಂತಹ ಕಡೆ ವಿಶೇಷ ಆದ್ಯತೆ ಕೊಟ್ಟು ತಡೆಗಟ್ಟಲು ಬೇಕಾದ ಮಾರ್ಗೋ ಪಾಯ ಕಂಡುಕೊಳ್ಳಿ ಎಂದು ಸೂಚಿಸಿದರು.

ಬೆಂಗಳೂರಿನಲ್ಲಿ ಒಂದು ಕೋಟಿಗೂ ಅಧಿಕ ಜನಸಂಖ್ಯೆ ಇದೆ. ಪ್ರತಿಯೊಬ್ಬರಿಗೂ ಅಗತ್ಯಕ್ಕೆ ತಕ್ಕಂತೆ ನೀರು ಪೂರೈಸಬೇಕು. ಮುಂದಿನ ದಿನಗಳಲ್ಲಿ ಇನ್ನು ಜನಸಂಖ್ಯೆ ಏರಿಕೆಯಾಗಲಿದ್ದು, ಅದಕ್ಕೆ ತಕ್ಕಂತೆ ನೀರಿನ ಲಭ್ಯತೆಯನ್ನು ಸರಬರಾಜು ಮಾಡಬೇಕು. ಶೇ.36ರಷ್ಟು ನೀರು ಸೋರಿಕೆಯಾಗುತ್ತದೆ ಎಂಬ ಮಾಹಿತಿ ಇದೆ. ಇದು ಯಾವ ಕಾರಣಕ್ಕಾಗಿ ಸೋರಿಕೆಯಾಗುತ್ತಿದೆ. ಗುಣಮಟ್ಟದ ಪೈಪ್‍ಗಳನ್ನು ಅಳವಡಿಸುವುದು, ಅನಗತ್ಯವಾಗಿ ರಸ್ತೆ ಅಗೆಯುವುದನ್ನು ನಿಲ್ಲಿಸಬೇಕೆಂದು ಸೂಚಿಸಿದರು.

ಸೋರಿಕೆಯಾಗುವ ಪೈಪ್‍ಗಳನ್ನು ತಕ್ಷಣ ಬದಲಾವಣೆ ಮಾಡಬೇಕು. ನೀವು ವಿಳಂಬ ಮಾಡಿದಷ್ಟು ಹೆಚ್ಚಿನ ಪ್ರಮಾಣದಲ್ಲಿನೀರು ಸೋರಿಕೆಯಾಗುತ್ತದೆ. ತಿಪ್ಪಗೊಂಡನಹಳ್ಳಿ ಜಲಾಶಯದ ನೀರನ್ನು ಬಳಕೆ ಮಾಡಿಕೊಂಡು ಕುಡಿಯುವ ನೀರಾಗಿ ಸರಬರಾಜು ಮಾಡಿ ಎಂದು ಹೇಳಿದರು.

ಪ್ರಸ್ತುತ ಬಿಬಿಎಂಪಿ ವ್ಯಾಪ್ತಿಯಲ್ಲಿ ಸೇರ್ಪಡೆ ಯಾಗಿರುವ 110 ಹಳ್ಳಿಗಳ ಪೈಕಿ 41 ಹಳ್ಳಿಗಳಿಗೆ ಕಾವೇರಿ ನೀರು ಒದಗಿಸಲು ಅಧಿಸೂಚನೆ ಒದಗಿಸಲಾಗಿದೆ. ಬೆಳ್ಳಂದೂರು ಕೆರೆ ಸಮಸ್ಯೆಯನ್ನು ಮುಂದಿನ ಜುಲೈನೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಅಮೃತ್ ಯೋಜನೆಯಡಿ ಬೆಂಗಳೂರುನಗರ 5 ಕೆರೆಗಳ ಪುನಶ್ಚೇತನ ಕಾರ್ಯ ಈಗಾಗಲೇ ಆರಂಭಗೊಂಡಿದ್ದು, ಆದಷ್ಟು ಬೇಗ ಈ ಕಾಮಗಾರಿ ಪೂರ್ಣಗೊಳಿಸಿ ಸಾರ್ರ್ವಜನಿಕರ ಸೇವೆಗೆ ಅನುಕೂಲವಾಗುವಂತೆ ನಿರ್ಮಾಣ ಮಾಡಬೇಕೆಂದು ನಿರ್ದೇಶನ ನೀಡಲಾಗಿದೆ.

ಕಾವೇರಿ ನೀರು ಸರಬರಾಜು 5ನೇ ಹಂತ ಈಗಾಗಲೇ ಜಾರಿಯಲ್ಲಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ನೀರು ಸರಬರಾಜು ಮಾಡಿ ಸೂಚನೆ ನೀಡಿದರು. ಈ ವೇಳೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ತುಷಾರ್ ಗಿರಿನಾಥ್, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

Facebook Comments