ಜನರಲ್ಲಿ ಆತ್ಮವಿಶ್ವಾಸ ಹಾಗೂ ಸುರಕ್ಷತೆಯ ಭಾವ ಮೂಡಿಸಿ : ಪೊಲೀಸರಿಗೆ ಸಿಎಂ ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.21- ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆಗೆ ಜನರಲ್ಲಿ ಆತ್ಮವಿಶ್ವಾಸ ಹಾಗೂ ಸುರಕ್ಷತೆಯ ಭಾವ ಮೂಡಿಸುವಂತೆ ಪೊಲೀಸರು ಕರ್ತವ್ಯ ನಿರ್ವಹಿಸಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಸಲಹೆ ಮಾಡಿದರು. ಮೈಸೂರು ರಸ್ತೆಯ ಚಾಮರಾಜಪೇಟೆಯ ಸಿಎಆರ್ ಮೈದಾನದಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲೇ ಕರ್ನಾಟಕ ರಾಜ್ಯದ ಪೊಲೀಸರಿಗೆ ವಿಶಿಷ್ಠವಾದ ಹೆಸರಿದೆ. ಇದನ್ನು ಉಳಿಸಿಕೊಂಡು ಜನರ ವಿಶ್ವಾಸಕ್ಕೆ ಪಾತ್ರರಾಗಬೇಕೆಂದು ಕಿವಿಮಾತು ಹೇಳಿದರು.

ಪೊಲೀಸರು ಕ್ಲಿಷ್ಟ ಸಂದರ್ಭಗಳಲ್ಲಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ಕರ್ತವ್ಯ ನಿರ್ವಹಿಸುತ್ತಾರೆ. ನಿಮ್ಮ ಕೀರ್ತಿ ಅಂತಾರಾಷ್ಟ್ರೀಯ ಮಟ್ಟಕ್ಕೂ ಹಬ್ಬಬೇಕು.ಆ ರೀತಿ ಕೆಲಸ ಮಾಡಿ. ನಿಮಗೆ ಸರ್ಕಾರ ಎಲ್ಲ ರೀತಿಯ ನೆರವು ನೀಡಲು ಸಿದ್ದವಿದೆ ಎಂದು ಭರವಸೆ ನೀಡಿದರು.  ಇತ್ತೀಚೆಗೆ ಸಮಾಜಘಾತುಕ ಶಕ್ತಿಗಳ ಉಪಟಳ ಹೆಚ್ಚಾಗುತ್ತಿದೆ. ಡ್ರಗ್ಸ್ ಮಾಫಿಯಾ ಯುವಶಕ್ತಿಯನ್ನು ನಿಷ್ಕ್ರಿಯಗೊಳಿಸುತ್ತಿದೆ. ಇಂತಹ ಪ್ರಕರಣಗಳಲ್ಲಿ ಯಾರೇ ಭಾಗಿಯಾಗಿದ್ದರೂ ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಬೇಕು. ಇದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಪಣ ತೊಡಿ ಎಂದು ಸೂಚಿಸಿದರು.

ಯಾವುದೇ ರಾಜ್ಯ, ದೇಶ ಅಭಿವೃದ್ದಿಪಥದಲ್ಲಿ ಸಾಗಬೇಕಾದರೆ ಕಾನೂನು ಸುವ್ಯವಸ್ಥೆ ಉತ್ತಮವಾಗಿರಬೇಕು. ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಸಂಘಟಿತ ಅಪರಾಧಿಗಳು, ಸಮಾಜ ವಿರೋಧಿ ಶಕ್ತಿಗಳನ್ನು ನಿಯಂತ್ರಿಸಲು ಪೊಲೀಸರು ಸದಾ ಜಾಗೃತರಾಗಿರಬೇಕೆಂದು ಹೇಳಿದರು.  ಬೆಂಗಳೂರು, ಮೈಸೂರು, ಹುಬ್ಬಳ್ಳಿ ಧಾರವಾಡ, ಬೆಳಗಾವಿ, ಮಂಗಳೂರು ನಗರದಲ್ಲಿ ಮಹಿಳಾ ಪೊಲೀಸ್ ಠಾಣೆಯನ್ನು ಒನ್ ಸ್ಟಾಪ್ ಸರ್ವೀಸ್ ಸೆಂಟರ್ ಆಗಿ ಮೇಲ್ದರ್ಜೆಗೇರಿಸಲು ತುರ್ತು ಕ್ರಮ, ಪ್ರತಿಯೊಂದು ಪೊಲೀಸ್ ಠಾಣೆ ಹಾಗೂ ಕಚೇರಿಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣಕ್ಕೆ 2 ಕೋಟಿ, ಕೆಎಸ್‍ಪಿ ಮೊಬೈಲ್ ಆ್ಯಪ್ ಮೂಲಕ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ನೀಡಬಹುದಾಗಿದೆ ಎಂದರು.

ಸೈಬರ್ ಅಪರಾಧಗಳನ್ನು ನಿಯಂತ್ರಿಸಲು ಹಾಗೂ ತನಿಖೆಯನ್ನು ಪರಿಣಾಮಕಾರಿಯಾಗಿ ನಡೆಸಲು ಸೈಬರ್ ಪೋರೆನ್ಸಿಕ್ ಪ್ರಯೋಗಾಲಯ ಸ್ಥಾಪನೆ, ಪ್ರತಿ ಜಿಲ್ಲೆ ಮತ್ತು ನಗರಗಳಲ್ಲಿ ಸೈಬರ್ ಎಕನಾಮಿಕ್ ಮತ್ತು ನಾರ್ಕೋಟಿಕ್ ಪೊಲೀಸ್ ಠಾಣೆಗಳನ್ನು ಸ್ಥಾಪನೆ ಮಾಡಿರುವುದಾಗಿ ತಿಳಿಸಿದರು.

ಪೊಲೀಸರು ಮತ್ತು ಅವರ ಸಿಬ್ಬಂದಿಗೆ ವಸತಿ ಸೌಲಭ್ಯ ನೀಡುವ ವಸತಿ ಗೃಹಗಳ ನಿರ್ಮಾಣ ಯೋಜನೆಯನ್ನು ಮುಂದಿನ ವರ್ಷದೊಳಗೆ ಪೂರ್ಣಗೊಳಿಸಲಾಗುವುದು. ಶವ ಸಂಸ್ಕಾರಕ್ಕೆ ಈವರೆಗೆ ನೀಡಲಾಗುತ್ತಿದ್ದ 5 ಸಾವಿರ ಬದಲಿಗೆ 10 ಸಾವಿರ ರೂ. ನೀಡಲಿದೆ. ಸರ್ಕಾರ ಪೊಲೀಸರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಲಿದೆ. ಅದೇ ರೀತಿ ನೀವು ಕೂಡ ಉತ್ತಮವಾಗಿ ಕೆಲಸ ಮಾಡಿ ಎಂದು ಹೇಳಿದರು.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್, ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ಎಂ.ರಾಜು, ಅಪರ ಮುಖ್ಯ ಕಾರ್ಯದರ್ಶಿಗಳಾದ ಡಾ.ರಜನೀಶ್ ಗೋಯಲ್, ಪಿ.ರವಿಕುಮಾರ್, ಹಿರಿಯ ಅಧಿಕಾರಿಗಳಾದ ಎಂ.ಎನ್.ರೆಡ್ಡಿ, ಐ.ಎಂ.ಪ್ರಸಾದ್, ಪ್ರವೀಣ್ ಸೂದ್, ಪಿ.ಕೆ.ಗರ್ಗ್, ರಾಘವೇಂದ್ರ ಔರಾದ್ಕರ್ ಮತ್ತಿತರರು ಇದ್ದರು.

 

Facebook Comments