ಬೆಂಗಳೂರು ಕಸ ವಿಲೇವಾರಿಗೆ 500 ಕೋಟಿ ಮೀಸಲು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.21- ಬೆಂಗಳೂರು ಮಹಾನಗರದಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲು 500 ಕೋಟಿ ಅನುದಾನವನ್ನು ಮೀಸಲಿಡುವಂತೆ ಬಿಬಿಎಂಪಿ ಆಯುಕ್ತರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆ. ನಗರದಲ್ಲಿ ಹೆಚ್ಚುತ್ತಿರುವ ಕಸದ ಸಮಸ್ಯೆ ಕುರಿತಂತೆ ಚರ್ಚಿಸಲು ಗೃಹ ಕಚೇರಿ ಕೃಷ್ಣಾ ದಲ್ಲಿ ಇಂದು ಕರೆಯಲಾಗಿದ್ದ ಸಭೆಯಲ್ಲಿ ಮುಖ್ಯಮಂತ್ರಿಗಳು ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು 500 ಕೋಟಿ ಅನುದಾನ ಮೀಸಲಿಡಬೇಕೆಂದು ಸಭೆಯಲ್ಲಿದ್ದ ಪಾಲಿಕೆ ಆಯುಕ್ತ ಅನಿಲ್‍ಕುಮಾರ್‍ಗೆ ಸೂಚನೆ ಕೊಟ್ಟರು.

ಕಸದ ಸಮಸ್ಯೆ ಬಗ್ಗೆ ಅಧಿಕಾರಿಗಳು ಪ್ರತಿ ವಾರ ತುರ್ತಾಗಿ ಸಭೆ ನಡೆಸಬೇಕು. ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲು ತುರ್ತು ಕ್ರಮ ಕೈಗೊಳ್ಳಬೇಕು. ಕಸದಿಂದ ವಿದ್ಯುತ್ ಉತ್ಪಾದನೆ ಮಾಡಲು ಮುಂದೆ ಬರುವ ಖಾಸಗಿ ಕಂಪೆನಿಗಳಿಗೆ ಉಚಿತವಾಗಿ ಕಸ ನೀಡುವಂತೆ ತಿಳಿಸಿದರು.

ಮಂಡೂರು ಕಸವನ್ನು ಅಲ್ಲಿಯೇ ಕರಗಿಸಲು ವೈಜ್ಞಾನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಿ. ಕಸವನ್ನು ಕರಗಿಸಿ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾದರೆ ಅದಕ್ಕೂಕ್ರಮ ಕೈಗೊಳ್ಳಿ. ಯಾವುದೇ ಕಾರಣಕ್ಕೂ ನಗರದಲ್ಲಿ ಕಸದ ಸಮಸ್ಯೆ ಮರುಕಳಿಸಬಾರದು ಎಂದು ಸಿಎಂ ತಾಕೀತು ಮಾಡಿದರು.

ಕಣ್ಣೂರಿನ ಕಸದಿಂದ ಗ್ರಾಮದ ಬೋರ್‍ವೆಲ್ ನೀರು ಕಲುಷಿತವಾಗಿರುವುದರ ಬಗ್ಗೆ ಗ್ರಾಮಸ್ಥರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಇದರಿಂದ ಇನ್ನಷ್ಟು ಸಿಡಿಮಿಡಿಗೊಂಡ ಸಿಎಂ, ಕಣ್ಣೂರು ಗ್ರಾಮದ ಕುಡಿಯುವ ನೀರಿಗೆ ತಕ್ಷಣವೇ ಹಣ ಬಿಡುಗಡೆಯಾಗಬೇಕು. ಯಾವುದೇ ಕಾರಣಕ್ಕೂ ಇಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಬಾರದು ಮತ್ತು ನೀರು ಕಲುಷಿತವಾಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕು. ಪಾಲಿಕೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದಿದ್ದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಸವನ್ನು ವೈಜ್ಞಾನಿಕ ತಂತ್ರಜ್ಞಾನದಿಂದ ಪೂನಾ, ಮುಂಬೈ ಸೇರಿದಂತೆ ಬೇರೆ ಬೇರೆ ನಗರಗಳಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು. ಇದರಿಂದ ಸಿಟ್ಟಾದ ಬಿಎಸ್‍ವೈ, ಸರ್ಕಾರದ ವತಿಯಿಂದ ಪಾಲಿಕೆಗೆ 8ಸಾವಿರ ಕೋಟಿ ಅನುದಾನ ನೀಡಲಾಗುತ್ತಿದೆ.

ಅಲ್ಲಿ ಹೀಗೆ ಮಾಡಿದ್ದಾರೆ, ಇಲ್ಲಿ ಹೀಗೆ ಮಾಡಿದ್ದಾರೆ ಎನ್ನುವ ಬದಲು ನೀವು ಏನು ಮಾಡೀದ್ದೀರಿ ಎಂಬುದನ್ನು ತಿಳಿಸಿ. ನಾವು ಅನುದಾನ ಕೊಡುವುದು ನಗರದ ಸ್ವಚ್ಛತೆ ಹಾಗೂ ಶುಚಿತ್ವ ಕಾಪಾಡಿಕೊಳ್ಳಲು. ನನಗೆ ಬೇರೆ ಬೇರೆ ಕಾರಣಗಳನ್ನು ಹೇಳಬೇಡಿ ಎಂದರು. ಸಭೆಯಲ್ಲಿ ಮೇಯರ್ ಗೌತಮ್ ಕುಮಾರ್ ಜೈನ್, ಆಯುಕ್ತ ಅನಿಲ್‍ಕುಮಾರ್, ಶಾಸಕ ಅರವಿಂದ ಲಿಂಬಾವಳಿ, ಸಂಸದ ಪಿ.ಸಿ.ಮೋಹನ್ ಮತ್ತಿತರರು ಉಪಸ್ಥಿತರಿದ್ದರು.

Facebook Comments