ಮೈಚಳಿ ಬಿಟ್ಟು ಸಂತ್ರಸ್ತರಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸಿಎಂ ಕಟ್ಟಾಜ್ಞೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.23- ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಉಂಟಾಗಿರುವ ನೆರೆ ಸಮಸ್ಯೆಯನ್ನು ಅಧಿಕಾರಿಗಳು ಮೈ ಚಳಿ ಬಿಟ್ಟು ಸಮರ್ಪಕವಾಗಿ ನಿರ್ವಹಿಸಬೇಕು. ಉದಾಸೀನ ತೋರಿದರೆ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಎಚ್ಚರಿಸಿದ್ದಾರೆ.

ಪ್ರವಾಹ ಪೀಡಿತ ಜಿಲ್ಲೆಗಳಲ್ಲಿನ ಜಿಲ್ಲಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳ ಜತೆ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ವೀಡಿಯೋ ಕಾನ್ಪರೆನ್ಸ್ ನಡೆಸಿದ ಸಿಎಂ, ಅಧಿಕಾರಿಗಳು 24/7 ರೀತಿ ನೆರೆ ಹಾವಳಿಯನ್ನು ನಿರ್ವಹಣೆ ಮಾಡಬೇಕು.

ಯಾವುದೇ ಕಾರಣಕ್ಕೂ ದೀಪಾವಳಿ ಹಬ್ಬಕ್ಕೆ ರಜೆ ಹಾಕಬಾರದು. ಉನ್ನತ ಅಧಿಕಾರಿಗಳು ಕೆಳಹಂತದವರಿಗೆ ರಜೆ ಮಂಜೂರು ಮಾಡಬಾರದು ಎಂದು ಸೂಚನೆ ಕೊಟ್ಟರು. ನಿರೀಕ್ಷೆಗೂ ಮೀರಿದ ನೆರೆ ಹಾವಳಿ ಸಂಭವಿಸಿದೆ. ಕೇವಲ ಎರಡೂವರೆ ತಿಂಗಳ ಅವಧಿಯಲ್ಲಿ ನಾಲ್ಕನೇ ಬಾರಿ ಪ್ರವಾಹ ಉಂಟಾಗಿದೆ.

ನೀವು ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಗುಡುಗಿದರು.

ಪ್ರವಾಹ ಪೀಡಿತ ಸ್ಥಳಗಳಿಗೆ ಕೂಡಲೇ ಅಧಿಕಾರಿಗಳು ತೆರಳಬೇಕು. ತಗ್ಗು ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಬೇಕು. ಜಾನುವಾರುಗಳ ರಕ್ಷಣೆಗೂ ಮೊದಲ ಆದ್ಯತೆ ನೀಡಿ ಎಂದು ಸೂಚಿಸಿದರು. ರಾಜ್ಯದ ಒಟ್ಟು 16 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ.

ವಿಶೇಷವಾಗಿ ಬಾಗಲಕೋಟೆ , ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ಹಾನಿಯಾಗಿದೆ. ಜನ ಮತ್ತು ಜಾನುವಾರುಗಳ ರಕ್ಷಣೆಗೆ ಮೊದಲ ಆದ್ಯತೆ ನೀಡಿ. ಅಗತ್ಯ ಇರುವ ಕಡೆ ಕಾಳಜಿ ಕೇಂದ್ರಗಳನ್ನು ತೆರೆಯಬೇಕೆಂದು ನಿರ್ದೇಶಿಸಿದರು.

ಮನೆ ಕಳೆದುಕೊಂಡವರಿಗೆ ತಕ್ಷಣವಾಗಿ ತಾತ್ಕಲಿಕ ಪರಿಹಾರ ರೂಪದಲ್ಲಿ ಪಾತ್ರೆ, ಇತ್ಯಾದಿ ಸಾಮಾನುಗಳನ್ನು ಖರೀದಿ ಮಾಡಲು 10 ಸಾವಿರ ರೂ., ಶೇ.25ರಷ್ಟು ಮನೆ ಹಾನಿಗೊಳಗಾಗಿದ್ದರೆ 5 ಲಕ್ಷ ಪರಿಹಾರ ಕೊಡಬೇಕು. ಹಿಂದೆ ಯಾವ ರೀತಿ ಪರಿಹಾರ ನೀಡಲಾಗಿತ್ತೋ ಅದೇ ರೀತಿ ಈಗಲೂ ಪರಿಹಾರ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಇರುವ ಹಣವನ್ನು ತಕ್ಷಣಕ್ಕೆ ಪರಿಹಾರ ಕಾರ್ಯಕ್ಕೆ ಬಳಸಿಕೊಳ್ಳಬೇಕು. ವಿಶೇಷವಾಗಿ ಪರಿಹಾರಕ್ಕೆ ನೀಡಲು ಎಷ್ಟು ಹಣ ಬೇಕಾಗಿದೆ ಎಂಬುದನ್ನು ಮುಖ್ಯ ಕಾರ್ಯದರ್ಶಿಗಳಿಗೆ ವರದಿ ನೀಡಿ. ತಕ್ಷಣವೇ ಹಣ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಪ್ರವಾಹದಿಂದಾಗಿ ಈವರೆಗೂ ರಾಜ್ಯದಲ್ಲಿ 13 ಮಂದಿ ಸಾವನ್ನಪ್ಪಿದ್ದು, 150 ಜಾನುವಾರುಗಳು ಕೊಚ್ಚಿ ಹೋಗಿವೆ. 206 ಮನೆಗಳು ಸಂಪೂರ್ಣವಾಗಿ ಕುಸಿದಿದ್ದರೆ, 9832 ಮನೆಗಳು ಭಾಗಶಃ ಕುಸಿದಿವೆ. ಒಟ್ಟು 10,038ಮನೆಗಳು ಹಾನಿಗೊಳಗಾಗಿವೆ. ರಾಜ್ಯದಲ್ಲಿ ಒಟ್ಟು 28 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ, 7220 ಮಂದಿಗೆ ಆಶ್ರಯ ನೀಡಲಾಗಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.

ಮುಂದಿನ 2-3 ದಿನಗಳಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು. ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್, ಅಗ್ನಿಶಾಮಕ ಮತ್ತು ತುರ್ತು ಸೇವಾ ಪಡೆ, ಈಜುಗಾರರು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಬೇಕೆಂದು ತಾಕೀತು ಮಾಡಿದರು.

ಬೆಳಗಾವಿಯಲ್ಲಿ ಎರಡು, ಗದಗ, ಧಾರವಾಡ, ಹಾವೇರಿ, ಬಾಗಲಕೋಟೆಯಲ್ಲಿ ತಲಾ ಒಂದು ಎನ್‍ಡಿಆರ್‍ಎಫ್ ತಂಡ ಹಾಗೂ ರಾಯಚೂರಿನಲ್ಲಿ ಒಂದು ಸೇನಾ ತಂಡ ಪರಿಹಾರ ಕಾರ್ಯದಲ್ಲಿ ತೊಡಗಿವೆ. ಅಧಿಕಾರಿಗಳು ಸಬೂಬು ಹೇಳದೆ ಕೆಲಸ ಮಾಡಬೇಕು. ಸರ್ಕಾರಕ್ಕೆ ಕಪ್ಪು ಚುಕ್ಕಿ ಬಾರದಂತೆ ನಿರ್ವಹಣೆ ಮಾಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸಲಹೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Facebook Comments