ಕಾಟಾಚಾರದ ವೀಡಿಯೋ ಕಾನ್ಫರೆನ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.23- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಪ್ರವಾಹ ಪೀಡಿತ ಪ್ರದೇಶಗಳ ಜಿಲ್ಲಾಧಿಕಾರಿಗಳ ಜತೆ ವೀಡಿಯೋ ಕಾನ್ಫರೆನ್ಸ್ ನಡೆಸಿದ್ದು ಕಾಟಾಚಾರಕ್ಕೆ ಎಂಬಂತಾಯಿತು. ಏಕೆಂದರೆ ಮುಖ್ಯಮಂತ್ರಿಗಳು ಕೇವಲ ಐದು ನಿಮಿಷ ಅಧಿಕಾರಿಗಳ ಜತೆ ವೀಡಿಯೋ ಕಾನ್ಫರೆನ್ಸ್ ನಡೆಸಿ ಆತುರಾತುರವಾಗಿ ಕೊಠಡಿಯಿಂದ ನಿರ್ಗಮಿಸಿದರು.

ಈ ಮೊದಲು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ 12ಗಂಟೆಯಿಂದ 2 ಗಂಟೆವರೆಗೆ ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ವೀಡಿಯೋ ಕಾನ್ಫರೆನ್ಸ್ ನಿಗದಿಯಾಗಿತ್ತು. ಇದಕ್ಕೂ ಮೊದಲು ಬೆಳಗ್ಗೆ 11 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತ್ಯುತ್ಸವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮ ಮುಗಿಸಿಕೊಂಡು ಬಂದ ಸಿಎಂ, ಕೇವಲ ಕಾಟಾಚಾರಕ್ಕೆ ಎಂಬಂತೆ ಐದು ನಿಮಿಷ ವೀಡಿಯೋ ಕಾನ್ಫರೆನ್ಸ್ ನಡೆಸಿ ಪಕ್ಷದ ಕಚೇರಿಗೆ ತೆರಳಿದರು.

ವಾಸ್ತವವಾಗಿ 16 ಜಿಲ್ಲೆಯ ಜಿಲ್ಲಾಧಿಕಾರಿಗಳು ಪ್ರವಾಹದಿಂದ ಎಷ್ಟು ನಷ್ಟವಾಗಿದೆ ಎಂಬುದರ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಲು ಸಂಪೂರ್ಣವಾಗಿ ವರದಿ ಇಟ್ಟುಕೊಂಡಿದ್ದರು. ಆದರೆ, ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್ ಹಾಗೂ ಹಿರಿಯ ಅಧಿಕಾರಿಗಳ ಜತೆ ನೆಪಮಾತ್ರಕ್ಕೆ ಸಭೆ ನಡೆಸಿ ಪ್ರವಾಹ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು
ಸೂಚನೆ ಕೊಟ್ಟು ಪಕ್ಷದ ಕಚೇರಿಗೆ ತೆರಳಿದರು.

ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಸಂಜೆ ಕೋರ್‍ಕಮಿಟಿ ಸಭೆ ನಡೆಯಲಿದ್ದು, ದಕ್ಷಿಣ ಕರ್ನಾಟಕದ 8 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಸಂಬಂಧ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳುವ ಕಾರಣದಿಂದ ಮುಖ್ಯಮಂತ್ರಿಗಳು ಆತುರಾತುರವಾಗಿ ವೀಡಿಯೋ ಕಾನ್ಫರೆನ್ಸ್ ನಡೆಸಿ ಸಭೆಯಿಂದ ನಿರ್ಗಮಿಸಿದ್ದಾರೆ ಎಂಬ ವಿಚಾರಕೇಳಿ ಬರುತಿತ್ತು.

Facebook Comments