“ಹೈಕಮಾಂಡ್ ನನ್ನ ಕೈ ಕಟ್ಟಿಲ್ಲ, ರಾಜ್ಯದ ಅಭಿವೃದ್ಧಿಗೆ ಮುಕ್ತ ಸ್ವಾತಂತ್ರ್ಯ ನೀಡಿದೆ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.30-ನಮ್ಮ ಸರ್ಕಾರದ ಅವಧಿಯಲ್ಲಿ ಟಿಪ್ಪು ಜಯಂತಿಗೆ ಅವಕಾಶ ಕೊಡುವುದಿಲ್ಲ. ಜತೆಗೆ ಟಿಪ್ಪು ಕುರಿತಂತೆ ಪಠ್ಯ ಪುಸ್ತಕದಲ್ಲಿರುವ ಪಾಠಗಳನ್ನು ಹಿಂಪಡೆಯುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ನಗರದ ಪ್ರೆಸ್‍ಕ್ಲಬ್‍ನಲ್ಲಿಂದು ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಟಿಪ್ಪು ಜಯಂತಿ ಆಚರಣೆಗೆ ಶೇ.100ಕ್ಕೆ 101ರಷ್ಟು ಅವಕಾಶ ನೀಡುವುದಿಲ್ಲ. ಪಠ್ಯದಲ್ಲಿರುವ ಟಿಪ್ಪು ಕುರಿತಾದ ಮಾಹಿತಿಗಳನ್ನು ವಾಪಸ್ ಪಡೆಯಲು ಚಿಂತನೆ ನಡೆಸಲಾಗುವುದು.

ನಮ್ಮ ಪಕ್ಷ ಟಿಪ್ಪುವನ್ನು ವಿರೋಧ ಮಾಡಿದೆ. ಅವರಿಗೆ ಸಂಬಂಧಪಟ್ಟಂತೆ ಎಲ್ಲಾ ವಿಷಯಗಳನ್ನು ನಾವು ವಿರೋಧಿಸುವುದು ಖಚಿತ ಎಂದರು. ಬಿಜೆಪಿ ರಾಷ್ಟ್ರೀಯ ನಾಯಕತ್ವ ನನ್ನನ್ನು ಕಟ್ಟಿಹಾಕುವ ಪ್ರಯತ್ನ ಮಾಡುತ್ತಿದೆ ಎಂಬುದು ತಪ್ಪು ಮಾಹಿತಿ. ರಾಷ್ಟ್ರೀಯ ಪಕ್ಷವಾಗಿ ಎಲ್ಲಾ ಮುಖ್ಯಮಂತ್ರಿಗಳು ಇತಿಮಿತಿಯಲ್ಲಿರಬೇಕು ಎಂಬುದು ಸಹಜ. ಈವರೆಗೂ ನಾನು ಮುಖ್ಯಮಂತ್ರಿಯಾಗಿ ತೆಗೆದುಕೊಂಡ ಯಾವ ನಿರ್ಧಾರಗಳನ್ನು ರಾಷ್ಟ್ರೀಯ ನಾಯಕರು ವಿರೋಧಿಸಿಲ್ಲ. ನನಗೆ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.

ನಾನು ನನ್ನ ಶಕ್ತಿ ಮೀರಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಒಂದೆಡೆ ನೆರೆಯಿಂದ ಆಗಿರುವ ನಷ್ಟ. ಮತ್ತೊಂದೆಡೆ ಸಾಲ ಮನ್ನಾದ ಹೊರೆ, ಎರಡನ್ನೂ ನಿಭಾಯಿಸಿ ಅಭಿವೃದ್ಧಿಗೆ ಒತ್ತು ಕೊಡಲು ಪ್ರಯತ್ನಿಸುತ್ತಿದ್ದೇನೆ. ನೆರೆ ಸಂತ್ರಸ್ತರಿಗೂ ಸರ್ಕಾರ ಸ್ಪಂದಿಸಿದೆ ಎಂದರು.

ಆಡಳಿತಾತ್ಮಕತೆ ಮತ್ತು ಪಕ್ಷದ ಸಂಘಟನಾತ್ಮಕ ದೃಷ್ಟಿಯಿಂದ ಕೆಲವು ನೆಮಕಾತಿಗಳು ಅನಿವಾರ್ಯವಾಗಿವೆ. ಮೂರು ಜನ ಉಪಮುಖ್ಯಮಂತ್ರಿಗಳನ್ನಾಗಿ ಮಾಡುವುದು ರಾಷ್ಟ್ರೀಯ ನಾಯಕರ ನಿರ್ಧಾರ. ರಾಜಕೀಯ ಕಾರ್ಯದರ್ಶಿಗಳು, ಸಲಹೆಗಾರರು ಆಡಳಿತಾತ್ಮಕವಾಗಿ ಅಗತ್ಯವಿದ್ದಾರೆ ಎಂದರಲ್ಲದೆ, ನೇಮಕಾತಿಯಲ್ಲಿ ನಾವು ಹೊಸ ಸಂಪ್ರದಾಯವನ್ನು ಹುಟ್ಟುಹಾಕಿಲ್ಲ. ಈ ಮೊದಲಿದ್ದ ಸಂಪ್ರದಾಯಗಳನ್ನೇ ಮುಂದುವರೆಸಿದ್ದೇವೆ ಎಂದು ಹೇಳಿದರು.

ನ.2ಕ್ಕೆ ನಮ್ಮ ಸರ್ಕಾರ ರಚನೆಯಾಗಿ ನೂರು ದಿನ ಕಳೆಯುತ್ತಿದೆ. ಶತ ದಿನೋತ್ಸವದಲ್ಲಿ ಸಂಭ್ರಮವಿದೆ. ನಮಗೆ ಯಾವ ಸಮಸ್ಯೆಗಳೂ ಇಲ್ಲ. ಹೈಕಮಾಂಡ್ ನನಗೆ ಸಂಪೂರ್ಣ ಸಹಕಾರ ನೀಡುತ್ತಿದೆ. ಮುಂದಿನ ಮೂರೂವರೆ ವರ್ಷ ಕಾಲ ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸದ್ಯಕ್ಕೆ ನಮ್ಮ ಮುಂದೆ ಉಪ ಚುನಾವಣೆಗಳು ಇವೆ. ಕನಿಷ್ಠ 13 ಸ್ಥಾನ ಗೆಲ್ಲುವುದು ನಮ್ಮ ಉದ್ದೇಶ. 15ಕ್ಕೆ 15 ಗೆಲ್ಲುವ ಗುರಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು.
ಅನರ್ಹ ಶಾಸಕರ ಕುರಿತಂತೆ ಈವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಸುಪ್ರೀಂಕೋರ್ಟ್‍ನ ತೀರ್ಪು ಪ್ರಕಟಗೊಂಡ ಬಳಿಕ ರಾಷ್ಟ್ರೀಯ ನಾಯಕತ್ವದೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಸರ್ಕಾರ ಪತನಗೊಳ್ಳಲು ಬಿಡುವುದಿಲ್ಲ. ಅವಧಿ ಪೂರ್ಣಗೊಳಿಸಲು ಸಹಕರಿಸುತ್ತೇನೆ ಎಂದು ನೀಡಿರುವ ಹೇಳಿಕೆಗೆ ನೇರವಾಗಿ ಉತ್ತರಿಸದೆ ಅಂತಹ ಸಮಯ ಬಂದಾಗ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಪ್ತರೊಂದಿಗೆ ಮಾತನಾಡುವಾಗ ಲಿಂಗಾಯಿತರು ಯಡಿಯೂರಪ್ಪರಿಂದ ದೂರವಾಗಿದ್ದಾರೆ ಎಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯದ ಮುಖ್ಯಮಂತ್ರಿಯಾಗಿರುವ ನನ್ನ ಜತೆ ಎಲ್ಲಾ ಸಮುದಾಯಗಳು ಇವೆ ಎಂದು ಯಡಿಯೂರಪ್ಪ ಉತ್ತರಿಸಿದರು. ರಾಜ್ಯದ ಹಣಕಾಸು ಸ್ಥಿತಿ ಉತ್ತಮವಾಗಿದೆ. ಸಂಪನ್ಮೂಲ ಕ್ರೂಢೀಕರಣ ಚೆನ್ನಾಗಿದೆ. ಆಡಳಿತಾತ್ಮಕವಾಗಿ ಕೆಲವೊಂದು ವರ್ಗಾವಣೆಗಳಾಗಿವೆ. ಅವುಗಳ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ ಎಂದರು.

ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ಪಾರದರ್ಶಕ ಅನುಸರಿಸಲಾಗಿದೆ. 64 ಮಂದಿಯ ಹಸರಿನಲ್ಲಿ ಒಂದೆರಡು ಹೊರತುಪಡಿಸಿದರೆ ಉಳಿದೆಲ್ಲಾ ಅರ್ಹರಿಗೂ ಪ್ರಶಸ್ತಿ ಘೋಷಿಸಲಾಗಿದೆ ಎಂದು ಹೇಳಿದರು. ಬೆಂಗಳೂರಿನ ತ್ಯಾಜ್ಯ ವಿಲೇವಾರಿ ಸಮಸ್ಯೆಯ ಬಗ್ಗೆ ಗಂಭೀರ ಚಿಂತನೆ ನಡೆದಿದೆ. ತ್ಯಾಜ್ಯವನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆ ಮಾಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ.

ಬೆಂಗಳೂರಿನ ರಸ್ತೆ ಅಭಿವೃದ್ಧಿ ಪಡಿಸುವುದರ ಜತೆಗೆ ಅಂತಾರಾಷ್ಟ್ರೀಯ ಖ್ಯಾತಿಯ ನಗರದ ಚಿತ್ರಣವನ್ನು ಬದಲಾವಣೆ ಮಾಡಲು ಪ್ರಯತ್ನ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಂದಿನ ವಿಧಾನಸಭೆ ಅಧಿವೇಶನಕ್ಕೆ ಮಾಧ್ಯಮಗಳ ಕ್ಯಾಮೆರಾಗಳನ್ನು ನಿರ್ಬಂಧಿಸದೆ ಈ ಮೊದಲಿನಂತೆ ಯಥಾಸ್ಥಿತಿ ಕಾಪಾಡಿಕೊಳ್ಳಲು ಸ್ಪೀಕರ್ ಅವರ ಜತೆ ಮಾತುಕತೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ ಎಂದರು.

Facebook Comments